Advertisement

ಮಣಿಪಾಲ: ಬರೀ ಬೋಳು ಗುಡ್ಡವಾಗಿತ್ತು

10:17 AM Jan 02, 2020 | mahesh |

ಮಟ್ಟದ ಪತ್ರಿಕೆಗಳಿಗೆಲ್ಲ ರಾಜಧಾನಿ ಬೆಂಗಳೂರೇ ತವರುಮನೆಯಾಗಿದ್ದ ಕಾಲದಲ್ಲಿ “ಉದಯವಾಣಿ’ ಮಣಿಪಾಲವೆಂಬ ಬೋಳು ಗುಡ್ಡದಲ್ಲಿ ಅರಳಿದ ಕತೆಯೇ ಅತ್ಯಂತ ರೋಚಕ.

Advertisement

ಅಂದಿನ ಮಣಿಪಾಲವೆಂದರೆ ಬರೀ ಕಪ್ಪು ಮುರಕಲ್ಲು, ಕಾಲಿಗೆ ಚುಚ್ಚುವ ಅಜ್ಜಿ ಮುಳ್ಳು. ಜತೆಗೆ “ಕುಂಡಾಲ್‌ ಕಾಡು’ ಎಂಬ ಭಯಾನಕ ಅರಣ್ಯ. ಹುಲಿ, ಚಿರತೆ, ಕತ್ತೆ ಕಿರುಬಗಳ ಸಾಮ್ರಾಜ್ಯ. ಹುಲಿ ಬಂದು ಕುಳಿತುಕೊಳ್ಳುತ್ತಿದ್ದ ಜಾಗವೇ ಇಂದಿನ “ಟೈಗರ್‌ ಸರ್ಕಲ್‌’.

ಅಂದಿಗೂ ಇಂದಿಗೂ ಕೊಂಡಿ
ದೇಶದಲ್ಲೇ ಪ್ರಸಿದ್ಧಿ ಪಡೆದ ಕೆಎಂಸಿ ಆಸ್ಪತ್ರೆ, ಪಿಗ್ಮಿ ಜಗತ್ತನ್ನು ಶೋಧಿಸಿದ ಸಿಂಡಿಕೇಟ್‌ ಬ್ಯಾಂಕ್‌, ಮುದ್ರಣ ಲೋಕದ ದೊರೆ ಪವರ್‌ ಪ್ರಸ್‌, ಎಂಜಿನಿಯರಿಂಗ್‌ ಕಾಲೇಜ್‌, ಪ್ರಾಥಮಿಕ ಶಾಲೆ, ಗೀತಾ ಮಂದಿರ… ಇವೆಲ್ಲ ಪ್ರಾಚೀನ ಹಾಗೂ ಆಧುನಿಕ ಮಣಿಪಾಲದೊಂದಿಗೆ ಬೆಸೆದ ಕೊಂಡಿಗಳು.

ಇಂದಿನ ಸ್ಮತಿ ಭವನ ಮಣಿಪಾಲದ ಶಿಲ್ಪಿ ಮಾಧವ ಪೈ ಅವರ ನಿವಾಸವಾಗಿತ್ತು. ಈಗಿನ ಪರ್ಕಳ ಬಸ್ಸು ನಿಲ್ಲುವ ನಿಲ್ದಾಣದ ಹಿಂದೆ ಮಣಿಪಾಲ್‌ ಹೈಸ್ಕೂಲ್‌ ಇತ್ತು. ಈಗ ಮಾಧವ ಕೃಪ ಶಾಲೆ ಇದ್ದಲ್ಲಿ ಮಣಿಪಾಲ ಆಸ್ಪತ್ರೆ ಮೊದಲು ಕಾರ್ಯಾರಂಭ ಮಾಡಿತ್ತು. ಮೊದಲ ಹಂತದಲ್ಲಿ ಜನರಲ್‌ ಮೆಡಿಸಿನ್‌ ಮತ್ತು ಮೆಟರ್ನಿಟಿ ವಾರ್ಡ್‌ ಇದ್ದವು. ಇಂದಿನ “ಅನ್ನಪೂರ್ಣ ಹೊಟೇಲ್‌’ ಇರುವ ಕಟ್ಟಡ ಅಂದಿನ ಕೆಎಂಸಿ ಲೇಡಿಸ್‌ ಹಾಸ್ಟೆಲ್‌. ಈಗಿನ “ಗ್ರೀನ್‌ಪಾರ್ಕ್‌ ಹೊಟೇಲ್‌’ ಇರುವಲ್ಲಿ ಅಕಾಡೆಮಿ ಆಫೀಸ್‌ ಕಾರ್ಯಾಚರಿಸುತ್ತಿತ್ತು.

ವೈದ್ಯಕೀಯ ವಿದ್ಯಾರ್ಥಿಗಳ ಸಮವಸ್ತ್ರಕ್ಕೆ ಮಾಡರ್ನ್ ಕ್ಲೋತ್‌ ಸ್ಟೋರ್ ಹೆಸರುವಾಸಿ. ಜತೆಗೆ ಕುಡ್ಡು ಮಡಿವಾಳ ದಂಪತಿಯ ದೋಬಿ ಅಂಗಡಿ “ಮಣಿಪಾಲ್‌ ಡ್ರೈ ಕ್ಲೀನರ್’ ಕೂಡ.

Advertisement

ಉಡುಪಿ-ಮಣಿಪಾಲ 10 ಪೈಸೆ
ಮಣಿಪಾಲದ ಅಂದಿನ ಸಾರಿಗೆ ವ್ಯವಸ್ಥೆ ಸೀಮಿತ. ಸಿಪಿಸಿ ಮತ್ತು ಶಂಕರ್‌ ವಿಠ್ಠಲ್‌ ಸಂಸ್ಥೆಯ ಕೆಲವೇ ಬಸ್ಸುಗಳು ಓಡಾಡುತ್ತಿದ್ದವು. “ವೆಸ್ಟ್‌ ಕೋಸ್ಟ್‌’ ಆರಂಭಿಕ ದಿನಗಳ ಮೊದಲ ಸಿಟಿ ಬಸ್ಸು. ರಾತ್ರಿ 7 ಗಂಟೆಗೆಲ್ಲ ಬಸ್‌ ಸಂಚಾರ ಬಂದ್‌. ಉಡುಪಿ-ಮಣಿಪಾಲ ನಡುವೆ ಟಿಕೆಟ್‌ ದರ 10 ಪೈಸೆ. ಎಂಜಿಎಂಗೆ 5 ಪೈಸೆ ದರ! ರಿಕ್ಷಾಗಳಿಗೆ ಆಗ ಪರವಾನಿಗೆ ಇರಲಿಲ್ಲ. ಬಾಡಿಗೆ ಕಾರುಗಳು ಸಾಕಷ್ಟಿದ್ದವು. 25 ಪೈಸೆಗೆ ಜನರನ್ನು ಕರೆಯುತ್ತ ಇವು ಟ್ರಿಪ್‌ ಹೊಡೆಯುತ್ತಿದ್ದವು. ಬಾಡಿಗೆ ಆ್ಯಂಬುಲೆನ್ಸ್‌ ಸೇವೆ ಕೂಡ ಆಗ ಇರಲಿಲ್ಲ. ಬಾಡಿಗೆ ಕಾರುಗಳಲ್ಲೇ ಶವಗಳನ್ನು ಸಾಗಿಸಬೇಕಾದ ಪರಿಸ್ಥಿತಿ.

ಪ್ರವಾಸಿಗಳ ಆಕರ್ಷಣೆ, ಹಂಚಿನ ಕಾರ್ಖಾನೆ!
ಇಂದು “ಇಂಟರ್‌ನ್ಯಾಶನಲ್‌ ಸಿಟಿ’ಯಾಗಿರುವ ಮಣಿಪಾಲಕ್ಕೆ ಎಲ್ಲರೂ ಪ್ರವಾಸ ಬರುವುದು ಮಾಮೂಲು. ಆದರೆ ಆ “ಬೆಂಗಾಡಿನ ದಿನ’ದಲ್ಲೂ ಮಣಿಪಾಲ ಪ್ರವಾಸಿ ತಾಣವಾಗಿತ್ತು. ಉಡುಪಿಯ ಆಸುಪಾಸಿನಿಂದ ವಿದ್ಯಾರ್ಥಿಗಳು ಇಲ್ಲಿಗೆ ಆಗಮಿಸುತ್ತಿದ್ದರು. ಪ್ರೇಕ್ಷಣೀಯ ತಾಣಗಳೆಂದರೆ ಹಂಚಿನ ಕಾರ್ಖಾನೆ ಮತ್ತು ಇದರ ಪಕ್ಕದಲ್ಲೇ ಇರುವ ಕೈಮಗ್ಗದ ಕಾರ್ಖಾನೆ! ಇವೆರಡೂ ಇಂದಿನ “ಉದಯವಾಣಿ ರಸ್ತೆ’ಯ ಕೊನೆಯಲ್ಲಿದ್ದವು. ಆ ಹಂಚಿನ ಕಾರ್ಖಾನೆಯ ಜಾಗದಲ್ಲೀಗ ಕಲಾತ್ಮಕ “ಮಣಿಪಾಲ್‌ ಹೌಸಿಂಗ್‌ ಕಾರ್ಪೊರೇಶನ್‌’ ಕಟ್ಟಡವಿದೆ. ನೇಕಾರರ “ವೀವರ್ ಕ್ವಾಟರ್’ ಈಗಲೂ ಇದೆ. ಆದರೆ “ಮಣಿಪಾಲ’ದ ಹುಟ್ಟಿಗೆ ಕಾರಣವಾದ “ಮಣ್ಣ ಪಳ್ಳ’ದತ್ತ ಸುಳಿಯುತ್ತಿದ್ದವರು ಕಡಿಮೆ. ಇಂದಿನ “ಎಂಡ್‌ ಪಾಯಿಂಟ್‌’ ಅಂದು ಈ ಹೆಸರನ್ನೇ ಪಡೆದಿರಲಿಲ್ಲ. ಅದು ಕಾಡಿನ ಒಂದು ಭಾಗವಾಗಿತ್ತು, ಅಷ್ಟೇ.

ಆಂಗ್ಲ ಪತ್ರಿಕೆಗಳೇ ಹೆಚ್ಚು
ಮಣಿಪಾಲದಲ್ಲಿ ಹೊರ ರಾಜ್ಯದ ಮಂದಿ ಅಧಿಕ ಸಂಖ್ಯೆಯಲ್ಲಿರುವು ದರಿಂದ ಆಂಗ್ಲ ಪತ್ರಿಕೆಗಳ ಮಾರಾಟವೇ ಹೆಚ್ಚು. ಇಂದಿಗೂ ಅದು ಬದಲಾಗಿಲ್ಲ. ಮಣಿಪಾಲ್‌ ನ್ಯೂಸ್‌ ಏಜೆನ್ಸಿ, ಪ್ರಭು ನ್ಯೂಸ್‌ ಏಜೆನ್ಸಿ ಓದುಗರ ಹಸಿವನ್ನು ತಣಿಸುತ್ತಿದ್ದವು. ಬದಲಾಗುತ್ತಿರುವ ಕಾಲಗತಿಗೆ ತಕ್ಕಂತೆ ಮಣಿಪಾಲವೂ ಬದಲಾಗಿದೆ. ಆದರೆ ನಿಧಾನ ಗತಿಯಲ್ಲಲ್ಲ, ಎಕ್ಸ್‌ಪ್ರೆಸ್‌ ವೇಗದಲ್ಲಿ!

 ಇಂದಿನ ಸ್ಮತಿ ಭವನ ಮಣಿಪಾಲದ
ಶಿಲ್ಪಿ ಮಾಧವ ಪೈ ಅವರ ನಿವಾಸ.
 ಹುಲಿ ಬಂದು ಕೂರುತ್ತಿದ್ದ, ಕೂಗುತ್ತಿದ್ದ ಜಾಗವೇ ಇಂದಿನ ಟೈಗರ್‌ ಸರ್ಕಲ್‌.
 ಈಗಿನ ಮಾಧವ ಕೃಪಾ ಜಾಗದಲ್ಲಿ ಮೊದಲು ಮಣಿಪಾಲ ಆಸ್ಪತ್ರೆ ಕಾರ್ಯಾರಂಭ.
 ಉಡುಪಿ-ಮಣಿಪಾಲ ನಡುವಿನ ಅಂದಿನ ಸಿಟಿ ಬಸ್‌ ದರ ಹತ್ತು ಪೈಸೆ ಮಾತ್ರ.

  ಎಚ್‌. ಪ್ರೇಮಾನಂದ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next