ಬೆಂಗಳೂರು: ಸದಾ ಕಲಾಕೃತಿಗಳ ಕಲರವದಿಂದ ಕಳೆಗಟ್ಟುತ್ತಿದ್ದ ಚಿತ್ರಕಲಾ ಪರಿಷತ್ತಿನಲ್ಲೀಗ ಮಾವು, ಹಲಸಿನ ಹಣ್ನುಗಳ ಸುಮಧುರ ಪರಿಮಳ. ಚಿತ್ತಾರದ ಸಪ್ತ ವರ್ಣಗಳು ಕಾಣುತ್ತಿದ್ದ ಸ್ಥಳದಲ್ಲಿ, ಕೆಂಪು, ಹಳದಿ, ಹಸಿರು ಬಣ್ಣದ ಮಾವು ಮತ್ತು ಹಲಸಿನ ಹಣ್ಣುಗಳ ಮೇಳ.
ನಗರದ ಜನತೆಗೆ ತೋಟಗಾರಿಕೆ ಬೆಳೆಗಳನ್ನು ಪರಿಚಯಿಸುವ ಸಂಬಂಧ ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಚಿತ್ರಕಲಾ ಪರಿಷತ್ತಿನಲ್ಲಿ ಎರಡು ದಿನಗಳ ಮಾವು-ಹಲಸಿನ ಹಣ್ಣಿನ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಿದ್ದು, ಶನಿವಾರ ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ.ಬಿ.ಎಲ್.ಶಂಕರ್ ಮೇಳಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿ.ಎಲ್.ಶಂಕರ್, ವಿವಿಧ ರಾಜ್ಯಗಳ ರೈತರು ಬೆಳೆದಿರುವ ಮಾವು ಮತ್ತು ಹಲಸಿನ ಹಣ್ಣಿನ ಮಾರಾಟ ಮತ್ತು ಪ್ರದರ್ಶನವನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಆಯೋಜಿಸಿದೆ. ಕೃಷಿ ಕೂಡ ಲಾಭದಾಯಕ ವೃತ್ತಿ ಎಂಬುವುದನ್ನು ಈ ಮೂಲಕ ಹೇಳಲು ಹೊರಟಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಪ್ರದೇಶದ ಯುವಕರು ನಗರಗಳಿಗೆ ವಲಸೆ ಹೋಗುತ್ತಿದ್ದು, ಕೃಷಿಯಲ್ಲೂ ಒಂದು ಬದುಕಿದೆ ಎಂಬುವುದನ್ನು ತೋರಿಸಿ ಕೊಡಬೇಕಾಗಿದೆ. ಕೃಷಿ ಕ್ಷೇತ್ರದಲ್ಲಿ ಹಲವು ರೀತಿಯ ಪ್ರಯೋಗ ಮಾಡಿದರೆ ಆರ್ಥಿಕವಾಗಿ ಸದೃಢರಾಗಬಹುದು ಎಂಬುವುದನ್ನು ಮೇಳಗಳು ತೋರಿಸಿ ಕೊಡುತ್ತಿವೆ ಎಂದು ಹೇಳಿದರು.
ತಳಿಗಳ ಬಗ್ಗೆ ಪರಿಚಯ: ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ.ಎಚ್.ಎಸ್.ಸುಮಂಗಲ ಮಾತನಾಡಿ, ನಗರ ಪ್ರದೇಶದ ಬಹುತೇಕರಿಗೆ ಮಾವು-ಹಲಸಿನ ತಳಿಗಳ ಬಗ್ಗೆ ಮಾಹಿತಿ ಇಲ್ಲ. ಆ ಹಿನ್ನೆಲೆಯಲ್ಲಿ ಮಾವು ಮತ್ತು ಹಲಸಿನ ಹಣ್ಣನ್ನು ಸವಿಯುವುದರ ಜತೆಗೆ ತಳಿಗಳ ಬಗ್ಗೆ ಜನರಿಗೆ ತಿಳಿಯಲಿ ಎಂಬ ಕಾರಣಕ್ಕಾಗಿ ಮೇಳ ಆಯೋಜನೆ ಮಾಡಲಾಗಿದೆ ಎಂದರು.
ಸುಮಾರು 350 ಜಾತಿಯ ಮಾವಿನ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದೆ. ಜನ ಕೂಡ ಆಸಕ್ತಿಯಿಂದ ಪ್ರದರ್ಶನ ವೀಕ್ಷಿಸುವುದರ ಜತೆಗೆ ಸಸಿಗಳನ್ನು ಖರೀದಿಸುತ್ತಿದ್ದಾರೆ ಎಂದು ಹೇಳಿದರು.
ಸಿದ್ದು ಹಸಿಗೆ ಬೇಡಿಕೆ: ಮೇಳದಲ್ಲಿ ಅರ್ಕಾ ಪುನೀತ್, ತೋತಾಪುರಿ, ರಸಪುರಿ, ಬಾದಾಮಿ, ಬೇಗನ್‌ಪಲ್ಲಿ ಸೇರಿದಂತೆ ವಿವಿಧ ಮಾವಿನ ಹಣ್ಣಿನ ತಳಿಗಳ ಜತೆಗೆ ಎಲಿಫೆಂಟ್ ಹೆಡ್, ಲಾಲ್ ಸುಂದರಿ, ಸುವರ್ಣ ರೇಖಾ, ಗುಲಾಬ್ ಖಾಸ್ ಹೆಸರಿನ ಹಲಸಿನ ಹಣ್ಣುಗಳನ್ನು ಮಾರಾಟಕ್ಕಿಡಲಾಗಿದ್ದು, ತುಮಕೂರು ಮೂಲದ “ಸಿದ್ದು’ ಹಲಸಿಗೆ ಭಾರೀ ಬೇಡಿಕೆ ಇದೆ. ಮಾವು ಮತ್ತು ಹಲಸಿನ ಹಣ್ಣಿನಿಂದ ಮಾಡಲಾದ ಹಲವು ಬಗೆಯ ತಿನಿಸುಗಳು ಕೂಡ ಮೇಳದಲ್ಲಿ ದೊರೆಯುತ್ತವೆ.