Advertisement
ತಾಲೂಕಿನಲ್ಲಿ ಸುಮಾರು 5,200 ಹೆಕ್ಟರ್‌ನಲ್ಲಿ ರೈತರು ಮಾವು ಬೆಳೆದಿದ್ದಾರೆ. ಈ ಬಾರಿ ಮಾವಿನ ಮರಗಳಲ್ಲಿ ಸಾಧಾರಣ ಹೂ ಬಿಟ್ಟಿದೆ. ಮಲಗೋಬ, ರಸಪೂರಿ, ಸೇಂದೂರ, ಬಾದಾಮಿ, ರಾಮಗೋಲ್r ಸೇರಿದಂತೆ ವಿವಿಧ ತಳಿಯ ಮಾವು ಬೆಳೆಯನ್ನು ರೈತರು ಬೆಳೆದಿದ್ದಾರೆ. ಮಾಗಡಿ ತಾಲೂಕು ರಸಭರಿತ ಮಾವು ಬೆಳೆಗೆ ಹೇಳಿ ಮಾಡಿಸಿದ ಭೂಮಿ. ಕಡಿಮೆ ನೀರಿದ್ದರೂ ಸಹ, ಮಾವಿನ ಗಿಡಬೆಳೆಸಲು ಉತ್ತಮ ಭೂಮಿಯಾಗಿದೆ.
Related Articles
Advertisement
ರೈತರಿಗೆ ಮಾರ್ಗದರ್ಶ ಅಗತ್ಯ: ಮಾವು ಬೆಳೆಗಾರರ ತೋಟಗಳಿಗೆ ತೋಟಗಾರಿಕಾ ಅಧಿಕಾರಿಗಳು ಮತ್ತು ಸಂಬಂಧಪಟ್ಟ ವಿಜ್ಞಾನಿಗಳು ಭೇಟಿ ನೀಡಿ, ಮಾವಿನ ಗಿಡ, ಹೂ, ಹಣ್ಣುಗಳ ರಕ್ಷಣೆ, ರೋಗ ಬಾಧೆ ತಡೆಗೆ ಸೂಕ್ತ ಔಷಧ ವಿತರಣೆ, ಕಾಲಕಾಲಕ್ಕೆ ಸಿಂಪಡಣೆ ಮಾಡಿಸುವುದು, ತಾಂತ್ರಿಕವಾದ ಬೇಸಾಯ ಪದ್ಧತಿ ಹೀಗೆ ಅವರಿಗೆ ಮಾರ್ಗದರ್ಶನ ನೀಡುವ ಮೂಲಕ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕಿದೆ.
ವರ್ಷಕ್ಕೊಮ್ಮೆ ಮಾತ್ರ ಮಾವು ಬೆಳೆ: ವರ್ಷಕ್ಕೊಮ್ಮೆ ಮಾತ್ರ ಮಾವು ಬೆಳೆ ಬರುವುದು. ಆದರೆ, ಆಕಾಲಿಕ ಮಳೆ ಅಥವಾ ಹೊಸ ಪ್ರಯೋಗದಿಂದ ಹೈಬ್ರಿಡ್ ತಳಿಗಳು ಕೆಲವೊಮ್ಮೆ ಎರಡು ಬೆಳೆಗಳನ್ನು ನೀಡುತ್ತವೆ. ಆದರೂ ವಸಂತಕಾಲದಲ್ಲಿ ಮಾತ್ರ ಮಾವು ಸಮೃದ್ಧ ಬೆಳೆ ಬರುವುದು. ಹೈಬ್ರಿಡ್ ತಳಿ ಮಾವು ಬೆಳೆಗಾರರು ಕಾಲಕಾಲಕ್ಕೆ ಗೊಬ್ಬರ, ಔಷಧ ಸಿಂಪಡಣೆ, ನೀರು ಹಾಕಿ ಮಾವಿನ ಮರಗಳನ್ನು ತಮ್ಮ ಮಕ್ಕಳಂತೆ ರಕ್ಷಣೆ ಮಾಡಿಕೊಂಡು ಬಂದಿದ್ದಾರೆ. ಮಾವು ಬೆಳೆಯೇ ಬಹುತೇಕ ರೈತರ ಜೀವನಾಧಾರವಾಗಿದೆ.
ರಾಮಗೋಲ್ ಮಾವಿಗೆ ಬೇಡಿಕೆ: ರಾಮನಗರ ಜಿಲ್ಲೆಯಲ್ಲಿ ರಾಮಗೋಲ್ ಮಾವಿನ ಹಣ್ಣಿಗೆ ಬೇಡಿಕೆ ಹೆಚ್ಚಾಗಿದೆ. ಮಾವಿನ ಹಣ್ಣಿನ ಕಾಲ ಆರಂಭಗೊಂಡಂತೆ ರಾಮನಗರದಲ್ಲಿ ಮಾವಿನ ಮೇಳವನ್ನು ಸಹ ಏರ್ಪಡಿಸಲಾಗುತ್ತದೆ. ರಾಮಗೋಲ್ ಮತ್ತು ಬಾದಾಮಿ ಹಣ್ಣಿಗೆ ಬೇಡಿಕೆಯಿದ್ದು, ಗ್ರಾಹಕರು ದೂರದ ಊರುಗಳಿಂದ ಆಗಮಿಸಿ, ಮಾವು ಖರೀದಿಯಲ್ಲಿ ತೊಡಗುತ್ತಾರೆ. ಸುಮಾರು ಒಂದು ವಾರಗಳ ಕಾಲ ನಡೆಯುವ ಈ ಮೇಳದಲ್ಲಿ ವಿವಿಧ ತಳಿಗಳ ಮಾವಿನ ಹಣ್ಣುಗಳ ಮಾರಾಟ ಮಾಡಲಾಗುತ್ತದೆ. ರೈತರು ನೇರ ಮಾರಾಟಕ್ಕೆ ಸರ್ಕಾರ ಸಹಕಾರ ನೀಡುತ್ತದೆ. ಆದ್ದರಿಂದಲೇ ರಾಮನಗರ ಜಿಲ್ಲೆಯಲ್ಲಿ ಮಾವಿನ ಬೆಳೆ ಬೆಳೆಯಲು ರೈತರು ಹೆಚ್ಚು ಆಸಕ್ತಿ ತೋರುತ್ತಿರುವುದು.
ಜೀವನಕ್ಕೆ ಮಾವು ಬೆಳೆ ಆಧಾರ: ಮಾಗಡಿಯ ಬಹುತೇಕ ಬೆಟ್ಟಗುಡ್ಡಗಳಿಂದ ಆವೃತವಾಗಿದೆ. ಇರುವ ಭೂಮಿಯಲ್ಲಿಯೇ ಸಣ್ಣ, ಅತಿ ಸಣ್ಣ ರೈತರು ಜೀವನಕ್ಕಾಗಿ ರಾಗಿ ಬೆಳೆಯುತ್ತಿದ್ದರು. ಬರಗಾಲದಲ್ಲಿ ರಾಗಿ ಬೆಳೆಯುವುದು ಕಷ್ಟ. ಹೀಗಾಗಿ ಹೆಚ್ಚಿನ ರೈತರು ಫಲವತ್ತಾದ ಭೂಮಿಗೆ ಮಾವಿನ ಗಿಡ ನೆಟ್ಟಿದ್ದಾರೆ. ಒಂದೆರಡು ವರ್ಷ ಗಿಡ ನಾಶವಾಗದಂತೆ ರಕ್ಷಣೆ ಮಾಡುತ್ತಿದ್ದಾರೆ. ಪ್ರತಿವರ್ಷ ತಮ್ಮ ಜೀವನಕ್ಕೆ ಮಾವು ಆಧಾರವಾಗುತ್ತದೆ ಎಂಬ ನಂಬಿಕೆಯಿಂದ ರೈತರು ಮಾವು ಫಸಲಿನತ್ತ ಮುಖ ಮಾಡಿದ್ದಾರೆ. ಸರ್ಕಾರವೂ ಸಹ ತೋಟಗಾರಿಕೆ ಬೆಳೆಗಳಿಗೆ ರೈತರನ್ನು ಪ್ರೋತ್ಸಾಹಿಸುತ್ತಿದೆ. ಇದರಿಂದ ಬಹುತೇಕ ರೈತರು ತೋಟಗಾರಿಕೆ, ಹೈನುಗಾರಿಕೆಯನ್ನು ನಂಬಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.
● ತಿರುಮಲೆ ಶ್ರೀನಿವಾಸ್