Advertisement
ಮಿಯಾಝಾಕಿ ಎನ್ನುವುದು ಜಪಾನ್‌ನ ವಿಶೇಷ ತಳಿ. ಇದನ್ನು ಅಲ್ಲಿ ಪಾಲಿಹೌಸ್‌ನಲ್ಲಿ ಹೀಟರ್ ಇಟ್ಟು ಅದಕ್ಕೆ ಬೇಕಾದ ವಾತಾವರಣ ಸೃಷ್ಟಿಸಿ ಬೆಳೆಸಲಾಗುತ್ತದೆ. ಇದು ಕಾಯಿಯ ಹಂತದಲ್ಲಿ ನೇರಳೆ ಬಣ್ಣದಲ್ಲಿದ್ದು, ಹಣ್ಣಾಗುವಾಗ ಬೆಂಕಿ ಜ್ವಾಲೆಯ ಬಣ್ಣ ಬರುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಹಣ್ಣಿನ ಬೆಲೆ ಕೆ.ಜಿ.ಗೆ 2.3 ಲಕ್ಷ ರೂ.ನಿಂದ 2.7 ಲಕ್ಷ ರೂ. ವರೆಗೆ ಇದೆ. ರುಚಿಯಲ್ಲಿ ಮಲ್ಲಿಕಾ ತಳಿಯನ್ನು ಹೋಲುವ ಈ ಹಣ್ಣಿನಲ್ಲಿ ಔಷಧೀಯ ಗುಣಗಳಿರುವುದರಿಂದ ಇದಕ್ಕೆ ಹೆಚ್ಚು ಬೇಡಿಕೆ.
Related Articles
Advertisement
ಮಿಜಾಝಕಿ ತಳಿಯ ಮಾವು ಜಪಾನ್, ಅರಬ್ ರಾಷ್ಟ್ರ ಮತ್ತು ಗುಜರಾತ್‌ನ ಹವಾಗುಣದಲ್ಲಿ ಬೆಂಕಿಯ ಜ್ವಾಲೆಯ ಬಣ್ಣವನ್ನು ಪಡೆಯುತ್ತದೆ. ಆದರೆ ಶಂಕರಪುರದಲ್ಲಿ ಬೆಳೆದ ಮಾವಿಗೆ ಆ ಬಣ್ಣ ಬಂದಿಲ್ಲ. ಇದಕ್ಕೆ ಜನವರಿ ತಿಂಗಳಿನಲ್ಲಿ ಸುರಿದ ಮಳೆಯೂ ಕಾರಣ ಇರಬಹುದು ಎನ್ನುತ್ತಾರೆ ಜೋಸೆಫ್ ಲೋಬೋ.
ನಾಲ್ಕೂವರೆ ಅಡಿ ಎತ್ತರದ ಗಿಡ:
ಈ ತಳಿಯನ್ನು ರಾಜ್ಯದಲ್ಲಿ ಕೊಪ್ಪಳ, ಶಿವಮೊಗ್ಗದಲ್ಲೂ ಬೆಳೆಯುತ್ತಾರೆ. ಆದರೆ ತಾರಸಿಯಲ್ಲಿ ಬೆಳೆದದ್ದು ಇದೇ ಮೊದಲು. ನೆಲದಲ್ಲೇ ನೆಟ್ಟರೆ ಸುಮಾರು 15 ಅಡಿ ಬೆಳೆಯುವ ಈ ಮರ ತಾರಸಿಯಲ್ಲಿ ನಾಲ್ಕೂವರೆ ಅಡಿ ಎತ್ತರ ಬೆಳೆದಿದೆ. ಮುಂದೆ ದೊಡ್ಡ ಗಾತ್ರದ ಗ್ರೋ ಬ್ಯಾಗ್ ಬಳಸಿ ಹೆಚ್ಚುವರಿ ಸಾವಯವ ಗೊಬ್ಬರ ನೀಡಿದರೆ 6.5 ಎತ್ತರ ಬೆಳೆಯಬಲ್ಲುದು, 1 ಕಿಲೋ ಗಾತ್ರದ ಮಾವಿನ ಹಣ್ಣನ್ನು ಪಡೆಯಬಹುದು ಎನ್ನುತ್ತಾರೆ ಜೋಸೆಫ್.
ಗಿಡ ಖರೀದಿಸುವ ಮುನ್ನ ಎಚ್ಚರ ವಹಿಸಿ:
ಮಿಯಾಝಕಿ ಮಾವಿನ ಗಿಡದ ಬಗ್ಗೆ ಈಗ ಆಸಕ್ತಿ ಹೆಚ್ಚಾಗಿದೆ. ಹೀಗಾಗಿ ಕೆಲವರು ಮಿಯಾಝಕಿ ಎಂದು ರೆಡ್ ಮ್ಯಾಂಗೋ ಗಿಡಗಳನ್ನು ಮೋಸದಿಂದ ಮಾರಲಾಗುತ್ತಿದೆ. ಇದು ಕೇವಲ 700-800 ರೂ.ಗೇ ಸಿಗುತ್ತದೆ. ಈಗ ನಿಜವಾದ ಮಿಯಾಝಕಿ ತಳಿ ಗಿಡಕ್ಕೆ ಕನಿಷ್ಠ 2,500 ರೂ. ಇದೆ. ಹೀಗಾಗಿ ಖರೀದಿ ಮಾಡುವಾಗ ಎಚ್ಚರ ವಹಿಸಿ ಎನ್ನುತ್ತಾರೆ ಲೋಬೋ.
ಪ್ರಯೋಗಶೀಲ ಕೃಷಿಕ ಜೋಸೆಫ್ ಲೋಬೋ:
ಜೋಸೆಫ್ ಲೋಬೊ ಅವರು ಪ್ರಯೋಗಶೀಲ ಕೃಷಿಕರು. ತಮ್ಮ ಮನೆಯ ಮೇಲಿನ 1,400 ಚದರ ಅಡಿ ವಿಸ್ತೀರ್ಣ ತಾರಸಿಯಲ್ಲಿ 200ಕ್ಕೂ ಅಧಿಕ ಹಣ್ಣುಹಂಪಲು, 75ಕ್ಕೂ ಅಧಿಕ ಔಷಧೀಯ ಗಿಡಗಳು ಮತ್ತು 40ಕ್ಕೂ ಅಧಿಕ ಜಾತಿಯ ಹೂವಿನ ಪ್ರಭೇದಗಳನ್ನು ಹೊಂದಿದ್ದಾರೆ. ಜಾವಾ ಪ್ಲಮ್, ಬ್ರೆಜಿಲಿಯನ್ ಚೆರ್ರಿ, ತೈವಾನ್ ಆರೆಂಜ್ ಇಲ್ಲಿದೆ. ಅವರ ಈ ಸಾಹಸಕ್ಕೆ ಪತ್ನಿ ನೀಮಾ ಲೋಬೊ ಮತ್ತು ಕರಾಟೆ ಚಾಂಪಿಯನ್ ಆಗಿರುವ ಮಗಳು ಜನಿಷಾ ಲೋಬೊ ಕೈ ಜೋಡಿಸುತ್ತಾರೆ. ಅಂದ ಹಾಗೆ ಲೋಬೊ ಅವರು ತಮ್ಮ ತಾರಸಿ ತೋಟದಲ್ಲಿ ಬೆಳೆದ ಏನನ್ನೂ ಹಣಕ್ಕೆ ಮಾರುವುದಿಲ್ಲ!
ಮಿಯಾಝಕಿಗೆ ಯಾಕಿಷ್ಟು ದರ?:
ನೇರಳೆ ಕಾಯಿ, ಬೆಂಕಿಯ ಜ್ವಾಲೆಯಂಥ ಹಣ್ಣು, ಬಣ್ಣ ಇದರ ಪ್ರಧಾನ ಆಕರ್ಷಣೆ.
ಹಣ್ಣಿನೊಳಗೆ ಸಣ್ಣ ಗಾತ್ರದ ವಾಟೆ ಇರುತ್ತದೆ, ಕೆಲವರು ಇದನ್ನು ಸೀಡ್‌ಲೆಸ್ ಮಾವು ಅಂತಲೂ ಹೇಳುತ್ತಾರೆ.
ಇದು ಆ್ಯಂಟಿ ಆಕ್ಸಿಡೆಂಟ್‌ನ್ನು ಯಥೇತ್ಛವಾಗಿ ಹೊಂದಿದೆ. ಇದರಲ್ಲಿರುವ ಹೇರಳ ಬೀಟಾ ಕೆರೋಟಿನ್ ಮತ್ತು ಫಾಲಿಕ್ ಆ್ಯಸಿಡ್ ಕಣ್ಣಿನ ಆಯಾಸ ನಿವಾರಣೆ, ದೃಷ್ಟಿ ದೋಷ ನಿವಾರಣೆಗೆ ಭಾರೀ ಒಳ್ಳೆಯದು.
ಇತ್ತೀಚೆಗೆ ಇದರ ಬೇಡಿಕೆ ಹೆಚ್ಚಲು ಜಗತ್ತಿನ ಅತಿ ದುಬಾರಿ ಹಣ್ಣು ಎಂಬ ಪ್ರಖ್ಯಾತಿಯೂ ಒಂದು ಕಾರಣ. ಆದರೆ ಇಲ್ಲಿ ಅಷ್ಟು ಬೆಲೆ ಸಿಗಲಾರದು.
ಕಡಿಮೆ ಜಾಗದಲ್ಲೂ ಕೃಷಿ ಸಾಧ್ಯ:
ಜಾಗ ಕಡಿಮೆ ಇದೆ ಎನ್ನುವ ಕಾರಣಕ್ಕೆ ಕೃಷಿ ಮಾಡದೆ ಇರಬೇಕಾಗಿಲ್ಲ. ಯುವಜನರು ಅತಿ ಕಡಿಮೆ ಜಾಗದಲ್ಲಿ, ಮನೆಯ ತಾರಸಿಯಲ್ಲೇ ಎಷ್ಟೆಲ್ಲ ಗಿಡಗಳನ್ನು ನೆಡಬಹುದು ಎಂದು ತೋರಿಸುವ ಪ್ರಯತ್ನ ಮಾಡಿದ್ದೇನೆ. – ಜೋಸೆಫ್ ಲೋಬೋ