ಉಡುಪಿ: ಚಲಿಸುತ್ತಿದ್ದ ಸ್ಕೂಟರ್ ಮೇಲೆ ಏಕಾಏಕಿ ವಿದ್ಯುತ್ ತಂತಿ ತುಂಡಾಗಿ ಬಿದ್ದು ಸವಾರ ಗಂಭೀರ ಗಾಯಗೊಂಡಿದ್ದು, ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಕೂಟರ್‌ನಲ್ಲಿದ್ದ ಅವರ ಪತ್ನಿ ಹಾಗೂ ಮಗು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಮಣಿಪಾಲದ ಕೈಗಾರಿಕಾ ಪ್ರದೇಶದಲ್ಲಿರುವ ಮಣಿಪಾಲ ಸಂಸ್ಥೆಯ ಯುನಿಟ್ 5ರ ಉದ್ಯೋಗಿ ಶಶಿಧರ ಶೆಟ್ಟಿ ಗಂಭೀರ ಗಾಯಗೊಂಡವರು.
ಕುಂಜಾರುಗಿರಿ ನಿವಾಸಿಯಾದ ಅವರು ಸೋಮವಾರ ಬೆಳಗ್ಗೆ ಪತ್ನಿ, ಮಗುವಿನೊಂದಿಗೆ ಅಲೆವೂರಿನಿಂದ ಮಣಿಪಾಲದತ್ತ ಬರುತ್ತಿದ್ದ ವೇಳೆ ಕೈಗಾರಿಕಾ ಪ್ರದೇಶದ ಬಸ್ ನಿಲ್ದಾಣ ಬಳಿ ಈ ಘಟನೆ ಸಂಭವಿಸಿದೆ. ಮಗುವನ್ನು ಎಲ್‌ಕೆಜಿಗೆ ಬಿಡಲೆಂದು ಬರುತ್ತಿದ್ದಾಗ ಗಾಳಿ-ಮಳೆ ಬಂದಿದ್ದು, ಈ ವೇಳೆ ಏಕಾಏಕಿ ವಿದ್ಯುತ್ ತಂತಿ ತುಂಡಾಗಿ ಇವರ ಕುತ್ತಿಗೆಗೆ ಸುತ್ತುವರಿಯಿತು. ಪರಿಣಾಮ ಪತ್ನಿ ಮತ್ತು ಮಗುವಿನ ಸಹಿತ ಅವರು ಕೆಳಗೆ ಬಿದ್ದರು. ತಂತಿ ಬೀಳುವಾಗ ವಿದ್ಯುತ್ ಕಡಿತಗೊಂಡಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಕೂಡಲೇ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರು.
ಅವರಿಗೆ ಸಿಟಿ ಸ್ಕ್ಯಾನ್ ಮಾಡಲಾಗಿದ್ದು, ಮಂಗಳವಾರ ಎಂಆರ್‌ಐ ಸ್ಕ್ಯಾನ್ ಮಾಡಲು ಉದ್ದೇಶಿಸಲಾಗಿದೆ. ಕುತ್ತಿಗೆಯಿಂದ ಕೆಳಭಾಗದಲ್ಲಿ ಪ್ರಸ್ತುತ ಸ್ಪರ್ಶ ಜ್ಞಾನ ಇಲ್ಲವಾಗಿದೆ. ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.