ನವದೆಹಲಿ: ಚಾರ್ ಧಾಮ್ ಯಾತ್ರೆ, ಅಮರನಾಥ ಯಾತ್ರೆ, ಕೈಲಾಸ ಪರ್ವತ ಯಾತ್ರೆ ಬಗ್ಗೆ ಕೇಳಿದ್ದೀರಿ…ಆದರೆ ಹಿಮಾಚಲ ಪ್ರದೇಶದಲ್ಲಿರುವ ಮಣಿಮಹೇಶ್ ಕೈಲಾಸ ಪರ್ವತ ಯಾತ್ರೆ ಬಗ್ಗೆ ಗೊತ್ತಾ. ಆಗಸ್ಟ್ 15ರಿಂದ ಈ ಯಾತ್ರೆ ಆರಂಭಗೊಂಡು ಸೆಪ್ಟೆಂಬರ್ 6ಕ್ಕೆ ಮುಕ್ತಾಯಗೊಳ್ಳಲಿದೆ.
ಎಲ್ಲಿದೆ ಈ ಮಣಿಮಹೇಶ್ ಕೈಲಾಸ ಪರ್ವತ, ಏನಿದರ ವಿಶೇಷತೆ?
ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿರುವ ಮಣಿ ಮಹೇಸ್ ಕೈಲಾಸದಲ್ಲಿರುವ ಮಣಿಮಹೇಶ್ ಸರೋವರ ಒಂದು ಪ್ರಸಿದ್ಧ ಯಾತ್ರಾ ಸ್ಥಳ. ಮಣಿಮಹೇಶ್ ಸರೋವರ ಬರೋಬ್ಬರಿ 13, 700 ಅಡಿ ಎತ್ತರದಲ್ಲಿದೆ.
ಪ್ರತಿವರ್ಷ ಅಧಿಕೃತವಾಗಿ ಆಗಸ್ಟ್ ತಿಂಗಳಿನಲ್ಲಿ ಮಣಿಮಹೇಶ್ ಕೈಲಾಸ ಸರೋವರ ಯಾತ್ರೆ ಆರಂಭವಾಗುತ್ತದೆ. ಇಲ್ಲಿರುವುದು ಕೂಡಾ ಶಿವನೇ..ಹೀಗಾಗಿ ಪ್ರತಿವರ್ಷ ಹಿಮಾಚಲ ಪ್ರದೇಶದ ಚಂಪಾದಲ್ಲಿರುವ ಮಣಿಮಹೇಶ್ ಸರೋವರ ಜಾತ್ರೆಗೆ ಸಾವಿರಾರು ಮಂದಿ ಭಕ್ತರು ಆಗಮಿಸುತ್ತಾರೆ.
ಮಣಿಮಹೇಶ್ ಪರ್ವತ ಹತ್ತಲು ಹಿಮಾಚಲ ಪ್ರದೇಶ ಸರಕಾರದ ಅನುಮತಿಯೂ ಬೇಕು. ಮಣಿಮಹೇಶ್ ಸರೋವರ ಸಮೀಪವೇ ಶಿವನ ದೇಗುಲವಿದೆ.
54ಕಿಲೋ ಮೀಟರ್ ಟ್ರಕ್ಕಿಂಗ್:
ಹಿಮಾಚಲ ಪ್ರದೇಶದ(ಚಂಬಾ ಕಣಿವೆ) ಪೀರ್ ಪಂಜಾಲ್ ನಲ್ಲಿರುವ ಮಣಿಮಹೇಶ್ ಕೈಲಾಸ ಸರೋವರಕ್ಕೆ ಪ್ರತಿವರ್ಷ ಭಕ್ತಾಧಿಗಳು ತೆರಳುವಂತೆಯೇ, ಟ್ರಕ್ಕಿಂಗ್ ಕೂಡಾ ಮಾಡುತ್ತಾರೆ. 11 ದಿನಗಳ ಈ ಪ್ರವಾಸದಲ್ಲಿ 3 ದಿನ ಟ್ರಾವೆಲ್, 8ದಿನ ಟ್ರಕ್ಕಿಂಗ್ ಮೂಲಕ ಮಣಿಮಹೇಶ್ ಕೈಲಾಸ ಪರ್ವತ ಹತ್ತುತ್ತಾರೆ. ಮಣಿಮಹೇಶ್ ಕೈಲಾಸ ಪರ್ವತದ ತುದಿಯಲ್ಲಿ ಶಿವ ಇದ್ದಾನೆಂಬುದು ಹಿಂದೂ ಭಕ್ತರ ನಂಬಿಕೆಯಾಗಿದೆ. ಪವಿತ್ರ ಜನ್ಮಾಷ್ಠಮಿಯಂದು ಆರಂಭವಾಗುವ ಯಾತ್ರೆ ರಾಧಾ ಅಷ್ಟಮಿಯಂದು ಮುಕ್ತಾಯಗೊಳ್ಳಲಿದೆ.
ಹೇಗೆ ತಲುಪುವುದು?
ಸಮೀಪದ ರೈಲ್ವೆ ನಿಲ್ದಾಣ ಪಠಾಣ್ ಕೋಟ್(ಪಂಜಾಬ್)
ವಿಮಾನ ನಿಲ್ದಾಣ: ಗಗ್ಗಾಲ್ ನ ಕಾಂಗ್ರಾ ವಿಮಾನ ನಿಲ್ದಾಣ(ಚಂಬಾದಿಂದ 170 ಕಿಲೋ ಮೀಟರ್ ದೂರದಲ್ಲಿದೆ.)
ರಸ್ತೆ ಮೂಲಕ: ಹಿಮಾಚಲ ಪ್ರದೇಶದ ಚಂಬಾದಿಂದ ಮಣಿಮಹೇಶ್ 78 ಕಿಲೋ ಮೀಟರ್. ಚಂಡೀಗಢ್, ದೆಹಲಿಯಿಂದ ಬಸ್, ಟ್ಯಾಕ್ಸಿ ಹಾಗೂ ಡಿಲಕ್ಸ್ ಬಸ್ಸುಗಳ ನಿರಂತರ ಸಂಚಾರವಿದೆ. ದೆಹಲಿಯಿಂದ ಚಂಬಾ 602 ಕಿಲೋ ಮೀಟರ್ ದೂರದಲ್ಲಿದ್ದು, ಚಂಡೀಗಢದಿಂದ 392 ಕಿಲೋ ಮೀಟರ್ ದೂರದಲ್ಲಿದೆ.