Advertisement

Manipal; ಮಳೆ ನೀರು ಕೊಯ್ಲು ಕಾರ್ಯಾಗಾರಕ್ಕೆ ಡಿಸಿ ಡಾ|ವಿದ್ಯಾಕುಮಾರಿ ಚಾಲನೆ

12:58 AM Mar 03, 2024 | Team Udayavani |

ಮಣಿಪಾಲ: ಭವಿಷ್ಯದಲ್ಲಿ ನೀರಿನ ಕೊರತೆ ಗಂಭೀರವಾಗಿ ಪರಿಣಮಿಸಲಿದ್ದು, ಮಳೆಗಾಲದಲ್ಲಿ ಬೀಳುವ ಮಳೆಯ ನೀರನ್ನು ಸಂಗ್ರಹಿಸಿ ಉಪಯೋಗಿಸುವ “ಮಳೆ ನೀರು ಕೊಯ್ಲು’ ಪದ್ಧತಿಯನ್ನು ಅಳವಡಿಸುವ ಜನಾಂದೋಲನ ಜಿಲ್ಲೆಯಾದ್ಯಂತ ನಡೆಯಲಿ ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಕರೆ ನೀಡಿದರು.

Advertisement

ಜಿಲ್ಲಾಡಳಿತ, ಜಿ.ಪಂ. ಸಹಯೋಗದಲ್ಲಿ “ಉದಯವಾಣಿ’ಯು ಆಯೋಜಿಸಿದ ಮಳೆ ನೀರು ಕೊಯ್ಲು ಕಾರ್ಯಾ ಗಾರವನ್ನು ಶನಿವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಸಮುದ್ರತೀರದ ಜಿಲ್ಲೆ ಇದು. 4,000 ಮಿ.ಮೀ. ಮಳೆ ಸುರಿಯುತ್ತಿದೆ. 16 ನದಿಗಳು ಹರಿಯುತ್ತಿವೆ. ಇಷ್ಟಾಗಿಯೂ ಕುಡಿಯುವ ನೀರಿನ ಸಮಸ್ಯೆ ಇದಿರಾಗುತ್ತಿದೆ. ವಾರಾಹಿ ಅಣೆಕಟ್ಟಿನ ಸಾಮರ್ಥ್ಯ 33 ಟಿಎಂಸಿ ನೀರು. ಕಳೆದ ಮಳೆಗಾಲದಲ್ಲಿ ಸಂಗ್ರಹವಾದದ್ದು 9 ಟಿಎಂಸಿ. ಇದಕ್ಕೆ ಅಂತರ್ಜಲ ಮಟ್ಟ ಕುಸಿಯುತ್ತಿರುವುದು ಮೂಲ ಕಾರಣ. ಇದೇ ಪರಿಸ್ಥಿತಿ ಮುಂದುವರಿದರೆ ಎಪ್ರಿಲ್‌, ಮೇಯಲ್ಲಿ ಉಂಟಾಗುವ ನೀರಿನ ಕೊರತೆ ಡಿಸೆಂಬರ್‌, ಜನವರಿಯಲ್ಲಿಯೇ ಇದಿರಾಗಬಹುದು. 15 ವರ್ಷಗಳ ಹಿಂದೆಯೇ ಮಳೆ ನೀರು ಕೊಯ್ಲು ಪದ್ಧತಿಯನ್ನು ಅಳವಡಿಸಿದ್ದರೆ ಈಗ ನೀರಿನ ಸಮಸ್ಯೆ ಇಷ್ಟು ಗಂಭೀರವಾಗಿ ಆಗುತ್ತಿರಲಿಲ್ಲ. ನಮ್ಮ ಮುಂದಿನ ಪೀಳಿಗೆಯನ್ನು ಗಮನಿಸಿ ನಾವು ಈಗಲೇ ಸಮಸ್ಯೆಯ ಗಂಭೀರತೆಯನ್ನು ಅರ್ಥ ಮಾಡಿಕೊಂಡು ಮಳೆ ನೀರು ಸಂಗ್ರಹಕ್ಕೆ ಆದ್ಯತೆ ಕೊಡಬೇಕು. ಪೋಲಾಗದಂತೆ ನೋಡಿಕೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದರು.

ನೀರು ಜಾಗೃತಿಯ ಸರಪಳಿ
ಮಳೆ ನೀರು ಕೊಯ್ಲು ಅಳವಡಿಸುವುದು ಸರಳ. ಕಡಿಮೆ ಮೊತ್ತದಲ್ಲಿ ಇದು ಸಾಧ್ಯ. ಒಬ್ಬರು ಅಳವಡಿಸಿದರೆ ಅಕ್ಕಪಕ್ಕದವರೂ ಅದರಿಂದ ಪ್ರೇರಣೆಗೊಂಡು ಅವರೂ ಅಳವಡಿಸಿಕೊಳ್ಳುತ್ತಾರೆ. ಈ ಸರಪಳಿಯನ್ನು ಜಿಲ್ಲೆಗೆ ವಿಸ್ತರಿಸಬೇಕಾಗಿದೆ ಎಂದು ಡಾ| ವಿದ್ಯಾಕುಮಾರಿ ಹೇಳಿದರು.

ಜಲನಿರ್ವಹಣೆ ಜಾಣ್ಮೆ ಅಗತ್ಯ
ಅಧ್ಯಕ್ಷತೆ ವಹಿಸಿದ್ದ ಮಣಿಪಾಲ್‌ ಮೀಡಿಯ ನೆಟ್‌ವರ್ಕ್‌ ಲಿ. ಆಡಳಿತ ನಿರ್ದೇಶಕ ಮತ್ತು ಸಿಇಒ ವಿನೋದ್‌ ಕುಮಾರ್‌ ಮಾತನಾಡಿ, ಈಗ ಕಾಣುತ್ತಿರುವ ನೀರಿನ ಸಮಸ್ಯೆಗೆ ಸರಳ ಮತ್ತು ಪರಿಣಾಮಕಾರಿ ಪರಿಹಾರವೆಂದರೆ ಮಳೆ ನೀರಿನ ಸದ್ಬಳಕೆ. ಕೊಳವೆಬಾವಿ, ತೆರೆದ ಬಾವಿಗಳಲ್ಲಿ ನೀರಿಂಗಿಸುವ ಜಲನಿರ್ವಹಣೆ ಜಾಣ್ಮೆಯನ್ನು ತೋರಬೇಕಾಗಿದೆ ಎಂದರು.

Advertisement

ನೀರಿನ ಪುನರ್ಬಳಕೆಗೆ ಗಮನ
ಮಳೆ ನೀರು ಕೊಯ್ಲು ವಿಧಾನ ಆಳವಡಿಸಲು ಸ್ಥಳೀಯ ನಗರ ಮತ್ತು ಗ್ರಾಮಾಂತರ ಸ್ಥಳೀಯ ಆಡಳಿತ, ಸಂಘ-ಸಂಸ್ಥೆಗಳು, ಕೃಷಿಕ ಸಮುದಾಯದ ಸಂಘಟನೆಗಳು, ಶಾಲಾ ಕಾಲೇಜುಗಳು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಬೇಕು. ನೀರಿನ ಸಂರಕ್ಷಣೆ ಜತೆಗೆ ನೀರಿನ ಪುನರ್ಬಳಕೆಗೂ ಗಮನ ಹರಿಸಬೇಕು ಎಂದು ವಿನೋದ್‌ ಕುಮಾರ್‌ ಹೇಳಿದರು.

ಟ್ಯಾಂಕರ್‌ ನೀರು ಮುಕ್ತ ಜಿಲ್ಲೆಯಾಗಲಿ
ನಮ್ಮದು ಸಾಕ್ಷರ ಜಿಲ್ಲೆಯಾದರೂ ಜಲಸಾಕ್ಷರರಾಗಿಲ್ಲ. ಜಲಸಾಕ್ಷರ ಜಿಲ್ಲೆಯಾಗುವ ಮೂಲಕ ಟ್ಯಾಂಕರ್‌ ನೀರು ಮುಕ್ತ ಜಿಲ್ಲೆಯಾಗಿ ಪರಿವರ್ತಿಸಲು ಕಟಿಬದ್ಧರಾಗೋಣ ಎಂದು ಜಿ.ಪಂ. ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್‌ ಆಶಯ ವ್ಯಕ್ತಪಡಿಸಿದರು.

ಸಂಪನ್ಮೂಲ ವ್ಯಕ್ತಿ ಜೋಸೆಫ್ ರೆಬೆಲ್ಲೋ ಮಳೆ ನೀರು ಕೊçಲು ವಿಧಾನದ ಬಗೆಗೆ ತಾಂತ್ರಿಕ ಅಧಿವೇಶನ ನಡೆಸಿದರು. ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು.

ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್‌. ಸ್ವಾಗತಿಸಿ, ಕೃಷಿ ಇಲಾಖೆ ಉಪನಿರ್ದೇಶಕ ಚಂದ್ರಶೇಖರ ನಾಯ್ಕ ಸಂಪನ್ಮೂಲ ವ್ಯಕ್ತಿಯ ಪರಿಚಯ ನೀಡಿದರು. ಉದಯವಾಣಿ ಹಿರಿಯ ಸಹಾಯಕ ಸಂಪಾದಕ ಮಟಪಾಡಿ ಕುಮಾರಸ್ವಾಮಿ ಪ್ರಸ್ತಾವನೆಗೈದರು.

ಮಾನವ ಸಂಪನ್ಮೂಲ ವಿಭಾಗದ ಹಿರಿಯ ಪ್ರಬಂಧಕಿ ಉಷಾರಾಣಿ ಕಾಮತ್‌ ಕಾರ್ಯಕ್ರಮ ನಿರ್ವಹಿಸಿ ಉಪ ಮುಖ್ಯ ವರದಿಗಾರ ರಾಜು ಖಾರ್ವಿ ಕೊಡೇರಿ ವಂದಿಸಿದರು. ವಿವಿಧ ಸಂಘ-ಸಂಸ್ಥೆಗಳು, ವಿವಿಧ ಇಲಾಖಾಧಿಕಾರಿಗಳು, ಸಾರ್ವಜನಿಕರು ತುಂಬು ಆಸಕ್ತಿಯಿಂದ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next