ಧಾರವಾಡ: ತೋಟಗಾರಿಕೆ ಇಲಾಖೆ, ಕರ್ನಾಟಕ ರಾಜ್ಯ ಮಾವು ಅಭಿವೃದ್ದಿ ಮತ್ತು ಮಾರಾಟ ನಿಗಮ ಹಾಗೂ ಜಿಪಂ ಸಹಯೋಗದಲ್ಲಿ ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಹಮ್ಮಿಕೊಂಡಿರುವ ಮಾವು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಶನಿವಾರ ಚಾಲನೆ ದೊರೆಯಿತು. ಮೊದಲ ದಿನವೇ ಗ್ರಾಹಕರಿಂದ ಉತ್ತಮ ಸ್ಪಂದನೆ ಕೂಡ ಲಭಿಸಿದೆ.
ದರ ನಿಗದಿ ಪದ್ಧತಿಗೆ ತಿಲಾಂಜಲಿ: ಪ್ರತಿ ಸಲ ಮೇಳದಲ್ಲಿ ಮಾವಿನ ತಳಿಯ ಅನುಸಾರವಾಗಿ ತೋಟಗಾರಿಕೆ ಇಲಾಖೆಯೇ ದರ ನಿಗದಿ ಮಾಡಿ, ಆ ದರಪಟ್ಟಿ ಅನುಸಾರ ಮಾವು ಬೆಳೆಗಾರರು ಮಾರಾಟ ಮಾಡಬೇಕಿತ್ತು. ಆದರೆ ಈ ಸಲ ತೋಟಗಾರಿಕೆ ಇದಕ್ಕೆ ತಿಲಾಂಜಲಿ ಹಾಕಿದೆ. ತಳಿ ಅನುಸಾರ ದರ ನಿಗದಿ ಮಾಡುವುದರಿಂದ ನಷ್ಟ ಆಗುತ್ತಿದೆ ಎಂಬ ಬೆಳೆಗಾರರ ಮಾತಿಗೆ ತೋಟಗಾರಿಕೆ ಇಲಾಖೆ ಮಣೆ ಹಾಕಿದೆ. ಬೆಳೆಗಾರರು ಹಾಗೂ ಗ್ರಾಹಕರ ಮಧ್ಯೆಯೇ ದರ ಹೊಂದಾಣಿಕೆ ನಡೆಯುತ್ತಿದೆ. ಹೀಗಾಗಿ ವಿವಿಧ ತಳಿಯ ಮಾವಿನ ಹಣ್ಣುಗಳು ಡಜನ್‌ಗೆ 100 ರಿಂದ 400 ರೂ.ವರೆಗೂ ಮಾರಾಟ ಆಗುತ್ತಲಿವೆ.
Advertisement
ಜಿಲ್ಲೆಯ ರೈತರಿಂದ ನೇರವಾಗಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಗೂ ನೈಸರ್ಗಿಕ ವಿಧಾನದಿಂದ ಮಾಗಿಸಿದ ಹಣ್ಣುಗಳನ್ನು ತಲುಪಿಸುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಮಾವು ಮೇಳ ಮಾವು ಪ್ರಿಯರ ಗಮನ ಸೆಳೆಯುವಂತೆ ಮಾಡಿದೆ. ಬೆಳಗ್ಗೆಯೇ ಮೇಳ ಚಾಲನೆ ಪಡೆದುಕೊಂಡರೂ ಸಂಜೆ 4 ಗಂಟೆಗೆ ಜಿಪಂ ಸಿಇಓ ಡಾ| ಬಿ.ಸಿ. ಸತೀಶ ಅಧಿಕೃತ ಚಾಲನೆ ನೀಡಿದರು. ಇವರಿಗೆ ಅಪರ ಜಿಲ್ಲಾಧಿಕಾರಿ ಡಾ| ಸುರೇಶ ಇಟ್ನಾಳ, ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ, ಹಾಪಕಾಮ್ಸ್ ಅಧ್ಯಕ್ಷ ಈಶ್ವರಚಂದ್ರ ಹೊಸಮನಿ ಸಾಥ್ ನೀಡಿದರು. ಬಳಿಕ ಮಾವು ಮಳಿಗೆಗಳಿಗೆ ಭೇಟಿ ನೀಡಿ ಹಣ್ಣಿನ ರುಚಿ ಕೂಡ ಸವಿದರು.
8-10 ಬಗೆಯ ಹಣ್ಣು ಖರೀದಿಗೆ; 78 ತಳಿ ಹಣ್ಣು ಪ್ರದರ್ಶನಕ್ಕೆ
60ಕ್ಕೂ ಹೆಚ್ಚು ಮಳಿಗೆಗಳಲ್ಲಿ 8-10 ಬಗೆಯ ತಳಿಯ ಹಣ್ಣಿಗಳು ಮಾರಾಟಕ್ಕೆ ಇದ್ದು, ಗ್ರಾಹಕರು ಮೇಳಕ್ಕೆ ಆಗಮಿಸಿ ಈ ಹಣ್ಣಿನ ರುಚಿ ಸವಿಯಬಹುದು. ಇನ್ನೂ ಮಾವು ಪ್ರದರ್ಶನದಲ್ಲಿ ಶುಗರ್ ಬೇಬಿ, ಪೆದ್ದರಸಂ, ಸಕ್ಕರೆ ಗುಟ್ಟಲಿ, ಮಲ್ಲಿಕಾ, ಆಪೂಸ್, ಮಂಟಪ, ಅಡಿಕೆ ಮಾವು, ಲಾಗ್ರಾ, ಇಸ್ರೇಲ್ನ ಹೊಸ ತಳಿ ಸೇರಿದಂತೆ 78 ಬಗೆಯ ಮಾವಿನ ಹಣ್ಣುಗಳನ್ನು ನೋಡಿ ಆನಂದಿಸಬಹುದು. ಅಷ್ಟೇಯಲ್ಲಿ ದೇಶಿ ತಳಿಯ ಮಾವುಗಳನ್ನು ಇಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ. ಜೊತೆಗೆ ಸಸ್ಯ ಸಂತೆಯೂ ಗಮನ ಸೆಳೆದಿದೆ.
ಜಿಲ್ಲೆಯಲ್ಲಿ ಶೇ.5ರಿಂದ 10 ಮಾವು ಉತ್ಪಾದನೆ ಈ ಸಲ ಕಡಿಮೆ ಆಗಿದೆ. ಆದರೂ ಮೇಳಕ್ಕೆ ಭರಪೂರ ಮಾವಿನ ಬಗೆ ಬಗೆಯ ಹಣ್ಣುಗಳು ಬಂದಿದ್ದು, ಧಾರವಾಡ ಅಷ್ಟೇ ಅಲ್ಲದೆ ಬೆಳಗಾವಿ, ಹಾವೇರಿ ಸೇರಿದಂತೆ ಸುತ್ತಮುತ್ತಲಿನ ಮಾವು ಬೆಳೆಗಾರರೂ ಪಾಲ್ಗೊಂಡಿದ್ದಾರೆ. ಈ ಸಲ 2 ಕೋಟಿ ರೂ. ವಹಿವಾಟು ಆಗುವ ನಿರೀಕ್ಷೆ ಇದೆ. ಭರ್ಜರಿ ಆಗಿ ಮಾರಾಟ ಆಗುವ ಉತ್ತಮ ಹಣ್ಣಿನ ತಳಿಗೆ ಬಹುಮಾನ ಸಹ ನೀಡಲಾಗುವುದು. -ಡಾ| ರಾಮಚಂದ್ರ ಮಡಿವಾಳ, ಉಪನಿರ್ದೇಶಕ, ತೋಟಗಾರಿಕೆ ಇಲಾಖೆ
ಈ ಹಿಂದಿನ ಎರಡು ವರ್ಷದ ಮಾವು ಮೇಳದಲ್ಲಿ ಭರ್ಜರಿ ವ್ಯಾಪಾರ ಆಗಿತ್ತು. ಆದರೆ ಈ ಸಲ ಹಣ್ಣಿನ ಇಳುವರಿಯೇ ಕಡಿಮೆ ಆಗಿದೆ. ನಮ್ಮ ತೋಟದ 66 ಮಾವಿನ ಮರಗಳ ಪೈಕಿ 10 ಮರಗಳು ಹಣ್ಣೇ ನೀಡಿಲ್ಲ. ಈಗಿರುವ ಹಣ್ಣುಗಳನ್ನು ತೆಗೆದುಕೊಂಡು ಒಳ್ಳೆ ಬೆಲೆ ಸಿಗುವ ನಿರೀಕ್ಷೆಯಲ್ಲಿ ಬಂದಿದ್ದೇವೆ. –ಚೆನ್ನಮ್ಮ, ವ್ಯಾಪಾರಸ್ಥೆ, ಜೊಗೆಯಲ್ಲಾಪುರ
ಮೊದಲ ದಿನ 1759 ಡಜನ್ ಮಾರಾಟ; 3 ಲಕ್ಷ ರೂ. ವಹಿವಾಟು
ಶನಿವಾರ ಬೆಳಗ್ಗೆಯಿಂದ ಸಂಜೆವರೆಗೆ 1759 ಡಜನ್ ಹಣ್ಣು ಮಾರಾಟ ಆಗಿದ್ದು, ಅಂದಾಜು 3 ಲಕ್ಷ ರೂ.ಗಿಂತ ಹೆಚ್ಚು ವಹಿವಾಟು ಆಗಿದೆ. ಬೆಳಗ್ಗೆ 8ರಿಂದ ಸಂಜೆ 8 ಗಂಟೆವರೆಗೆ ಮೇಳ ನಡೆಯಲಿದೆ. ರವಿವಾರ ಮಾವು ಪ್ರಿಯರು ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮೇ 26ರಿಂದ ಮೇ 30ರ ವರೆಗೆ ಒಟ್ಟು ಐದು ದಿನಗಳ ಕಾಲ ಮೇಳ ನಡೆಯಲಿದ್ದು, ಒಂದು ವೇಳೆ ರೈತರಿಂದ ಬೇಡಿಕೆ ಬಂದರೆ ಮತ್ತೆರಡು ದಿನ ವಿಸ್ತರಿಸಿ ಒಟ್ಟು 7 ದಿನಗಳ ಕಾಲ ಮೇಳ ನಡೆಯುವಂತೆ ಸಿದ್ಧತೆ ಮಾಡಿಕೊಳ್ಳಲಾಗಿದೆ.