Advertisement
ಅದೊಂದು ಸುಂದರ ಊರು. ಊರಾಚೆಗಿನ ಬಯಲಲ್ಲಿ ಒಂದು ದೊಡ್ಡ ಮಾವಿನ ಮರ. ವಿಶಾಲವಾಗಿ ಹರಡಿದ್ದ ಮರದಲ್ಲಿ ಅನೇಕ ಪಕ್ಷಿಗಳು ಗೂಡು ಕಟ್ಟಿದ್ದರೆ, ಪೊಟರೆಗಳಲ್ಲಿ ಅಳಿಲುಗಳು ವಾಸಿಸುತ್ತಿದ್ದವು. ಪ್ರತೀ ವರ್ಷ ಮರದ ತುಂಬಾ ರುಚಿಯಾದ ಹಣ್ಣುಗಳು ಬಿಡುತ್ತಿದ್ದವು. ಮರದ ಹಿಂದೆ ಖಾಸಗಿ ವ್ಯಕ್ತಿಯೊಬ್ಬರು ಕಾಂಪೌಂಡ್ ಕಟ್ಟಿದ್ದರು. ಅದರಾಚೆ ಬಯಲಿತ್ತು.
Related Articles
Advertisement
ಅನಂತರ ಮಕ್ಕಳಿಗೆ ಆಡಲು ಮನಸ್ಸು ಬರಲಿಲ್ಲ. ಶತಾಯ ಗತಾಯ ಮರವನ್ನು ಉಳಿಸಬೇಕು ಎಂದು ನಿರ್ಧರಿಸಿದರು. ಏನು ಮಾಡಬೇಕೆಂದು ಚರ್ಚಿಸತೊಡಗಿದರು. ಕೊನೆಗೆ ನಿರೂಪ್ ಹೇಳಿದ ಉಪಾಯ ಎಲ್ಲರಿಗೂ ಹಿಡಿಸಿತು. ಕತ್ತಲಾದ್ದರಿಂದ ತಂತಮ್ಮ ಮನೆಗೆ ತೆರಳಿದರು. ಅಕ್ಕ-ಪಕ್ಕದ ಮನೆಯವರ ಬಳಿ ಮಕ್ಕಳು ಮಾವಿನ ಮರದಲ್ಲಿ ದೆವ್ವ ಸೇರಿಕೊಂಡಿದೆ. ಸುಮ್ಮನಿದ್ದರೆ ಏನೂ ಮಾಡಲ್ಲ. ಮರಕ್ಕೆ ತೊಂದರೆಯಾದರೆ ಸುಮ್ಮನಿರಲ್ಲ ಎಂದು ಸುದ್ದಿ ಹಬ್ಬಿಸತೊಡಗಿದರು. ಮನೆಯವರಲ್ಲಿ ನಿಜ ಹೇಳಿದ್ದರಿಂದ ಅವರು ಹೆದರಲಿಲ್ಲ ಮತ್ತು ಅವರೂ ಆ ಸುದ್ದಿಯನ್ನು ಬಿತ್ತರಿಸತೊಡಗಿದರು.
ಮೂರು ದಿನ ಬಿಟ್ಟು ಮರ ಕಡಿಯುವ ತಂಡ ಸಿದ್ಧತೆಯಲ್ಲಿ ತೊಡಗಿತು. ಆ ಪೈಕಿ ಮಕ್ಕಳು ಹಬ್ಬಿಸಿದ್ದ ಸುಳ್ಳು ಸುದ್ದಿ ನಂಬಿದ್ದ ವೇಣು ಎಂಬಾತ ಹೆದರಿದ್ದ. “ಆ ಮರದ ತಂಟೆಗೆ ಹೋಗೊದು ಬೇಡ. ಅದರಲ್ಲಿ ಪ್ರೇತ ಇದೆ ಎನ್ನುತ್ತಿದ್ದರು’ ಎಂದ. ಮರ ಉರುಳಿಸುವ ಕಾಂಟ್ರಾಕ್ಟ್ ತಗೊಂಡಿದ್ದ ಜಾನ್ ನಕ್ಕ. “ಅದನ್ನೆಲ್ಲ ನಂಬುತ್ತೀಯಲ್ಲ. ಈ ಕಾಲದಲ್ಲಿ ಭೂತ-ಪ್ರೇತ ಏನೂ ಇಲ್ಲ’ ಎಂದ. “ಮರ ಕಡಿದು ಯಜಮಾನನ ಮನೆಗೆ ತಲುಪಿಸಿದರೆ ಕೈ ತುಂಬಾ ದುಡ್ಡು ಕೊಡುತ್ತಾನೆ. ಸುಮ್ಮನೆ ನಮ್ಮ ಜತೆ ಬಾ’ ಎಂದ ಸೋಮು ಕೊಡಲಿ ಕೈಗೆತ್ತಿಕೊಂಡ. ಒಲ್ಲದ ಮನಸ್ಸಿನಿಂದ ವೇಣು ಅವರನ್ನು ಹಿಂಬಾಲಿಸಿದ.
ಬೆಳಗ್ಗೆಯೇ ಕೆಲವು ಸಿದ್ಧತೆಗಳೊಂದಿಗೆ ಮಕ್ಕಳು ಮಾವಿನ ಮರದ ಬಳಿ ಬಂದಿದ್ದರು. ನಿಹಾಲ್ ಮತ್ತು ರಾಹುಲ್ ಮರದ ಹಿಂದೆ ಕಾಂಪೌಂಡ್‌ನ ಆಚೆ ರೆಂಬೆಗೆ ಕೊಕ್ಕೆ ಸಿಕ್ಕಿಸಿ ಎದುರಿಗೆ ಕಾಣದಂತೆ ಹಿಡಿದು ನಿಂತಿದ್ದರು. ಪಕ್ಕದಲ್ಲಿ ನಿರೂಪ್ ಮತ್ತು ಸಾನ್ವಿ ಕೈ ತುಂಬ ಮರಳು ಹಿಡಿದಿದ್ದರೆ ನೇಹಲ್ ಬಳಿ ಫಾಗಿಂಗ್ ಯಂತ್ರವಿತ್ತು. ಮಿಮಿಕ್ರಿ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದವರೆಗೆ ಹೋಗಿದ್ದ ಅದಿತಿ ಗಂಟಲು ಸರಿಪಡಿಸಿಕೊಂಡು ಮಧ್ಯದಲ್ಲಿ ನಿಂತಿದ್ದಳು.
ಮರ ಕಡಿಯುವವರ ಗುಂಪು ಬರುವುದು ಕಾಣಿಸುತ್ತಿದ್ದಂತೆ ಮಕ್ಕಳೆಲ್ಲ ಹೋರಾಟಕ್ಕೆ ಸಿದ್ಧರಾದರು. ಮೂವರು ಬಂದು ಮರದ ಬುಡದಲ್ಲಿ ತಮ್ಮ ಆಯುಧ ಇರಿಸಿದರು. ಜಾನ್ ಮರಕ್ಕೆ ಪೆಟ್ಟು ಹಾಕಲು ಮಚ್ಚು ಕೈಗೆತ್ತಿಕೊಂಡ. ಆಗಲೇ ನಿಹಾಲ್ ಮತ್ತು ರಾಹುಲ್ ಮರದ ರೆಂಬೆ ಅಲ್ಲಾಡಿಸತೊಡಗಿದರು. ಜೋರಾಗಿ ಕೇಳಿಸಿದ ಶಬ್ದಕ್ಕೆ ಮರ ಕಡಿಯುವವರು ಬೆಚ್ಚಿ ಬಿದ್ದು ಮರದ ಮೇಲೆ ನೋಡಿದರು. ಗಾಳಿ ಬೀಸದೆ ರೆಂಬೆ ಅಲುಗಾಡುವುದು ಕಂಡು ಬೆಚ್ಚಿಬಿದ್ದರು.
ಮರದ ಹಿಂದಿನಿಂದ ಹೊಗೆ ತೇಲಿ ಬರಲಾರಂಭಿಸಿತು. ಆಗ ಕೇಳಿಬಂತು ಜೋರಾದ ನಗು. ವಾಸು ಭಯದಿಂದ ನಡುಗಿದ. ಅದಿತಿ ಗೊಗ್ಗರು ಧ್ವನಿಯಲ್ಲಿ ಜೋರಾಗಿ ನಗುವ ಜತೆಗೆ ಕಾಲ್ಗೆಜ್ಜೆ ಸದ್ದು ಮಾಡಿದಳು. ಮರ ಕಡಿಯಲು ಬಂದವರ ಜಂಘಾಬಲವೇ ಉಡುಗಿತ್ತು. ಇದ್ದ ಬದ್ದ ಧೈರ್ಯ ತಂದುಕೊಂಡು ಜಾನ್ ಕೇಳಿದ “ಯಾ…ಯಾರು ನೀನು’…ಉತ್ತರವಾಗಿ ಮತ್ತೂಮ್ಮೆ ಜೋರು ನಗು ಕೇಳಿಸಿತು. ಜತೆಗೆ ರಪ ರಪ ಅಂತ ಕಲ್ಲು ಉದುರಿದವು. “ನಾನು ವಾಸವಿದ್ದಲ್ಲಿಗೇ ಬಂದು ನನ್ಯಾರು ಅಂತ ಕೇಳುತ್ತೀಯಾ ಮುಟಾuಳ?’ ಅದಿತಿ ಕಠಿಣವಾಗಿ ಕೇಳಿದಳು. ಅವಳ ಸ್ನೇಹಿತರಿಗೇ ಅಚ್ಚರಿಯಾಗುವ ರೀತಿ ಬದಲಾಗಿತ್ತು ಅವಳ ಧ್ವನಿ.
“ಕ್ಷಮಿಸಿ ಬಿಡು ತಾಯಿ’ ಎಂದ ಸೋಮು ಕೈಮುಗಿಯುತ್ತಾ. “ಇನ್ನೊಮ್ಮೆ ನನ್ನ ವಾಸಸ್ಥಾನವಾದ ಈ ಮರವನ್ನು ಕಡಿಯಲು ಮುಂದಾದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ಅದಿತಿ ಅಬ್ಬರಿಸಿದಳು. “ಇಲ್ಲ ತಾಯಿ ಇನ್ನೆಂದೂ ಈ ಕಡೆ ಬರಲ್ಲ’ ಎಂದ ಮೂವರು ತಾವು ತಂದಿದ್ದ ಆಯುಧಗಳನ್ನು ಅಲ್ಲೇ ಬಿಟ್ಟು ಓಡಿ ಹೋದರು. ಮರದ ಮೆರೆಯಿಂದ ಹೊರಬಂದ ಗೆಳೆಯರು ಮರವನ್ನು ಸುತ್ತುವರಿದು ಖುಷಿಯಿಂದ ತಬ್ಬಿಕೊಂಡರು.
– ರಮೇಶ್ ಬಳ್ಳಮೂಲೆ