Advertisement

3 ವರ್ಷವಾದರೂ ರಸ್ತೆಗೆ ಚರಂಡಿ ನಿರ್ಮಾಣವಾಗಿಲ್ಲ

05:30 PM Jun 23, 2017 | |

ಪುತ್ತೂರು: ಮಾಣಿ – ಮೈಸೂರು ರಾಜ್ಯ ಹೆದ್ದಾರಿಯ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡು ಮೂರು ವರ್ಷಗಳಾಗುತ್ತಾ ಬಂದರೂ, ಚರಂಡಿ ಕಾಮಗಾರಿ ಮಾತ್ರ ಇನ್ನೂ ಆರಂಭವಾಗುವ ಲಕ್ಷಣವಿಲ್ಲ. 

Advertisement

ಪುತ್ತೂರು-ಸುಳ್ಯ ಭಾಗದ ರಸ್ತೆಯ ಕಾಮಗಾರಿ ತೆಗೆದುಕೊಂಡಿರುವವರ ನಿರ್ವ ಹಣೆಯ ಹೊಣೆ 2018 ರ ಮಾರ್ಚ್‌ ನಲ್ಲಿ ಮುಗಿಯುತ್ತಿದೆ. ಆದರಿನ್ನೂ ಚರಂಡಿ ನಿರ್ಮಿಸುವ ಆಲೋಚನೆಯೇ ಕಂಡುಬರುತ್ತಿಲ್ಲ. ವಿಚಿತ್ರವೆಂದರೆ, ಇದೇ ಹೆದ್ದಾರಿಯ ಮೈಸೂರು-ಸಂಪಾಜೆ ಮಾರ್ಗದಲ್ಲಿ ಚರಂಡಿ ಸಹಿತ ರಸ್ತೆಯನ್ನು ನಿರ್ಮಿಸಲಾಗಿದೆ. ಅದೇ ನಿಯಮ ಪುತ್ತೂರು-ಸುಳ್ಯ ಭಾಗಕ್ಕೆ ಮತ್ತು ಗುತ್ತಿಗೆದಾರರಿಗೆ ಏಕೆ ಅನ್ವಯವಾಗುತ್ತಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆ. 

ಹೆದ್ದಾರಿಯ ಪುತ್ತೂರಿನಿಂದ -ಸುಳ್ಯ ಮಧ್ಯೆ ಸುಮಾರು 2012 ನೇ ಇಸವಿಯಲ್ಲಿ ಕಾಮಗಾರಿ ಆರಂಭಿಸಲಾಗಿದ್ದು, ಕಾವು ತನಕ 2014 – 2015ರಲ್ಲಿ ಪೂರ್ತಿಗೊಂಡಿದೆ. ಸುಳ್ಯ ತಾಲೂಕು ಭಾಗದಲ್ಲಿ 2016 ನೇ ಸಾಲಿನಲ್ಲಿ ಕಾಮಗಾರಿ ನಡೆಯಿತು. ಆದರೆ ಈ ಭಾಗಗಳಲ್ಲಿ ಎಲ್ಲಿಯೂ ಚರಂಡಿ ಕಾಮಗಾರಿ ನಡೆಸಿಲ್ಲ. 

ಚರಂಡಿ ಆಗದಿರುವ ಸಮಸ್ಯೆ ಹೆಚ್ಚಾಗಿ ಮಳೆಗಾಲ ದಲ್ಲಿ ಕಂಡು ಬರುತ್ತಿದೆ. ರಸ್ತೆಯಲ್ಲೇ ಹರಿಯುವ ನೀರು, ಅಲ್ಲಲ್ಲಿ ದೊಡ್ಡ ಗಾತ್ರದ ಹೊಂಡಗಳು, ಕೊಚ್ಚಿ ಹೋಗುತ್ತಿರುವ ರಸ್ತೆಯ ಡಾಮರು, ಅದರ ಸುತ್ತಲೂ ಅಪಾಯ ಸೂಚಿಸುವ ಕಲ್ಲುಗಳು ಕಾಣಸಿಗುತ್ತವೆ. ಸಾವಿರಾರು ವಾಹನಗಳು ಸಂಚರಿಸುವ ರಸ್ತೆಯಲ್ಲಿ ಇದೇ ಕಾರಣದಿಂದ ಟ್ರಾಫಿಕ್‌ ಜಾಮ್‌ ನಂಥ ಸಮಸ್ಯೆಯೂ ತಲೆದೋರುತ್ತಿದೆ.

ರಸ್ತೆ ಕಾಮಗಾರಿ ಪೂರ್ಣಗೊಂಡ ಅವಧಿಯಲ್ಲಿ ರಸ್ತೆಯ ಗುಣಮಟ್ಟ ರಕ್ಷಣೆಗಾಗಿ ಚರಂಡಿ ವ್ಯವಸ್ಥೆಯನ್ನೂ ಕಲ್ಪಿಸಬೇಕೆಂಬ ಸಾರ್ವಜನಿಕ ಆಗ್ರಹವೂ ಈಡೇರಿಲ್ಲ. ಸಂಬಂಧಪಟ್ಟ ಗುತ್ತಿಗೆದಾರರನ್ನು ಎಚ್ಚರಿಸಿ, ಚರಂಡಿ ನಿರ್ಮಿಸುವಂತೆ ತಾಕೀತು ಮಾಡಬೇಕಾದ ಅಧಿಕಾರಿಗಳು, ಜನಪ್ರತಿನಿಧಿಗಳೂ ನಿರ್ಲಕ್ಷ್ಯ ತಾಳಿದ್ದಾರೆ ಎಂಬುದು ಸಾರ್ವಜನಿಕರ ಆರೋಪ.

Advertisement

ಜಿಲ್ಲಾಡಳಿತ ವಿಫಲ
ಮಳೆಗಾಲಕ್ಕೆ ಮುನ್ನ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಳ್ಳಬೇಕಿತ್ತು. ಜಿಲ್ಲಾಡಳಿತ ತನ್ನಅಧಿಕಾರಿಗಳಿಗೆ ರಸ್ತೆಗಳಿಗೆ ಸಂಬಂಧಪಟ್ಟಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸು ವಲ್ಲಿಯೂ ವಿಫ‌ಲವಾಗಿದೆ ಎಂಬುದು  ಸಾರ್ವಜನಿಕರ ಟೀಕೆ.

ಹೊಂಡಗಳ ಕಥೆ
ಹೆದ್ದಾರಿಯ ದರ್ಬೆ ವೃತ್ತದ ಬಳಿ, ಮುಕ್ರಂಪಾಡಿಯಲ್ಲಿ ಸೇರಿದಂತೆ ಹಲವೆಡೆ ರಸ್ತೆ ಕಾಮಗಾರಿ ಪೂರ್ಣ ಗೊಂಡ ಅನಂತರದ ಮಳೆಗಾಲದಲ್ಲೇ ಹೊಂಡಗಳು ಕಾಣಿಸಿಕೊಂಡಿವೆ. ಈ ಹೊಂಡಗಳಿಗೆ ವಾಹನಗಳು ಬಿದ್ದು ಅಪಘಾತವೂ ಸಂಭವಿಸುತ್ತಿದೆ. ಮಳೆಗಾಲದ ಆರಂಭದಲ್ಲಿ ಇವುಗಳಿಗೆ ತೇಪೆ ಹಾಕಲಾಗುತ್ತಿದೆ. ಅವೆಲ್ಲವೂ ಒಂದೇ ಮಳೆಗೆ ಕೊಚ್ಚಿ ಹೋಗಿ ಹೊಂಡಗಳು ಮತ್ತೆ ಸೃಷ್ಟಿಯಾಗುತ್ತಿದೆ.

ಸಂಚಾರ ಸುರಕ್ಷಿತವಲ್ಲ
ರಾಜ್ಯ ಹೆದ್ದಾರಿಯ ಕೌಡಿಚ್ಚಾರು ಸಮೀಪ ರಸ್ತೆ ಬದಿ ತೆರೆದ ಬಾವಿಗೆ ತಡೆಬೇಲಿಯೇ ಇಲ್ಲದೆ ಅಪಾಯಕಾರಿಯಾಗಿದೆ. ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ಬಂದರೆ ಎಲ್ಲಾ ಕಡೆ ಕೃತಕ ನೆರೆ ನಿರ್ಮಾಣವಾಗುತ್ತದೆ. ಅಲ್ಲಲ್ಲಿ ಹೊಂಡಗಳೂ ಬಿದ್ದಿವೆ. ಒಟ್ಟಿನಲ್ಲಿ ಹೆದ್ದಾರಿಯಲ್ಲಿ ಮಳೆಗಾಲದ ಸಂಚಾರ ಸುರಕ್ಷಿತವಾಗಿಲ್ಲ.

– ಕಿಶನ್‌ ಕಾವು
ದೈನಂದಿನ ಸವಾರ

ಕಾಮಗಾರಿ ನಡೆಸುತ್ತಾರೆ
2018 ರ ಮಾರ್ಚ್‌ ತಿಂಗಳ ತನಕ ಸಂಬಂಧಪಟ್ಟ ಗುತ್ತಿಗೆದಾರರಿಗೆ ರಸ್ತೆ ನಿರ್ವಹಣೆಯ ಹೊಣೆ ಇದೆ. ಸಮರ್ಪಕ ಚರಂಡಿ ವ್ಯವಸ್ಥೆ ಕಲ್ಪಿಸಿಕೊಡುವಂತೆ ಅವರಿಗೆ ಸೂಚಿಸಲಾಗಿದ್ದು, ಕಾಮಗಾರಿ ನಡೆಸಲಿದ್ದಾರೆ. ಹೆಚ್ಚು ತೊಂದರೆಯಾಗುತ್ತಿರುವಲ್ಲಿ ಸಾರ್ವಜನಿಕರ ದೂರಿನ ಮೇರೆಗೆ ಸರಿಪಡಿಸಿಕೊಡಲಾಗುತ್ತದೆ.

– ಸುಬಾನ್‌
ಎಡಬ್ಲೂಇ, ಕೆಆರ್‌ಡಿಸಿಎಲ್‌ ಪುತ್ತೂರು

–   ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next