Advertisement

ಮಾಣಿಹೊಳೆ ಸೇತುವೆ ಶೀಘ್ರ ಸಂಚಾರಕ್ಕೆ

05:32 PM May 13, 2019 | Team Udayavani |

ಸಿದ್ದಾಪುರ: ತಾಲೂಕಿನ 5 ಗ್ರಾಪಂಗಳ ಮತ್ತು ತಾಲೂಕಿನ ಕೇಂದ್ರಸ್ಥಾನ ಸಿದ್ದಾಪುರ ಪಟ್ಟಣ ಹಾಗೂ ಇದರ ಸುತ್ತಲಿನ ವ್ಯಾಪ್ತಿಗೆ ಪ್ರಮುಖ ಕೊಂಡಿಯಾದ ಮಾಣಿಹೊಳೆಯ(ಅಘನಾಶಿನಿ) ನೂತನ ಸೇತುವೆ ಸದ್ಯದಲ್ಲೇ ಸಂಚಾರಕ್ಕೆ ಸಿದ್ಧಗೊಳ್ಳಲಿದೆ. ಶಿಥಿಲಗೊಂಡಿದ್ದ ಇಲ್ಲಿಯ ಹಳೆಯ ಸೇತುವೆ ಕುಸಿದ ನಂತರದಲ್ಲಿ ತಾಲೂಕಿನ ಎರಡೂ ಭಾಗದ ಜನತೆ ಸಂಚಾರದ ಕುರಿತಂತೆ ಅನುಭವಿಸಿದ ಸಮಸ್ಯೆ ನಿವಾರಣೆಯಾಗಲಿದೆ.

Advertisement

2014ರಲ್ಲಿ ಇಲ್ಲಿದ್ದ ಹಳೆಯ ಸೇತುವೆ ಕುಸಿದ ನಂತರದಲ್ಲಿ ಸೇತುವೆಯ ಮೇಲೆ ವಾಹನ ಮತ್ತು ಜನಸಂಚಾರವನ್ನು ನಿರ್ಬಂಧಿಸಲಾಗಿತ್ತು. ಮಳೆಗಾಲದಲ್ಲಿ ಎರಡೂ ಕಡೆಯವರು ಹಾರ್ಸಿಕಟ್ಟಾ- ಮುಠuಳ್ಳಿ-ಯಲುಗಾರ್‌- ಗೋಳೀಮಕ್ಕಿ ಮಾರ್ಗದ ಸುತ್ತುಬಳಸಿನ ದಾರಿಯಲ್ಲಿ ಸಂಚಾರ ನಡೆಸಬೇಕಿತ್ತು. ಬೇಸಿಗೆಯಲ್ಲಿ ಸೇತುವೆ ಪಕ್ಕದಲ್ಲಿ ಹೊಳೆಯಲ್ಲಿ ಪೈಪ್‌ ಜೋಡಿಸಿ ತಾತ್ಕಾಲಿಕ ರಸ್ತೆ ನಿರ್ಮಿಸಲಾಗುತ್ತಿತ್ತು. ನಂತರ ಮಳೆಗಾಲ ಆರಂಭವಾಗುತ್ತಿದ್ದಂತೆ ಅವನ್ನು ತೆರವುಗೊಳಿಸಲಾಗುತ್ತಿತ್ತು.

2014ರಲ್ಲಿ ಸೇತುವೆ ಕುಸಿದಿದ್ದರೂ ಹೊಸ ಸೇತುವೆ ಕುರಿತಾಗಿ ಯಾವುದೇ ಪ್ರಸ್ತಾವನೆ ಸರಕಾರದ ಕಡೆಯಿಂದ ಬಾರದ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳು ಹಾಗೂ ರಾಜಕೀಯ ಮುಖಂಡರಿಂದ ಪ್ರತಿಭಟನೆಗಳು ನಡೆದಿದ್ದವು.

ಕೇಂದ್ರ ಸರಕಾರದ ರಸ್ತೆ ನಿಧಿ ಅನುದಾನದಲ್ಲಿ ಇಲ್ಲಿ ಹೊಸ ಸೇತುವೆಗೆ ಮಂಜೂರಾತಿ ದೊರೆತ ನಂತರದಲ್ಲಿ 2017ರ ಡಿಸೆಂಬರ್‌ ತಿಂಗಳಿನಲ್ಲಿ ಟೆಂಡರ್‌ ಕರೆಯಲಾಯಿತು. 2018ರ ಮಾರ್ಚ್‌ನಲ್ಲಿ ಕಾಮಗಾರಿ ಆರಂಭಗೊಂಡಿತು. ಸೇತುವೆ ಕಾಮಗಾರಿಯ ವೆಚ್ಚ 15 ಕೋಟಿ ರೂ.ಗಳಷ್ಟಿದ್ದು 13.30 ಕೋಟಿ ರೂ.ಗಳಿಗೆ ಟೆಂಡರ್‌ ಸ್ವೀಕರಸಲ್ಪಟ್ಟಿತ್ತು.

ಒಟ್ಟು 4 ಸ್ಪಾನ್‌ಗಳ ಈ ಹೊಸ ಸೇತುವೆಯ 3 ಸ್ಪಾನ್‌(ಕಂಬ)ಗಳ ನಿರ್ಮಾಣ ಕಾರ್ಯ ಮುಗಿದಿದ್ದು ಈಗ 4ನೇ ಸ್ಪಾನ್‌ ಕೆಲಸ ನಡೆಯುತ್ತಿದೆ. 72 ಮೀಟರ್‌ ಉದ್ದದ. 16 ಮೀಟರ್‌ ಒಟ್ಟೂ ಅಗಲದ ಈ ಸೇತುವೆಯಲ್ಲಿ 11 ಮೀಟರ್‌ನಷ್ಟು ಅಗಲದ ಸ್ಥಳವನ್ನು ರಸ್ತೆಗೆ ಬಳಸಿಕೊಳ್ಳಲಾಗುತ್ತದೆ. 4ನೇ ಸ್ಪಾನ್‌ನ ಕಾಮಗಾರಿಯೂ ಬಹುತೇಕ ಮುಗಿದಿದ್ದು ಇನ್ನೊಂದು ತಿಂಗಳಲ್ಲಿ ಸೇತುವೆ ಸಂಚಾರಕ್ಕೆ ತೆರೆದುಕೊಳ್ಳಲಿದೆ.

Advertisement

ಸೇತುವೆ ಕುಸಿದ ಕಾರಣ ಸಂಚಾರಕ್ಕೆ ವ್ಯತ್ಯಯವಾದ ಕಾರಣ ಒಂದು ರೀತಿಯಲ್ಲಿ ತಾಲೂಕು ಇಬ್ಭಾಗವಾದಂತಾಗಿತ್ತು. ಕೇಂದ್ರ ಸ್ಥಾನಕ್ಕೆ ಬರಲು 30-35 ಕಿಮೀ. ದೂರ ಕ್ರಮಿಸಿ ಬರಬೇಕಾದ ಹೇರೂರು, ಹೆಗ್ಗರಣಿ, ನಿಲ್ಕುಂದ ಭಾಗದ ಜನತೆಗೆ ಇದೊಂದು ದ್ರಾವಿಡ ಪ್ರಾಣಾಯಾಮದ ಸ್ಥಿತಿಯೇ ಆಗಿತ್ತು. ಬೃಹತ್‌ ಕಾಮಗಾರಿಯಾಗಿದ್ದಲ್ಲದೇ ಮತ್ತು ಇನ್ನಿತರ ಅಡಚಣೆ ಕಾರಣದಿಂದ ಪೂರ್ಣಗೊಳ್ಳಲು ತುಸು ವಿಳಂಭವೇ ಆದರೂ ಸದ್ಯದಲ್ಲೇ ಸಂಚಾರಕ್ಕೆ ದೊರಕುತ್ತಲ್ಲ ಎನ್ನುವದು ಸಂತಸದ ಸಂಗತಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next