Advertisement

ಪ್ರಣಾಳಿಕೆ ಆರೋಗ್ಯಕರವಾಗಿರಲಿ

11:54 PM Mar 24, 2019 | ಸಂಪಾದಕೀಯ |

ಪ್ರಣಾಳಿಕೆ ಚುನಾವಣೆಯ ಅವಿಭಾಜ್ಯ ಅಂಗ. ಗ್ರಾಮ ಪಂಚಾಯತಿಯಿಂದ ಹಿಡಿದು ಲೋಕಸಭೆ ತನಕ ಪ್ರತಿ ಚುನಾವಾಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಮತದಾರರನ್ನು ಓಲೈಸುವ ಸಲುವಾಗಿ ಪ್ರಣಾಳಿಕೆಗಳನ್ನು ಬಿಡುಗಡೆಗೊಳಿಸುತ್ತವೆ.

Advertisement

ಎಲ್ಲ ಪ್ರಣಾಳಿಕೆಗಳಲ್ಲಿ ಆಶ್ವಾಸನೆಗಳ ದೊಡ್ಡ ಪಟ್ಟಿಯೇ ಇರುತ್ತದೆ. ಅದರಲ್ಲೂ ಬಡವರ ಮನಗೆಲ್ಲಲು ಏನೇನು ಸಾಧ್ಯವೋ ಅದನ್ನೆಲ್ಲ ಈ ಪ್ರಣಾಳಿಕೆಗಳಲ್ಲಿ ನೀಡಲಾಗುತ್ತದೆ. ಪಕ್ಷಗಳಿಗೆ ಬಡವರು, ಜನಸಾಮಾನ್ಯರು, ಕೃಷಿಕರು, ಅವರ ಅಗತ್ಯಗಳು , ಆಕಾಂಕ್ಷೆಗಳು ನೆನಪಾಗುವುದೇ ಚುನಾವಣೆ ಬಂದಾಗ. ಪ್ರಣಾಳಿಕೆಗಳಲ್ಲಿ ನೀಡುವ ಭರವಸೆಗಳು ವೈವಿಧ್ಯಮಯವಾಗಿರುತ್ತದೆ. ಉಚಿತ ಅಕ್ಕಿ, ಮಿಕ್ಸಿ, ಫ್ಯಾನ್‌, ಸೈಕಲ್‌ ಸ್ಕೂಟರ್‌ನಿಂದ ತೊಡಗಿ ಲ್ಯಾಪ್‌ಟಾಪ್‌, ಸ್ಮಾರ್ಟ್‌ಫೋನ್‌ ಹೀಗೆ ನಾನಾ ರೀತಿಯ ಕೊಡುಗೆಗಳ ಸುರಿಮಳೆಯಾಗುತ್ತದೆ. ಒಂದು ಪಕ್ಷ ಉಚಿತವಾಗಿ ದನ ವಿತರಿಸುವ ಭರವಸೆಯನ್ನೂ ನೀಡಿತ್ತು. ಬಡತನ ನಿರ್ಮೂಲನ, ಮಹಿಳಾ ಮಸೂದೆ ಜಾರಿ, ಕೃಷಿಕ್ಷೇತ್ರಕ್ಕೆ ಕಾಯಕಲ್ಪ, ನಿರುದ್ಯೋಗ ನಿವಾರಣೆಯಂಥ ಜನಪ್ರಿಯ ಭರವಸೆಗಳು ಪ್ರತಿ ಚುನಾವಣೆಯಲ್ಲೂ ಪುನರಾವರ್ತನೆಯಾಗುತ್ತಿರುತ್ತದೆ.

ಚುನಾವಣೆ ಕಾಲದಲ್ಲಿ ಪ್ರಣಾಳಿಕೆಗಳನ್ನು ಬಿಡುಗಡೆಗೊಳಿಸುವುದರಿಂದ ಸ್ಪರ್ಧಿಸುವ ಪಕ್ಷದ ಆದ್ಯತೆಗಳು, ದೂರದೃಷ್ಟಿ, ರಾಷ್ಟ್ರೀಯ ಪರಿಕಲ್ಪನೆಗಳು ಇತ್ಯಾದಿಗಳನ್ನು ತಿಳಿಯಲು ಸಹಾಯವಾಗುತ್ತದೆ. ಈ ಕಾರಣಕ್ಕೆ ಪ್ರಣಾಳಿಕೆಗಳು ಮಹತ್ವ ಪಡೆದಿದ್ದವು. ಈಗ ಬಹುತೇಕ ಪ್ರಣಾಳಿಕೆಗಳು ಮತದಾರರನ್ನು ಖುಷಿಪಡಿಸುವ ಕೊಡುಗೆಗಳನ್ನು ತಿಳಿಸುವ ಪ್ರಚಾರಪತ್ರವಾಗಿ ಬದಲಾಗಿರುವುದು ಪ್ರಜಾತಂತ್ರದ ಆಶಯಗಳಿಗೆ ಪ್ರತಿಕೂಲವಾಗಿರುವ ಬೆಳವಣಿಗೆ. ಹೀಗಾಗಿಯೇ ಸುಪ್ರೀಕೋರ್ಟ್‌ ನ್ಯಾಯಮೂರ್ತಿಯೊಬ್ಬರು ಪಕ್ಷಗಳ ಪ್ರಣಾಳಿಕೆಯನ್ನು ಬರೀ ಕಾಗದದ ತುಂಡು ಎಂದು ಲೇವಡಿ ಮಾಡಿದ್ದರು.

ಹಿಂದೆಲ್ಲಾ ಚುನಾವಣೆ ಘೋಷಣೆಯಾದ ಬೆನ್ನಿಗೆ ಪ್ರಣಾಳಿಕೆ ಬಿಡುಗಡೆಗೊಳಿಸಲಾಗುತ್ತಿತ್ತು. ಆದರೆ ಈಗ ಮತದಾನಕ್ಕೆ ಒಂದೆರಡು ದಿನವಿರುವಾಗ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಲಾಗುತ್ತದೆ. ಮತದಾರರಿಗೆ ಪ್ರಣಾಳಿಕೆಯಲ್ಲಿರುವ ಆಶ್ವಾಸನೆಗಳು ನೆನಪಿರಬೇಕು ಎನ್ನುವುದು ಒಂದು ಕಾರಣವಾದರೆ ಎದುರಾಳಿಗಳ ಪ್ರಣಾಳಿಕೆ ನೋಡಿಕೊಂಡು ಅದಕ್ಕೆ ತಕ್ಕ ಎದಿರೇಟು ನೀಡುವುದು ಇದರ ಇನ್ನೊಂದು ಉದ್ದೇಶ. ಆದರೆ 2014ರ ಚುನಾವಣೆ ಸಂದರ್ಭದಲ್ಲಿ ನಡೆಸಿದ ಸಮೀಕ್ಷೆಯೊಂದು ಶೇ. 50ರಷ್ಟು ಮತದಾರರು ಪ್ರಣಾಳಿಕೆಗಳನ್ನು ಓದುವುದೇ ಇಲ್ಲ ಎಂಬ ಅಂಶವನ್ನು ಬಹಿರಂಗಪಡಿಸಿತ್ತು. ಕೆಲವರು ಓದಿದರೂ ಅದರಲ್ಲಿರುವ ಆಶ್ವಾಸನೆಗಳನ್ನು ನೆನಪಿಟ್ಟುಕೊಂಡಿರಲಿಲ್ಲ. ಮತದಾರರಿಗೆ ಪ್ರಣಾಳಿಕೆ ಅಷ್ಟೇನೂ ಮಹತ್ವದ ವಿಷಯವಲ್ಲ ಎನ್ನುವುದು ಈ ಸಮೀಕ್ಷೆಯಿಂದ ವ್ಯಕ್ತವಾಗಿತ್ತು. ಅದಾಗ್ಯೂ ಪ್ರಣಾಳಿಕೆಗೆ ಚುನಾವಣಾ ಪ್ರಕ್ರಿಯೆಯಲ್ಲಿ ಬಹಳ ಮಹತ್ವವಿದೆ. ಭಾರತ ಎಂದಲ್ಲ ಪ್ರಜಾತಂತ್ರ ಅನುಸರಿಸುವ ಬಹುತೇಕ ದೇಶಗಳಲ್ಲಿ ಚುನಾವಣೆಗಾಗುವಾಗ ಪ್ರಣಾಳಿಕೆ ಬಿಡುಗೊಳಿಸುವ ಪದ್ಧತಿ ಇದೆ. ಆದರೆ ಅಲ್ಲಿ ರಾಜಕೀಯ ಪಕ್ಷಗಳು ಪ್ರಣಾಳಿಕೆಯಲ್ಲಿ ನೀಡಿರುವ ಆಶ್ವಾಸನೆಗಳನ್ನು ಈಡೇರಿಸುವ ಬದ್ಧತೆಯನ್ನು ಹೊಂದಿವೆ. ಆದರೆ ನಮ್ಮಲ್ಲಿ ಪಕ್ಷಗಳು ಗೆದ್ದರೂ ಗೆಲ್ಲದಿದ್ದರೂ ಪ್ರಣಾಳಿಕೆಯಲ್ಲಿ ನೀಡಿದ ಆಶ್ವಾಸನೆಗಳಿಗೆ ಉತ್ತರದಾಯಿಯಾಗಿರುವುದು ಅಗತ್ಯವಿಲ್ಲದ ಕಾರಣ ಪ್ರಣಾಳಿಕೆಯಲ್ಲಿ ದಂಡಿಯಾಗಿ ಆಶ್ವಾಸನೆಗಳನ್ನು ನೀಡಬಹುದು. ಪ್ರಣಾಳಿಕೆಗೆ ಪಕ್ಷವನ್ನು ಉತ್ತರದಾಯಿಯಾಗಿ ಮಾಡುವ ಕಾನೂನು ನಮ್ಮಲ್ಲಿಲ್ಲ. ಅದಾಗ್ಯೂ ಚುನಾವಣ ಆಯೋಗ 2014ರ ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ ನೀಡುವ ಆಶ್ವಾಸನೆಗಳಿಗೆ ಮಾರ್ಗದರ್ಶಿ ಸೂಚಿ ರಚಿಸಿತ್ತು. ಇದಕ್ಕಿಂತ ಹೆಚ್ಚಿನದ್ದನ್ನು ಮಾಡುವ ಅಧಿಕಾರ ಆಯೋಗಕ್ಕೂ ಇಲ್ಲ. ಪ್ರಣಾಳಿಕೆಗಳಿಗೆ ಪಕ್ಷಗಳನ್ನು ಉತ್ತರದಾಯಿಯನ್ನಾಗಿ ಮಾಡಲು ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ಮಾಡಬೇಕೆಂಬ ಆಗ್ರಹ ಇನ್ನೂ ಈಡೇರಿಲ್ಲ.

ಇಷ್ಟೆಲ್ಲ ಲೋಪಗಳ ಹೊರತಾಗಿಯೂ ಈಗೀಗ ಪ್ರಣಾಳಿಕೆಗಳ ಕುರಿತು ಸೀಮಿತ ವಲಯದಲ್ಲಾದರೂ ಗಂಭೀರವಾದ ಚರ್ಚೆಯಾಗುತ್ತಿರುವುದು ಸಕಾರಾತ್ಮಕವಾದ ಬೆಳವಣಿಗೆ. ಹೀಗಾಗಿಯೇ ಪಕ್ಷಗಳು ಪ್ರಣಾಳಿಕೆಗಳನ್ನು ರಚಿಸುವಾಗ ಬಹಳ ಎಚ್ಚರಿಕೆ ವಹಿಸುತ್ತವೆ. ಅಭಿವೃದ್ಧಿ ಹೆಚ್ಚಿನೆಲ್ಲ ಪ್ರಣಾಳಿಕೆಗಳ ಮೂಲಮಂತ್ರವಾಗಿದ್ದರೂ, ಶಿಕ್ಷಣ, ಆರೋಗ್ಯ ಇತ್ಯಾದಿ ಸಾರ್ವತ್ರಿಕ ವಿಚಾರಗಳ ಬಗ್ಗೆಯೂ ರಾಜಕೀಯ ಪಕ್ಷಗಳು ಮಾತನಾಡಲಾರಂಭಿಸಿರುವುದು ಈ ಬೆಳವಣಿಗೆಯ ಫ‌ಲಶ್ರುತಿ. ಚುನಾವಣೆ ಎದುರಿಸಲು ಪ್ರಣಾಳಿಕೆ ಅಗತ್ಯವಂತೂ ಇದ್ದೇ ಇದೆ. ಅದರಲ್ಲಿ ದೀರ್ಘಾವಧಿ ಗುರಿಯ ಮತ್ತು ತತ್‌ಕ್ಷಣದ ಕಾರ್ಯಸೂಚಿಯ ಆರೋಗ್ಯಕರವಾದ ಮಿಶ್ರಣವಿದ್ದರೆ ಅದನ್ನು ಸಂತುಲಿತ ಪ್ರಣಾಳಿಕೆ ಎನ್ನಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next