Advertisement

ಬೇಸಿಗೆಗಾಗಿ ಮಾವಿನ ಸೌಂದರ್ಯ ವರ್ಧಕಗಳು

03:50 AM Apr 14, 2017 | Team Udayavani |

ಬೇಸಿಗೆಯೆಂದರೆ ಮಾವು ತಕ್ಷಣ ನೆನಪಾಗುವುದು ಸಹಜ. ವಿಟಮಿನ್‌ “ಎ’, ವಿಟಮಿನ್‌ “ಸಿ’ ಅಧಿಕವಿರುವುದರಿಂದ ಮಾವು ಚರ್ಮದಲ್ಲಿ ಉತ್ಪತ್ತಿಯಾಗುವ “ಕೊಲ್ಲೇಜನ್‌’ ಅಂಶವನ್ನು ವರ್ಧಿಸಿ ತ್ವಚೆಗೆ ವಿಶಿಷ್ಟ ಹೊಳಪು ಹಾಗೂ ಕಾಂತಿ ಉಂಟುಮಾಡುತ್ತದೆ.
ಈ ಕೆಳಗೆ ಮಾವಿನ ಸುಲಭ ಸೌಂದರ್ಯವರ್ಧಕಗಳನ್ನು ತಿಳಿಸಲಾಗಿದೆ.

Advertisement

ಮಾವು ಹಾಗೂ ಹಾಲಿನ ಫೇಸ್‌ಮಾಸ್ಕ್ ಸಹಜ ಚರ್ಮವುಳ್ಳವರಿಗೆ ಇದು ಉತ್ತಮ ಫೇಸ್‌ಪ್ಯಾಕ್‌.
ವಿಧಾನ: 5 ಚಮಚ ಚೆನ್ನಾಗಿ ಕಳಿತ ಮಾವಿನ ಹಣ್ಣಿನ ತಿರುಳಿನ ಪೇಸ್ಟ್‌ , 3 ಚಮಚ ಕುದಿಸಿ ತಣಿಸಿದ ಹಾಲು- ಇವೆರಡನ್ನೂ ಚೆನ್ನಾಗಿ ಬೆರೆಸಿ ಸ್ವಲ್ಪ ಜೇನು ಸೇರಿಸಿ ಮುಖಕ್ಕೆ ಲೇಪಿಸಬೇಕು. 20 ನಿಮಿಷಗಳ ಬಳಿಕ ತಣ್ಣೀರಿನಲ್ಲಿ ತೊಳೆದರೆ ಮುಖದ ಕಾಂತಿವರ್ಧಕ. ಮಾವು, ಹಾಲು, ಓಟ್‌ಮೀಲ್‌ ಫೇಸ್‌ಮಾಸ್ಕ್ ಮಾವಿನ ಹಣ್ಣಿನ ತಿರುಳು 5 ಚಮಚ, ಹಾಲು 5 ಚಮಚ ಹಾಗೂ ಓಟ್‌ಮೀಲ್‌ನ ಪುಡಿ 3 ಚಮಚ- ಇವೆಲ್ಲವನ್ನೂ ಚೆನ್ನಾಗಿ ಮಿಕ್ಸರ್‌ನಲ್ಲಿ ತಿರುವಿ, ತದನಂತರ ಪೇಸ್ಟ್‌ ತಯಾರಿಸಬೇಕು. ಇದನ್ನು ಮುಖಕ್ಕೆ ಲೇಪಿಸಿ 15 ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದರೆ ಮುಖದ ಬೆವರು, ಜಿಡ್ಡಿನಂಶ ನಿವಾರಣೆಯಾಗಿ ಮುಖದ ತ್ವಚೆ ಮೃದುವಾಗಿ ಮಿರುಗುತ್ತದೆ.

ಮಾವಿನಹಣ್ಣು -ಮೊಸರಿನ ಫೇಸ್‌ಮಾಸ್ಕ್
ಇದು ಬೆವರಿನ ಗುಳ್ಳೆ ಹೊಂದಿರುವವರಿಗೆ ಮೃದು, ಸೂಕ್ಷ್ಮ ತ್ವಚೆಯ ಲಕ್ಷಣಗಳನ್ನು ಹೊಂದಿರುವವರಿಗೆ ಉತ್ತಮ ಫೇಸ್‌ ಮಾಸ್ಕ್.

ವಿಧಾನ: ಮಾವಿನ ತಿರುಳು 3 ಚಮಚ, ಬಾದಾಮಿ ನೆನೆಸಿ ಅರೆದ ಪೇಸ್ಟ್‌ 1 ಚಮಚ, ದಪ್ಪ ಮೊಸರು 3 ಚಮಚ, 3 ಚಿಟಿಕೆ ಅರಸಿನ ಪುಡಿ ಇವೆಲ್ಲವನ್ನು ಚೆನ್ನಾಗಿ ಕಲಕಿ ಮುಖದ ತ್ವಚೆಗೆ ಲೇಪಿಸಬೇಕು. ಈ ಫೇಸ್‌ಪ್ಯಾಕ್‌ನ್ನು 20 ನಿಮಿಷದ ಬಳಿಕ ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು. ಇದರಿಂದ ಬೆವರಿನ ಗುಳ್ಳೆಗಳು ನಿವಾರಣೆಯಾಗುತ್ತವೆ. ಹಾಗೂ ಅಧಿಕ ಬೆವರಿನಿಂದ ಕಳಾಹೀನವಾದ ಮುಖದ ಕಾಂತಿ ವರ್ಧಿಸುತ್ತದೆ.

ನಿತ್ಯ ಅಥವಾ ಎರಡು ದಿನಕ್ಕೊಮ್ಮೆ ಲೇಪಿಸಿದರೆ ಹಿತಕರ.
ಮಾವಿನ ಹಣ್ಣಿನ ಬಾಡಿಸಬ್‌
ಒಂದು ಮಾವಿನ ಹಣ್ಣಿನ ತಿರುಳು, 1 ಚಮಚ ಜೇನು, 2 ಚಮಚ ಹಾಲು, 1/2 ಕಪ್‌ ಸಕ್ಕರೆ-ಇವೆಲ್ಲವನ್ನು ಮಿಕ್ಸರ್‌ನಲ್ಲಿ ಚೆನ್ನಾಗಿ ತಿರುವಬೇಕು.

Advertisement

ಇದನ್ನು ಸ್ನಾನ ಮಾಡುವ ಮೊದಲು ಮೈಗೆ ಲೇಪಿಸಿ ಚೆನ್ನಾಗಿ ಮಾಲೀಶು ಮಾಡಬೇಕು. ತದನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು. ಇದರಿಂದ ಬೇಸಗೆಯಲ್ಲಿ ಚರ್ಮ ಮೃದುವಾಗುತ್ತದೆ. ಕಾಂತಿ ವರ್ಧಿಸುತ್ತದೆ. ಬೆವರಿನ ಗುಳ್ಳೆ , ಕಜ್ಜಿ , ಮೊಡವೆ ಉಂಟಾಗುವುದಿಲ್ಲ. ಮಕ್ಕಳಲ್ಲೂ ಹಿತಕರ. ಇದನ್ನು ಎರಡು ದಿನಕ್ಕೊಮ್ಮೆ ಬಳಸಬಹುದು.

ಮಾವಿನ ಹಣ್ಣಿನ ಆ್ಯಸ್ಟ್ರಿನ್‌ಂಜೆಂಟ್‌
ಇದು ಮೊಡವೆ ನಿವಾರಕ ನೈಸರ್ಗಿಕ ಮಾವಿನ ಲೇಪ.
ವಿಧಾನ: ಮಾವಿನ ಕಾಯಿಗಳನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆಯದೇ ನೀರಲ್ಲಿ ಬೇಯಿಸಬೇಕು. ತದನಂತರ ಆರಲು ಬಿಡಬೇಕು. ಈ ನೀರನ್ನು ಮೊಡವೆಗೆ ಲೇಪಿಸಿದರೆ ಮೊಡವೆ ಶೀಘ್ರ ನಿವಾರಣೆಯಾಗುತ್ತದೆ. ದಿನಕ್ಕೆ 2-3 ಬಾರಿ ಲೇಪಿಸಬೇಕು.

ಇದನ್ನು ಚೆನ್ನಾಗಿ ಕುದಿಸಿ, ಆರಿಸಿ ದಪ್ಪ ನೀರನ್ನು ತೆಗೆಯಬೇಕು. ಆರಿದ ಬಳಿಕ ಬೆವರಿನ ಗುಳ್ಳೆಗಳಿಗೆ ಲೇಪಿಸಿ, 10 ನಿಮಿಷಗಳ ಬಳಿಕ ತೊಳೆದರೆ ಬೆವರಿನ ಗುಳ್ಳೆ , ಮೊಡವೆ ಕಲೆಗಳು ನಿವಾರಣೆಯಾಗಿ ಮುಖ ಶುಭ್ರ ಹಾಗೂ ಸ್ನಿಗ್ಧವಾಗುತ್ತದೆ.
ಹೀಗೆ ಮಾವು ಬೇಸಿಗೆಯ ಒಂದು ಉತ್ತಮ ನೈಸರ್ಗಿಕ ಸೌಂದರ್ಯವರ್ಧಕವಾಗಿದೆ.

ಡಾ| ಅನುರಾಧಾ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next