ಅಗರ್ತಲಾ: ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದ ಬಿಜೆಪಿ ಸೋಮವಾರ ಮಾಣಿಕ್ ಸಹಾ ಅವರು ತ್ರಿಪುರಾದ ಮುಖ್ಯಮಂತ್ರಿಯಾಗಿ ಮರಳಲಿದ್ದಾರೆ ಎಂದು ಘೋಷಿಸಿದ್ದು, ಪಕ್ಷದ ಶಾಸಕಾಂಗ ಘಟಕ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದೆ.
ಕಳೆದ ವರ್ಷ ಬಿಪ್ಲಬ್ ಕುಮಾರ್ ದೇಬ್ ಅವರನ್ನು ಹಠಾತ್ ಪದಚ್ಯುತಗೊಳಿಸಿದ ನಂತರ ಸಿಎಂಗೆ ಅಚ್ಚರಿಯ ಆಯ್ಕೆಯಾಗಿದ್ದ ಸಹಾ ಯಾವುದೇ ವಿರೋಧವನ್ನು ಎದುರಿಸಲಿಲ್ಲ.
ಮಾರ್ಚ್ 2 ರಂದು ಪ್ರಕಟವಾದ ಫಲಿತಾಂಶಗಳಲ್ಲಿ ಬಿಜೆಪಿಯು 60 ರಲ್ಲಿ 32 ಸ್ಥಾನಗಳನ್ನು ಗೆದ್ದು ಸರಳ ಬಹುಮತ ಪಡೆದು ಅಧಿಕಾರಕ್ಕೆ ಮರಳಿತ್ತು. ಪಕ್ಷವು ಚುನಾವಣೆ ವೇಳೆ ಮತಗಳನ್ನು ಕೇಳುವಾಗ ಸಹಾ ತನ್ನ ಮುಖ್ಯಮಂತ್ರಿ ಮುಖ ಎಂದು ಅದು ಸ್ಪಷ್ಟವಾಗಿ ಹೇಳಿರಲಿಲ್ಲ.
ಧನಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿರುವ ಕೇಂದ್ರ ಸಾಮಾಜಿಕ ಸಬಲೀಕರಣ ಮತ್ತು ನ್ಯಾಯ ಖಾತೆ ರಾಜ್ಯ ಸಚಿವೆ ಪ್ರತಿಮಾ ಭೂಮಿಕ್ ಅವರನ್ನು ಬಿಜೆಪಿಯ ಮಹಿಳಾ ಕೇಂದ್ರಿತ ಅಭಿಯಾನದ ಭಾಗವಾಗಿ ಸಂಭಾವ್ಯ ಸಿಎಂ ಎಂದು ಬಿಂಬಿಸಲಾಗಿದ್ದರೂ ಸೋಮವಾರ ಸಹಾ ಅವರ ಹೆಸರನ್ನು ಪ್ರತಿಮಾ ಅವರೇ ಪ್ರಸ್ತಾಪಿಸಿದವರು.
ಸಹಾ ರಾಜ್ಯದಲ್ಲಿ ಸರಕಾರ ರಚನೆಗೆ ಹಕ್ಕು ಮಂಡಿಸಲು ರಾಜ್ಯಪಾಲ ಸತ್ಯದೇವ್ ನಾರಾಯಣ್ ಆರ್ಯ ಅವರನ್ನು ಭೇಟಿಯಾದರು.