ರಾಮನಗರ: ಉತ್ತಮ ಗುಣಮಟ್ಟ ಹಾಗೂ ರಾಸಾಯನಿಕ ಮುಕ್ತ ಮಾವಿನ ಹಣ್ಣುಗಳನ್ನು ಬೆಳೆಗಾರರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸುವ ಮತ್ತು ದಲ್ಲಾಳಿಗಳ ಹಾವಳಿ ಯನ್ನು ತಪ್ಪಿಸಿ ಬೆಳೆಗಾರರಿಗೆ ನ್ಯಾಯ ಬೆಲೆ ದೊರಕಿಸಿ ಕೊಡುವ ಉದ್ದೇಶದಿಂದ ಮಾವಿನ ಮೇಳವನ್ನು ಆಯೋಜಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ನಿರ್ದೇಶಕ ಡಾ.ಎಂ.ವಿ.ವೆಂಕಟೇಶ್ ಹೇಳಿದರು.
ನಗರದ ಜಾನಪದ ಲೋಕದ ಮುಂಭಾಗ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ, ಜಿಲ್ಲಾ ಪಂಚಾಯತ್ ತೋಟಗಾರಿಕೆ ಇಲಾಖೆ ಏರ್ಪಡಿಸಿರುವ ಮಾವು ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
‘
ಕರಸಿರಿ’ ಬ್ರಾಂಡ್ ಮೂಲಕ ಮಾರಾಟ: ಜಿಲ್ಲೆಯ ಪ್ರಮುಖವಾದ ಬೆಳೆ ಮಾವು. ಸುಮಾರು 23,350 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಪ್ರಮುಖವಾಗಿ ಬಾದಾಮಿ, ರಸಪುರಿ, ಸೇಂದೂರು, ತೋತಾ ಪುರಿ, ಮಲ್ಲಿಕಾ ಮುಂತಾದ ಥಳಿಗಳಿದ್ದು, ವಾರ್ಷಿಕ ಸುಮಾರು 2 ಲಕ್ಷ ಮೆಟ್ರಿಕ್ ಟನ್ ಮಾವನ್ನು ಉತ್ಪಾದಿಸಲಾಗುತ್ತದೆ. ರಾಜ್ಯದಲ್ಲಿ ಬೆಳೆಯುವ ಮಾವಿಗೆ ಕರಸಿರಿ ಎಂಬ ಬ್ರಾಂಡ್ ನಿಗದಿ ಮಾಡಲಾಗಿದೆ. ಇದೇ ಬ್ರಾಂಡ್‌ನಿಂದ ರಾಜ್ಯದ ಮಾವಿನ ಹಣ್ಣುಗಳು ದೇಶ, ವಿದೇಶಗಳಲ್ಲಿ ಮಾರಾಟವಾಗಲಿದೆ ಎಂದರು.
ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ. ರಾಜೇಂದ್ರ ಮಾತನಾಡಿ, ಮಾವು ಬೆಳೆಗಾರರಿಗೆ ಗ್ರಾಹಕರ ನೇರ ಮಾರುಕಟ್ಟೆ ಒದಗಿಸುವು ಉದ್ದೇಶ ದಿಂದಲೇ ಮೇಳವನ್ನು ಆಯೋಜಿಸಲಾಗಿದೆ. ತೋಟಗಾರಿಕೆ ಇಲಾಖೆಯ ಈ ಪ್ರಯತ್ನ ಶ್ಲಾಘನೀಯ. ಬೆಳೆಗಾರರು ಸಹ ಗ್ರಾಹಕರಿಗೆ ಉತ್ಕೃಷ್ಟ ಮಾವಿನ ಹಣ್ಣುಗಳನ್ನು ತಲುಪಿಸ ಬೇಕು ಎಂದು ಸಲಹೆ ನೀಡಿದರು.
ಜನನಿಬಿಡ ಸ್ಥಳದಲ್ಲಿ ಮೇಳ ಆಯೋಜಿಸಲು ಸಲಹೆ: ಇದೇ ವೇಳೆ ರೈತ ಮುಖಂಡ ಲಕ್ಷ್ಮಣಸ್ವಾಮಿ, ಅಧಿಕಾರಿಗಳೊಂದಿಗೆ ಮಾತನಾಡಿ, ಒಂದೇ ಕಡೆ 20 ಮಳಿಗೆಗಳನ್ನು ಹಾಕುವುದಕ್ಕಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಮಳಿಗೆಗಳನ್ನು ಹಾಕುವುದಕ್ಕೆ ಯೋಜನೆ ರೂಪಿಸಿ ಎಂದು ಸಲಹೆ ನೀಡಿದರು.ಜಿಪಂ ಸಿಇಒ ಮುಲ್ಲೈ ಮುಹಿಲನ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಗುಣವಂತ್, ಜಿಲ್ಲಾ ಮಟ್ಟದ ಅಧಿಕಾರಿಗಳು, ತೋಟಗಾರಿಕೆ ಸಂಘ, ಮಾವು ಬೆಳೆಗಾರರ ಸಂಘದ ಪದಾಧಕಾರಿಗಳು ಹಾಜರಿದ್ದರು.