ಚನ್ನಪಟ್ಟಣ: ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಾವು ಬೆಳೆಗೆ ವಿಮೆ ಮಾಡಿಸುವವರ ಸಂಖ್ಯೆ ಅಧಿಕವಾಗುತ್ತಿದೆ. ರಾಮನಗರ ಜಿಲ್ಲೆ ಹಾಗೂ ಚನ್ನಪಟ್ಟಣ ತಾಲೂಕಿನ ರೈತರಲ್ಲಿ ಬೆಳೆ ವಿಮೆ ಬಗ್ಗೆ ಜಾಗೃತಿ ಹೆಚ್ಚಾಗುತ್ತಿದ್ದು, ತೋಟಗಾರಿಕೆ ಇಲಾಖೆಯ ಸಹಕಾರದೊಂದಿಗೆ ಮಾವು ಬೆಳೆಗೆ ವಿಮೆ ಮಾಡಿಸುವವರ ಸಂಖ್ಯೆ ಜಿಲ್ಲೆಯಲ್ಲಿ ಅದರಲ್ಲೂ ವಿಶೇಷವಾಗಿ ಚನ್ನಪಟ್ಟಣ ತಾಲೂಕಿನಲ್ಲಿ ಅಧಿಕವಾಗಿರುವುದು ಈ ವರ್ಷ ದಾಖಲಾಗಿದೆ.
2022ರಲ್ಲಿ ದಾಖಲೆಯ ಸಂಖ್ಯೆಯಲ್ಲಿ ಜಿಲ್ಲೆಯ ಮಾವು ಬೆಳೆಗಾರರು ವಿಮೆ ಸೌಲಭ್ಯ ಮಾಡಿಸಿಕೊಂಡಿ ದ್ದಾರೆ. ಈ ವರ್ಷ ಬರೋಬ್ಬರಿ 4,789 ರೈತರು ನೋಂದಣಿ ಮಾಡಿಕೊಂಡಿದ್ದು, ಒಟ್ಟು, 1.41 ಕೋಟಿ ರೂ. ಮೊತ್ತದ ಹಣವನ್ನು ವಿಮಾ ಕಂಪನಿಗೆ ವಂತಿಗೆ ಯಾಗಿ ಪಾವತಿ ಮಾಡಿದ್ದಾರೆ. ಇದರಲ್ಲಿ ಚನ್ನಪಟ್ಟಣ ತಾಲೂಕಿನ ಮಾವು ಬೆಳೆಗಾರರೇ ಹೆಚ್ಚಾಗಿ ವಿಮೆ ಮಾಡಿಸಿದವರ ಪಟ್ಟಿಯಲ್ಲಿದ್ದಾರೆ ಎಂದು ತೋಟಗಾ ರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಆರ್.ವಿವೇಕ್ ಉದಯವಾಣಿಗೆ ಮಾಹಿತಿ ನೀಡಿದರು.
ಮಾವು ಬೆಳೆಯುವ ಜಿಲ್ಲೆಗಳಲ್ಲಿ 2ನೇ ಸ್ಥಾನ: ರಾಮನಗರ ಜಿಲ್ಲೆಯು ರಾಜ್ಯದಲ್ಲಿಯೇ ಅತಿ ಹೆಚ್ಚು ಮಾವು ಬೆಳೆಯುವ ಜಿಲ್ಲೆಗಳಲ್ಲಿ ಎರಡನೇ ಸ್ಥಾನದಲ್ಲಿ ಇದೆ. ಇಲ್ಲಿನ 33 ಸಾವಿರ ಹೆಕ್ಟೇರ್‌ನಲ್ಲಿ ಮಾವು ಕೃಷಿ ನಡೆದಿದೆ. 28 ಸಾವಿರಕ್ಕೂ ಹೆಚ್ಚು ಕುಟುಂಬಗಳು ಈ ಕೃಷಿಯನ್ನು ಅವಲಂಬಿಸಿವೆ. ಹವಾಮಾನ ವೈಪರೀತ್ಯದಿಂದಾಗಿ ಈಚಿನ ದಿನಗಳಲ್ಲಿ ಮಾವು ಬೆಳೆ ಸಹ ಅನಿಶ್ಚಿತತೆ ಎದುರಿಸುತ್ತಿದೆ. ಇಂತಹ ಸಂದರ್ಭಗಳಲ್ಲಿ ವಿಮೆಯು ರೈತರ ಕೈ ಹಿಡಿಯಲಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಎಚ್. ಆರ್.ವಿವೇಕ್ ಅವರು.
ಎಸ್‌ಬಿಐ ಜನರಲ್ ಇನ್ಶೂರೆನ್ಸ್ ಕಂಪನಿಯ ಜವಾಬ್ದಾರಿ: ಜಿಲ್ಲೆಯಲ್ಲಿ ಎಸ್‌ಬಿಐ ಜನರಲ್ ಇನ್ಶೂರೆನ್ಸ್ ಕಂಪನಿಯು ಮಾವು ವಿಮೆಯ ಜವಾಬ್ದಾರಿ ಹೊತ್ತಿದೆ. ಬೆಳೆ ನಷ್ಟದ ಸಂದರ್ಭಗಳಲ್ಲಿ ರೈತರಿಗೆ ಪ್ರತಿ ಹೆಕ್ಟೇರ್‌ಗೆ ಗರಿಷ್ಠ 80 ಸಾವಿರ ರೂ.ವರೆಗೂ ಪರಿಹಾರ ಪಡೆಯುವ ಅವಕಾಶ ಇದೆ. ವಿಮೆ ಮೊತ್ತದ ಶೇ.39.56ರಷ್ಟು ಹಣವು ವಂತಿಗೆಯ ರೂಪದಲ್ಲಿ ವಿಮೆ ಕಂಪನಿಗೆ ಪಾವತಿ ಆಗುತ್ತಿದೆ.
Related Articles
ಸರ್ಕಾರದಿಂದಲೂ ಪಾವತಿ: ಪ್ರತಿ ಹೆಕ್ಟೇರ್ ವಿಮೆಗೆ ಒಟ್ಟು 31,648 ರೂ. ಹಣ ಪಾವತಿಸಲಾಗುತ್ತಿದೆ. ಇದರಲ್ಲಿ ಶೇ.12.5ರಂತೆ, 10 ಸಾವಿರ ರೂ. ಅನ್ನು ಕೇಂದ್ರ ಸರ್ಕಾರ, ಶೇ.22.06ರಂತೆ, 17,648 ರೂ. ವಂತಿಗೆಯನ್ನು ರಾಜ್ಯ ಸರ್ಕಾರ ಭರಿಸುತ್ತದೆ. ರೈತರು ತಮ್ಮ ಪಾಲಿನ ಶೇ.5ರಷ್ಟು ವಂತಿಗೆಯಾಗಿ ಪ್ರತಿ ಹೆಕ್ಟೇರ್‌ಗೆ, 4 ಸಾವಿರ ರೂ. ಕಟ್ಟಬೇಕಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಲ್ಲಿಸಬೇಕಾದ ದಾಖಲಾತಿಗಳು: ಸಾಮಾನ್ಯ ವಾಗಿ ಪ್ರತಿ ವರ್ಷ ಮುಂಗಾರಿನ ಆರಂಭ ದೊಂದಿಗೆ ಬೆಳೆ ವಿಮೆಗೆ ನೋಂದಣಿಯೂ ಆರಂಭಗೊಳ್ಳುತ್ತದೆ. ರೈತರು ಬೆಳೆ ಸಾಲದ ಅರ್ಜಿಗಳೊಂದಿಗೆ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಸ್ವಯಂಘೋಷಿತ ಬ್ಯಾಂಕ್ ವಿವರಗಳನ್ನು ನೀಡಿ ತಮ್ಮ ಹತ್ತಿರದ ಬ್ಯಾಂಕ್, ಸಾಮಾನ್ಯ ಕೇಂದ್ರ, ಗ್ರಾಮ ಒನ್, ನೋಂದಾಯಿತ ಎಫ್ಪಿಒಗಳ ಮೂಲಕ ವಿಮೆಗೆ ನೋಂದಾಯಿಸಬಹುದಾಗಿದೆ.
ಪರಿಹಾರದ ಲೆಕ್ಕಾಚಾರ: ಹವಾಮಾನ ವೈಪರೀತ್ಯ ದಿಂದ ಆಗುವ ನಷ್ಟದ ಅಂದಾಜಿನ ಲೆಕ್ಕಾಚಾರದ ಮೇಲೆ ಪರಿಹಾರದ ಮೊತ್ತವು ನಿಗದಿ ಆಗುತ್ತದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು (ಕೆಎಸ್‌ಎನ್ ಡಿಎಂಸಿ) ಪ್ರತಿ ಗ್ರಾಮ ಪಂಚಾ ಯಿತಿ ಮಟ್ಟದಲ್ಲಿ ಮಳೆ ಮಾಪಕಗಳನ್ನು ಅಳವಡಿ ಸಿದ್ದು, ಅದರ ವರದಿಯನ್ನು ಪರಿಗಣಿಸಲಾಗುತ್ತದೆ. ಜೊತೆಗೆ ತಾಪಮಾನ, ಗಾಳಿಯ ವೇಗ, ಆದ್ರತೆ ಇತ್ಯಾದಿ ಅಂಶಗಳೂ ನಿರ್ಣಾಯಕ ಆಗಿವೆ.
ಮಾವು ಬೆಳೆ ಇರುವ ಪ್ರತಿ ಹೆಕ್ಟೇರ್‌ಗೆ ಒಟ್ಟು 31,648 ರೂ. ಅನ್ನು ವಿಮೆಯ ರೂಪದಲ್ಲಿ ಪಾವತಿಸಬೇಕಾಗುತ್ತದೆ. ಇದರಲ್ಲಿ ಶೇ.12.5 ರಂತೆ 10 ಸಾವಿರ ಹಣವನ್ನು ಕೇಂದ್ರ ಸರ್ಕಾರ, ಶೇ.22.06 ರಂತೆ 17,648 ವಂತಿಗೆಯನ್ನು ರಾಜ್ಯ ಸರ್ಕಾರ ಭರಿಸುತ್ತದೆ. ರೈತರು ತಮ್ಮ ಪಾಲಿನ ಶೇ.5ರಷ್ಟು ವಂತಿಗೆಯಾಗಿ ಪ್ರತಿ ಹೆಕ್ಟೇರ್‌ಗೆ 4 ಸಾವಿರ ರೂ. ಕಟ್ಟಬೇಕಾಗುತ್ತದೆ. – ಎಚ್.ಆರ್.ವಿವೇಕ್, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ, ಚನ್ನಪಟ್ಟಣ.
ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಳೆ ಮಾಪಕಗಳನ್ನು ಅಳವಡಿಸಿದ್ದು, ಅದರ ವರದಿಯನ್ನು ಪರಿಗಣಿಸಲಾಗುತ್ತದೆ. ಜೊತೆಗೆ ತಾಪಮಾನ, ಗಾಳಿಯ ವೇಗ, ಆದ್ರತೆ ಇತ್ಯಾದಿ ಅಂಶಗಳು ಮಾವು ಬೆಳೆ ವಿಮೆಗೆ ನಿರ್ಣಾಯಕ ಆಗಿವೆ. – ಕೆ.ಸುಧೀಂದ್ರ, ಪಿಡಿಒ, ವಿರುಪಾಕ್ಷಿಪುರ ಗ್ರಾಪಂ.
ರಾಮನಗರ ಜಿಲ್ಲೆಯು ಮಾವು ಬೆಳೆಗೆ ಹೆಸರುವಾಸಿಯಾಗಿದೆ. ಅದರೆ, ಹವಾಮಾನ ವೈಪರೀತ್ಯದಿಂದಾಗಿ ಇತ್ತೀಚಿನ ದಿನಗಳಲ್ಲಿ ಮಾವು ಬೆಳೆ ಸಹ ಅನಿಶ್ಚಿತತೆ ಎದುರಿಸುತ್ತಿದೆ. ಇಂತಹ ಸಂದರ್ಭಗಳಲ್ಲಿ ವಿಮೆಯು ರೈತರ ಕೈಹಿಡಿಯಲಿದೆ. ಚನ್ನಪಟ್ಟಣ ತಾಲೂಕಿನ ಮಾವು ಬೆಳೆಗಾರರು ಎಚ್ಚೆತ್ತು ಜಿಲ್ಲೆಯಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ವಿಮೆ ಪಾವತಿ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ. – ಪುಟ್ಟೇಗೌಡನದೊಡ್ಡಿ ಪುಟ್ಟರಾಜು, ಮಾವು ಬೆಳೆಗಾರ, ಚನ್ನಪಟ್ಟಣ.
-ಎಂ ಶಿವಮಾದು