ಬೆಂಗಳೂರು: ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣಾ ಸಂಘ (ಹಾಪ್ ಕಾಮ್ಸ್) ಸಾಮಾಜಿಕ ಅಂತರ ಕಾಯ್ದುಕೊಂಡು ಶೀಘ್ರದಲ್ಲೇ ಮಾವು ಮತ್ತು ಹಲಸಿನ ಮೇಳ ನಡೆಸಲು ತೀರ್ಮಾನಿಸಿದೆ. ಮೇ 15ರಿಂದ 20ರ ಒಳಗೆ ಮೇಳ ಆಯೋಜಿಸುವ ಕುರಿತು ಹಾಪ್‌ಕಾಮ್ಸ್ ನಿರ್ಧರಿಸಿದ್ದು, ತಿಂಗಳ ಕಾಲ ಬೆಂಗಳೂರಿನ ಈಗಿರುವ ಸುಮಾರು 220 ಮಳಿಗೆಗಳಲ್ಲೂ ಶೇ. 10ರ ರಿಯಾಯ್ತಿ ದರದಲ್ಲಿ ಮಾವು ಮತ್ತು ಹಲಸಿನ ಹಣ್ಣಿನ ಮಾರಾಟ ಪ್ರಕ್ರಿಯೆ ನಡೆಯಲಿದೆ.
ಪ್ರತಿ ವರ್ಷ ಹಾಪ್‌ಕಾಮ್ಸ್ ಮೇ 15ರ ಒಳಗೆ ಮೇಳ ಆರಂಭಿಸುತ್ತದೆ. ಈ ವರ್ಷ ಕೊರೊನಾ ಹಿನ್ನೆಲೆಯಲ್ಲಿ ಮಾರಾಟ ಪ್ರಕ್ರಿಯೆಯಲ್ಲಿ ಎಚ್ಚರವಹಿಸಲಾಗಿದ್ದು ಸಾಮಾಜಿಕ ಅಂತರದಲ್ಲಿ ಮಾವು ಮತ್ತು ಹಲಸಿನ ಹಣ್ಣುಗಳ ಮಾರಾಟ ನಡೆಯಲಿದೆ. ಈಗಾಗಲೇ ರಾಮನಗರ, ಚನ್ನಪಟ್ಟಣ ಹಾಗೂ ಬೆಂಗಳೂರು ಗ್ರಾಮಾಂತರ ಕೆಲ ಭಾಗಗಳಲ್ಲಿ ವಿವಿಧ ರೀತಿಯ ಮಾವು ಬಂದಿದೆ. ಇನ್ನೂ ಕೆಲವೇ ದಿನಗಳಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಸೇರಿ ಮತ್ತಿತರರ ಭಾಗದಲ್ಲಿ ಮತ್ತಷ್ಟು ಮಾವು ಬರಲಿದೆ ಎಂದು ಹಾಪ್ ಕಾಮ್ಸ್ ಅಧಿಕಾರಿಗಳು ಹೇಳಿದ್ದಾರೆ.
10 ಕೋಟಿ ವಹಿವಾಟು ನಿರೀಕ್ಷೆ: ಕಳೆದ ಬಾರಿಯ ಮೇಳದಲ್ಲಿ ಸುಮಾರು 750 ಟನ್ ಮಾವು ಮಾರಾಟವಾಗಿ 8 ಕೋಟಿ ರೂ.ವಹಿವಾಟು ನಡೆದಿತ್ತು. ಈ ಬಾರಿ ಸುಮಾರು 10 ಕೋಟಿ ರೂ. ವಹಿವಾಟು ನಿರೀಕ್ಷೆ ಮಾಡಲಾಗಿದೆ ಎಂದು ಹಾಪ್ ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಬಿ.ಎನ್. ಪ್ರಸಾದ್ ಹೇಳಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಮುಂಜಾಗ್ರತೆ ವಹಿಸಲಾಗುವುದು. ಸಾಮಾಜಿಕ ಅಂತರದ ಜತೆಗೆ ಸ್ಯಾನಿಟೈಸ್ ವ್ಯವಸ್ಥೆ ಮಾಡಲಾಗುವುದು. ಕೊರೊನಾ ಹಿನ್ನೆಲೆಯಲ್ಲಿ ಸಾಫ್ಟ್ ವೇರ್ ಕಂಪನಿಗಳು, ಕೆಲವು ಕಾರ್ಖಾನೆಗಳು ಬಂದ್ ಆಗಿವೆ.
ಕಳೆದ ಬಾರಿ ಸಾಫ್ಟ್ವೇರ್ ಸಂಸ್ಥೆ ಮತ್ತು ಕಾರ್ಖಾನೆಗಳಲ್ಲೂ ಉತ್ತಮ ವ್ಯಾಪಾರ ನಡೆದಿತ್ತು ಎಂದು ತಿಳಿಸಿದ್ದಾರೆ. ಮೊಬೈಲ್ ವಾಹನಗಳಲ್ಲಿ ಮಾರಾಟ:ಈ ಬಾರಿ ಸುಮಾರು 40 ಮೊಬೈಲ್ ವಾಹನಗಳಲ್ಲಿ ಮಾವು ಮತ್ತು ಹಲಸಿನ ಹಣ್ಣಿನ ಮಾರಾಟ ಪ್ರಕ್ರಿಯೆ ನಡೆಯಲಿದೆ. ಬಾದಾಮಿ, ಸೇಂದೂರ, ರಸಪುರಿ, ಅಮ್ರಪಾಲಿ, ತೋತಾಪುರಿ, ಕೇಸರಿ, ಮಲ್ಲಿಕಾ, ಮಲಗೋವಾ, ಸಕ್ಕರೆ ಗುತ್ತಿ, ಕಾಲಾಪಾಡು, ದಶೇರಿ, ರುಮೇನಿಯಾ, ನೀಲಂ ಇನ್ನೂ ಅನೇಕ ರೀತಿಯ ಹಣ್ಣುಗಳು ಮೇಳದಲ್ಲಿ ದೊರೆಯಲಿವೆ.
ಕೋವಿಡ್ ಹಿನ್ನೆಲೆಯಲ್ಲಿ ರಸ್ತೆ ಬದಿಯಲ್ಲಿ ಮಾವಿನ ಹಣ್ಣಿನ ಮಾರಾಟ ನಡೆಯುತ್ತಿಲ್ಲ. ಹೀಗಾಗಿ, ಸಾಮಾಜಿಕ ಅಂತರವನ್ನು ಕಾಯ್ದು ಕೊಂಡು ಮಾವು-ಹಲಸಿನ ಮೇಳ ನಡೆಸಲಾಗುವುದು. ಆ ಹಿನ್ನೆಲೆಯಲ್ಲಿ ಸುಮಾರು 10 ಕೋಟಿ. ರೂ.ಗಳ ವಹಿವಾಟು ನಿರೀಕ್ಷಿಸಲಾಗಿದೆ.
● ಬಿ.ಎನ್.ಪ್ರಸಾದ್, ಹಾಪ್‌ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕರು