Advertisement
ಹವಾಮಾನ ವೈಪರೀತ್ಯದಿಂದಾಗಿ ಹಾಗೂ ಅಧಿಕ ಮಳೆಯಾಗಿದ್ದರಿಂದ ಪ್ರಸಕ್ತ ವರ್ಷದ ಬೇಸಿಗೆ ಹಂಗಾಮಿನಲ್ಲಿ ತೋಟಗಾರಿಕೆ ತಜ್ಞರ ಅಂದಾಜಿನಂತೆ ಶೇ. 30ರಷ್ಟು ಮಾವು ಬೆಳೆ ಕುಂಠಿತಗೊಳ್ಳಲಿದೆ. ಈಗಾಗಲೇ ಹೊಲ, ತೋಟಗಳಲ್ಲಿ ಮಾವಿನ ಮರಕ್ಕೆ ಹೂ ಮೆತ್ತಿಕೊಂಡಿವೆ. ಕಡಲೆಯಷ್ಟು ಕಾಯಿಕಟ್ಟುತ್ತಿವೆ. ಇನ್ನೂ ಕೆಲವು ಕಡೆಗಳಲ್ಲಿ ಹೂ ಬಿಡಲಾರಂಭಿಸಿವೆ.
Related Articles
Advertisement
ಮಾದನಹಿಪ್ಪರಗಾ ವಲಯ, ನಿರಗುಡಿ, ಖಜೂರಿ, ಬೇಟಜೇವರ್ಗಿ, ಚಲಗೇರಾ, ಹಳ್ಳಿಸಲಗರ, ಮದಗುಣಕಿ, ಕೊಡಲಹಂಗರಗಾ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ 90ರಿಂದ 100 ಹೆಕ್ಟೇರ್ ಮಾವಿನ ಬೆಳೆಯಿದೆ. ಪ್ರಮುಖವಾಗಿ ಕೇಸರ ತಳಿ, ಮಲಿಕ್, ಬೇನಶಾನ್, ದಸಹಾರಿ ಬೆಳೆಯಲಾಗುತ್ತಿದೆ. ಮಳೆ ಪ್ರಮಾಣ ಹೆಚ್ಚಿದ್ದರಿಂದ ಬಹುತೇಕ ಕಡೆ ಈ ಬಾರಿ ಶೇ. 30ರಷ್ಟು ಕಡಿಮೆ ಪ್ರಮಾಣದ ಇಳುವರಿ ಬರಬಹುದು ಎಂದು ಕೆವಿಕೆ ಮತ್ತು ತೋಟಗಾರಿಕೆ ಅಧಿಕಾರಿಗಳು ಅಂದಾಜಿಸಿದ್ದಾರೆ.
ಜಿಗಿ ಹುಳಕ್ಕೆ ರೋಗಾರ ಅಥವಾ ಇಮಿಡಾ ಕೀಟನಾಶ ಸಿಂಪಡಣೆ ಮಾಡಬೇಕು. ಬೂದಿ ರೋಗ ನಿವಾರಣೆಗೆ ನೀರಿನಲ್ಲಿ ಕರಗುವ ಗಂಧಕ ಮತ್ತು ಮ್ಯಾಂಕೋಜೆಮ್ ಶಿಲಿಂಧ್ರನಾಶಕಗಳನ್ನು ಪ್ರತಿ 15 ದಿನಕ್ಕೆ ಸಿಂಪಡಣೆ ಮಾಡಬೇಕು. ಇದರ ಜೊತೆಗೆ ಮ್ಯಾಂಗೋಸ್ಪೇಷಲ್ ಎನ್ನುವ ಲಘು ಪೋಷಕಾಂಶಗಳನ್ನು ಪ್ರತಿಲೀಟರ್ ನೀರಿಗೆ ನಾಲ್ಕು ಗ್ರಾಂನಂತೆ ಎರಡು ವಾರಕ್ಕೊಮ್ಮೆ ಕಾಯಿಕಟ್ಟುವ ವರೆಗೆ ಸಿಂಪಡಣೆ ಮಾಡಬೇಕು. ಕಾಯಿ ಹಣ್ಣಾಗುವ ಹೊತ್ತಿನಲ್ಲಿ ಮಾವಿನ ನೊಣಗಳ ಹತೋಟಿಗೆ ಈಗಿನಿಂದಲೇ ಮೋಹಕ ಬಲೆಗಳನ್ನು ಬಳಕೆ ಮಾಡಿ ಹತೋಟಿಗೆ ತರಬಹುದು. -ಶಂಕರಗೌಡ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ
-ಮಹಾದೇವ ವಡಗಾಂವ