ಮಣಿಪಾಲ: ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿರುವ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಚಿಕಿತ್ಸೆ ಇನ್ನೂ ಬಹಳ ಸಮಯ ಬೇಕಾಗುತ್ತದೆ ಎಂದು ಮಣಿಪಾಲ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಹೇಳಿದ್ದಾರೆ.
ಪೇಜಾವರ ಶ್ರೀಗಳ ಆರೋಗ್ಯದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಾ. ಅವಿನಾಶ್ ಶೆಟ್ಟಿ ಮತ್ತು ವೈದ್ಯರ ತಂಡ, ಸ್ವಾಮೀಜಿಗೆ ಮೀಜಿ ಗೆ ನಡೆಸಬೇಕಾದ ಎಲ್ಲಾ ಪರೀಕ್ಷೆ ನಡೆಸಲಾಗಿದೆ. ಪ್ರತಿನಿತ್ಯ ಸಣ್ಣ ಪರೀಕ್ಷೆಗಳು ನಡೆಯುತ್ತಿವೆ. ಶ್ರೀಗಳ ಆರೋಗ್ಯ ಸ್ಥಿತಿ ಗಂಭೀರವಾಗಿದೆ, ಆದರೆ ಸ್ಥಿರವಾಗಿದೆ. ಸರಿಯಾಗಲು ಇನ್ನಷ್ಟು ಸಮಯ ಬೇಕಾಗಬಹುದು ಎಂದರು.
ಶ್ರೀಗಳಿಗೆ ನ್ಯೂಮೋನಿಯಾ ಆಗಿದೆ. ಶ್ವಾಸಕೋಶದಲ್ಲಿ ಸೋಂಕು ಆಗಿದೆ. ಮೊದಲನೇ ದಿನಕ್ಕೆ ಹೋಲಿಸಿದಾಗ ಪರ್ವಾಗಿಲ್ಲ. ಇನ್ನಷ್ಟು ಚೇತರಿಸಿಕೊಳ್ಳುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಫದ ಪ್ರಮಾಣ ಕಡಿಮೆಯಾಗ್ತಿದೆ. ಉಸಿರಾಡಲು ಪ್ರಯತ್ನಿಸುತ್ತಿದ್ದಾರೆ. ಚಿಕಿತ್ಸೆಗೆ ದೇಹ ಸ್ಪಂದಿಸುತ್ತಿದೆ. ಚಿಕಿತ್ಸೆ ಇನ್ನೂ ಬಹಳ ಸಮಯ ಬೇಕಾಗುತ್ತೆ. ವಯಸ್ಸಾದ ಕಾರಣ ತುಂಬಾ ಸಮಯ ಬೇಕಾಗುತ್ತೆ. ವೆಂಟಿಲೇಟರ್ ನಲ್ಲಿ ಇನ್ನೂ ಸಾಕಷ್ಟು ಸಮಯ ಇರಿಸ ಬೇಕಾಗಬಹುದು ಎಂದರು.
ಪೇಜಾವರಶ್ರೀ ಗಳಿಗೆ ಯಾರು ಡಿಸ್ಟರ್ಬ್ ಮಾಡಬೇಡಿ ಎಂದು ಮನವಿ ಮಾಡಿದ ವೈದ್ಯರು, ವಿಐಪಿ ಭಕ್ತರು ಆಸ್ಪತ್ರೆಗೆ ಬಾರದಿದ್ದರೆ ಒಳಿತು. ಗಣ್ಯರು ಬಂದಾಗಲೆಲ್ಲಾ ಐಸಿಯು ಬಾಗಿಲು ತೆರೆಯಬೇಕಾಗುತ್ತದೆ. ಇದರಿಂದ ವೈದ್ಯರ ಚಿಕಿತ್ಸೆಗೆ ಅಡ್ಡಿಯಾಗುತ್ತದೆ ಎಂದರು.
ಮಣಿಪಾಲ ಆಸ್ಪತ್ರೆಯಲ್ಲಿ ಆರು ಜನರ ತಜ್ಞ ವೈದ್ಯರ ತಂಡದಿಂದ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರಿನ ತಜ್ಞ ವೈದ್ಯರ ತಂಡವೂ ಚಿಕಿತ್ಸೆ ನೀಡಿದೆ. ಹೊಸದಿಲ್ಲಿಯ ಏಮ್ಸ್ ನ ವೈದ್ಯರ ತಂಡ ನಿರಂತರ ಸಂಪರ್ಕದಲ್ಲಿದೆ. ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ವೈದ್ಯರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ ಎಂದರು.