Advertisement

Manipal: ಕೇಂದ್ರ ಸರಕಾರದ ಯೋಜನೆ ಫ‌ಲಾನುಭವಿಗಳಿಗೆ ಸಾಲ ನೀಡಲು ಸತಾಯಿಸಬೇಡಿ: ಸಂಸದ ಕೋಟ

02:39 AM Dec 22, 2024 | Team Udayavani |

ಮಣಿಪಾಲ: ಕೇಂದ್ರ ಸರಕಾರ ಪಿ.ಎಂ. ಸ್ವನಿಧಿ, ವಿಶ್ವಕರ್ಮ ಮೊದಲಾದ ಯೋಜನೆಯ ಫ‌ಲಾನುಭವಿಗಳು ಸಾಲಕ್ಕೆ ಅರ್ಜಿ ಸಲ್ಲಿಸಿದಾಗ ಅವರನ್ನು ಬ್ಯಾಂಕ್‌ ಅಧಿಕಾರಿಗಳು ಸತಾಯಿಸುವುದು, ಅವರೊಂದಿಗೆ ಕಟುವಾಗಿ ವರ್ತಿಸುವುದು ಸರಿಯಲ್ಲ. ಇದು ಬಡವರಿಗಾಗಿಯೇ ಇರುವ ಯೋಜನೆ. ವಿನಾಕಾರಣ ಅರ್ಜಿಯನ್ನು ತಿರಸ್ಕರಿಸಬಾರದು. ಕನ್ನಡದಲ್ಲೇ ಮಾಹಿತಿ ನೀಡುವ ವ್ಯವಸ್ಥೆಯನ್ನೂ ಮಾಡಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಡಾ| ವಿ.ಎಸ್‌. ಆಚಾರ್ಯ ಸಭಾಂಗಣ ದಲ್ಲಿ ಶನಿವಾರ ಜರಗಿದ ಬ್ಯಾಂಕರ್‌ಗಳ ಸಭೆ ಮತ್ತು ಕೇಂದ್ರ ಸರಕಾರದ ಯೋಜನೆಗಳ ಪ್ರಗತಿ ಪರಿಶೀಲನೆಯ ಸಭೆಯಲ್ಲಿ  ಮಾತನಾಡಿದರು. ಪಿಎಂ ವಿಶ್ವಕರ್ಮ ಯೋಜನೆಗೆ ಸಂಬಂಧಿಸಿ ಬ್ಯಾಂಕ್‌ಗಳು ತಿರಸ್ಕರಿಸಿರುವ ಪಟ್ಟಿಯನ್ನು ನಮಗೆ ನೀಡಬೇಕು ಮತ್ತು ಯಾವ ಕಾರಣಕ್ಕೆ ತಿರಸ್ಕರಿಸಲಾಗಿದೆ ಎಂಬದನ್ನು ಸ್ಪಷ್ಟವಾಗಿ ತಿಳಿಸಬೇಕು. ಕೋವಿಡ್‌ ಅವಧಿಯ ಬ್ಯಾಂಕ್‌ ಸಾಲ ಪಾವತಿ ಸಮಸ್ಯೆಗೂ ಇದಕ್ಕೂಸಂಬಂಧ ಕಲ್ಪಿಸಬಾರದು ಎಂದರು.

ದುಬಾರಿ ಸ್ಟಾಂಪ್‌ ಪೇಪರ್‌ ಸಲ್ಲದು
ಕೆಲವು ಬ್ಯಾಂಕ್‌ಗಳು ಸ್ಟಾಂಪ್‌ ಪೇಪರ್‌ಗೆ ದುಬಾರಿ ದರ ನಿಗದಿ ಮಾಡಿರುವ ಬಗ್ಗೆ ದೂರುಗಳು ಬಂದಿವೆ. ಸ್ಟಾಂಪ್‌ ಪೇಪರ್‌ ಬೆಲೆ 500 ರೂ. ಇದ್ದರೂ 2 ಸಾ. ರೂ. ಪಡೆಯಲಾಗುತ್ತಿರುವ ಬಗ್ಗೆ ಅನೇಕರು ಲಿಖಿತ ದೂರು ನೀಡಿದ್ದಾರೆ. ಈ ಬಗ್ಗೆ ತತ್‌ಕ್ಷಣವೇ ಕ್ರಮ ತೆಗೆದುಕೊಳ್ಳಬೇಕು ಎಂದು ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ಗೆ ಸೂಚಿಸಿದರು. 500 ರೂ. ಮುಖಬೆಲೆಯ ಸ್ಟಾಂಪ್‌ ಪೇಪರ್‌ ಮಾತ್ರ ತೆಗೆದುಕೊಳ್ಳಲು ಸೂಚನೆ ನೀಡಲಾಗುವುದು ಎಂದು ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಹೇಳಿದರು.

ಸಾಲ ಠೇವಣಿ ಅನುಪಾತ ಸುಧಾರಣೆ

ಕೆನರಾ ಬ್ಯಾಂಕ್‌ ಉಡುಪಿ ಪ್ರಾದೇಶಿಕ ಕಚೇರಿಯ ಎಜಿಎಂ ಶ್ರೀಜಿತ್‌ ಕೆ. ಮಾತನಾಡಿ, ಜಿಲ್ಲೆಯ ಸಾಲ-ಠೇವಣಿ ಅನುಪಾತ(ಸಿಡಿ ರೇಶಿಯೋ) ಸುಧಾ ರಣೆಯಾಗುತ್ತಿದೆ ಎಂದರು. ಜಿಪಂ ಸಿಇಒ ಪ್ರತೀಕ್‌ ಬಾಯಲ್‌ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸಿಪಿಒ ಡಾ.ಉದಯ ಶೆಟ್ಟಿ, ಆರ್‌ಬಿಐ ಬೆಂಗಳೂರು ಮ್ಯಾನೇಜರ್‌ ವೆಂಕಟರಮಣಯ್ಯ ಟಿ.ಎನ್‌. ಉಪಸ್ಥಿತರಿದ್ದರು. ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಹರೀಶ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next