Advertisement
50ಕ್ಕೂ ಹೆಚ್ಚು ಅಂಗಡಿಗಳು, ಸುಮಾರು 25 ಮಾರಾಟಗಾರರು, ಎರಡು ವಾರದ ಸಂತೆ ಎಂದೇ ಹೇಳಬಹುದು. ಪ್ರತಿದಿನಕ್ಕೆ ಸಾವಿರಾರು ಜನರು ಬಂದು ಆನಂದಿಸಿ, ಸ್ವಾದಿಸಿ, ಹೋಗುತ್ತಿರುವರು. ಇದೇ ಕತಾರಿನ ದೋಹಾದಲ್ಲಿರುವ ಸೂಕ್ ವಾಕಿಫ್ ನಲ್ಲಿ ನಡೆದ ಮಾವಿನ ಮೇಳ.ರಾಜಪುರಿ, ತೂತಪುರಿ, ಬಾದಾಮಿ, ನಾಟಿ, ಸಿಂಧೂರ ಇನ್ನೂ ಅನೇಕ ತಳಿಗಳ ಮಾವಿನ ಹಣ್ಣುಗಳ ಸುವಾಸನೆ ತುಂಬಿದ ಈ ಒಳಾಂಗಣ ಪ್ರದೇಶದಲ್ಲಿ, ಮಾವಿನ ಹಣ್ಣಿನ ರಸ, ಮಾವಿನಕಾಯಿ ಜೊತೆಗೆ ಉಪ್ಪು ಖಾರ, ಮಾವಿನ ಉಪ್ಪಿನಕಾಯಿ, ಮಾವಿನ ಐಸ್ ಕ್ರೀಮ್, ಮಾವಿನ ಫಲೂದ, ಮಾವಿನ ಲಸ್ಸಿ ಹೀಗೆ ವೈವಿಧ್ಯಮಯ ರುಚಿಕರ ರಸಭರಿತ ಮಾವಿನ ತಿಂಡಿ ಮತ್ತು ಪಾನಿಯಗಳು ಎಲ್ಲರನ್ನೂ ಆಕರ್ಷಿಸಿತು.
ನಿಜವಾಗಲೂ ಅದ್ಭುತ ದೃಶ್ಯವಲ್ಲವೇ? ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಕೇರಳ, ಮಧ್ಯಪ್ರದೇಶ, ಗೋವಾ ಇನ್ನಿತರ ರಾಜ್ಯಗಳಿಂದ ಆಮದು ತರಿಸಿದ ಮಾವಿನ ಹಣ್ಣುಗಳು. ಕತರಿನ ಭಾರತೀಯ ದೂತಾವಾಸದ ನೇತೃತ್ವದಲ್ಲಿ ಐಬಿಪಿಸಿ (ಭಾರತೀಯ ವ್ಯವಹಾರ ಹಾಗೂ ವೃತ್ತಿ ನಿರತ ಮಂಡಳಿಯ) ಸಹಯೋಗದೊಂದಿಗೆ ಏರ್ಪಡಿಸಿದ್ದ ಎರಡು ವಾರಗಳ ಮಾವಿನ ಮೇಳವು, ದಿನಾಂಕ 8 ಜೂನ್ 2024ರಂದು ಸಂಪನ್ನಗೊಂಡಿತು. ನಿಜಕ್ಕೂ ಅದ್ದೂರಿ ಯಶಸ್ಸು ಕಂಡದ್ದು ಹಣ್ಣಿನ ರಾಜನೆ! ಈ ಮೇಳವನ್ನು ಆಯೋಜಿಸಲು ಹಲವು ಸಂಘ ಸಂಸ್ಥೆಗಳು ಕೈಜೋಡಿಸಿದ್ದವು. ಅದರಲ್ಲಿ ಪ್ರಮುಖವಾದದು ಕತಾರಿನ ಭಾರತೀಯ ಸಂಸ್ಕೃತಿಕ ಕೇಂದ್ರ (ಐಸಿಸಿ). ಪ್ರತ್ಯೇಕವಾಗಿ ಐಸಿಸಿ ಉಪಾಧ್ಯಕ್ಷರಾದ ಕರ್ನಾಟಕ ಮೂಲದವರಾದ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಕತಾರಿನ ಹಲವಾರು ಅಧಿಕಾರಿಗಳು, ಭಾರತೀಯ ರಾಜದೂತವಾಸದ ಅಧಿಕಾರಿಗಳು, ಸ್ಥಳೀಯ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಮಳಿಗೆಗಳು ಹಾಗೂ ಉಪಹಾರ ಕೇಂದ್ರಗಳ ಮುಖ್ಯಸ್ಥರೊಂದಿಗೆ ಚರ್ಚಿಸಿ, ಸಮಾಲೋಚಿಸಿ, ಈ ಬೃಹತ್ ಗಾತ್ರದ ಮಾವಿನ ಮೇಳವನ್ನು ಆಯೋಜಿಸಲು ಭಾಗಿಯಾಗಿ, ಯಶಸ್ಸಿಗೆ ಕಾರಣಕರ್ತರುಗಳಲ್ಲಿ ಒಬ್ಬರಾಗಿದ್ದಾರೆ.