Advertisement
ಕ್ಷೇತ್ರದಲ್ಲಿನ ಪ್ರಮುಖ ಪ್ರತಿಸ್ಪರ್ಧಿಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ನ ಪ್ರಮುಖ ನಾಯಕರು ಜಿಲ್ಲೆಗೆ ಆಗಮಿಸಿ, ಚುನಾವಣ ಪ್ರಚಾರ ಸಭೆಗಳಿಗೆ ಈಗಾಗಲೇ ಮುಹೂರ್ತ ಇಟ್ಟಿದ್ದಾರೆ. ಪ್ರತಿಪಾದನೆ-ಆಪಾದನೆ, ಸಾಧನೆ-ವೈಫಲ್ಯಗಳನ್ನು ಎರಡೂ ಪಕ್ಷಗಳು ಪಟ್ಟಿ ಮಾಡಿಕೊಂಡು, ಮತದಾರರ ಮುಂದಿಡುವ ಕಾರ್ಯ ಆರಂಭಿಸಿವೆ. ಬಿಜೆಪಿ ಪಾಲಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಗಳು ಚುನಾವಣೆಯ ಪ್ರಮುಖ ಅಸ್ತ್ರ. ಅತ್ತ ಕಾಂಗ್ರೆಸ್‌ಗೆ ಹಾಲಿ ಸಂಸದರ ಆಡಳಿತ ವೈಫಲ್ಯಗಳೇ ಪ್ರಚಾರದ ಸರಕು.
ಅಭ್ಯರ್ಥಿ ಮುಖ್ಯವಲ್ಲ, ಬದಲಿಗೆ ಪಕ್ಷ ಮುಖ್ಯ ಎಂದು ಪ್ರತಿಪಾದಿಸಿಕೊಂಡು ಬಂದಿರುವ ಬಿಜೆಪಿ, ಪ್ರಧಾನಿ ಮೋದಿ ಅವರ ಸಾಧನೆಗಳನ್ನು ಚುನಾವಣೆಯಲ್ಲಿ ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ. ಹಾಲಿ ಸಂಸದ ನಳಿನ್ ಅವರು ಮೋದಿಯವರ ಸಾಧನೆಗಳ ಜತೆಗೆ, ಕಳೆದ 5 ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ಧಿ ಯೋಜನೆಗಳಿಗೆ ತಂದಿರುವ ಅನುದಾನಗಳ ಪಟ್ಟಿಯನ್ನು ಜನರ ಮುಂದೆ ಇಡುತ್ತಿದ್ದಾರೆ. ಇದರ ಜತೆಗೆ ಸಮಾರಂಭಗಳನ್ನು ಆಯೋಜಿಸಿ ಕೇಂದ್ರ ಸರಕಾರದ ಕಾರ್ಯಕ್ರಮಗಳನ್ನು ಫಲಾನುಭವಿಗಳಿಗೆ ವಿತರಿಸುವ, ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿ ಹಾದು ಹೋಗುತ್ತಿರುವ ಮೂರು ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಕಾಮಗಾರಿಗಳಲ್ಲಿ ಆಗಿರುವ ಹಿನ್ನಡೆ, ಬಿಜೆಪಿ ಪಾಲಿಗೆ ಈ ಬಾರಿಯ ಚುನಾವಣೆಯಲ್ಲಿ ಒಂದಷ್ಟು ಕಿರಿಕಿರಿ ಸೃಷ್ಟಿಸುವ ಸಾಧ್ಯತೆಯಿದೆ. ಸಂಸದರ ವಿರುದ್ಧ ಇದನ್ನೇ ಪ್ರಮುಖ ಚುನಾವಣ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ.
Related Articles
ಕಳೆದ 28 ವರ್ಷಗಳಿಂದ ಕೈತಪ್ಪಿ ಹೋಗಿರುವ ಕ್ಷೇತ್ರದಲ್ಲಿ ಈ ಬಾರಿಯಾದರೂ ಗೆಲ್ಲಲೇಬೇಕು ಎಂದು ಪಣ ತೊಟ್ಟಿರುವ ಕಾಂಗ್ರೆಸ್, ಆ ನಿಟ್ಟಿನಲ್ಲಿ ಈಗಾಗಲೇ ತನ್ನ ಚುನಾವಣ ಲೆಕ್ಕಾಚಾರ ಮತ್ತು ತಂತ್ರಗಾರಿಕೆಯನ್ನು ಆರಂಭಿಸಿದೆ. ಮೋದಿ ಸರಕಾರದ ವೈಫಲ್ಯಗಳನ್ನು ಎತ್ತಿ ತೋರಿಸುವುದಕ್ಕಿಂತಲೂ ಹೆಚ್ಚಾಗಿ, ಕಟೀಲು ಅವರ ವೈಫಲ್ಯಗಳನ್ನು ಪಟ್ಟಿ ಮಾಡಿ, ಚುನಾವಣೆಯಲ್ಲಿ ಅವುಗಳನ್ನೇ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಿದೆ. ಕಾಂಗ್ರೆಸ್ ನಾಯಕರ ಪತ್ರಿಕಾಗೋಷ್ಠಿ, ಪಕ್ಷದ ಸಭೆಗಳಲ್ಲಿ ಇದೇ ಪ್ರಮುಖ ವಿಚಾರಗಳಾಗಿ ಪ್ರಸ್ತಾವನೆಯಾಗುತ್ತಿವೆ. ನಾನಾ ಕಾರಣಗಳಿಂದಾಗಿ ಬಿ.ಸಿ.ರೋಡ್-ಅಡ್ಡಹೊಳೆ ಚತುಷ್ಪಥ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿರುವುದು, ಪಂಪ್‌ವೆಲ್ ಮತ್ತು ತೊಕ್ಕೊಟ್ಟು ಪ್ಲೆ„ಓವರ್‌ಗಳ ಕಾಮಗಾರಿ ಆರಂಭಗೊಂಡು 8 ವರ್ಷಗಳಾದರೂ ಇನ್ನೂ ಪೂರ್ಣಗೊಳ್ಳದಿರುವುದು, ಕುಲಶೇಖರ-ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಆರಂಭ ವಿಳಂಬ, ಸುರತ್ಕಲ್ ಟೋಲ್‌ಗೇಟ್ ಶುಲ್ಕ…ಮುಂತಾದ ವಿಚಾರಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕರು ಈಗಾಗಲೇ ಸಂಸದರ ವಿರುದ್ಧ ಟೀಕಾಸ್ತ್ರಗಳನ್ನು ಪ್ರಯೋಗಿಸುತ್ತಿದ್ದಾರೆ.
Advertisement
ನಳಿನ್‌ಗೆ ಟಿಕೆಟ್ ಗ್ಯಾರಂಟಿಸತತವಾಗಿ ಎರಡು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿ, ಇದೀಗ ಹ್ಯಾಟ್ರಿಕ್ ಸಾಧನೆಯ ನಿರೀಕ್ಷೆಯಲ್ಲಿರುವ ಹಾಲಿ ಸಂಸದ ನಳಿನ್ ಕುಮಾರ್ ಕಟೀಲು ಈ ಬಾರಿಯೂ ಪಕ್ಷದ ಟಿಕೆಟ್ ಪಡೆಯುವುದು ಬಹುತೇಕ ಖಚಿತ. ಇನ್ನು ಮೈತ್ರಿ ಪಕ್ಷಗಳ ನಡುವಿನ ಸೀಟು ಹಂಚಿಕೆ ಗೊಂದಲ ಇಲ್ಲಿಲ್ಲ. ಏಕೆಂದರೆ ಇಲ್ಲಿ ಜೆಡಿಎಸ್ ಹೆಚ್ಚು ಪ್ರಾಬಲ್ಯ ಹೊಂದಿಲ್ಲ. ಹೀಗಾಗಿ ಜೆಡಿಎಸ್ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವುದು ಬಹುತೇಕ ಖಚಿತ. ಆದರೆ ಕಾಂಗ್ರೆಸ್ ಪಾಳಯದಲ್ಲಿ ಇನ್ನೂ ಅಭ್ಯರ್ಥಿ ಯಾರು ಎಂಬ ಬಗ್ಗೆ ಸ್ಪಷ್ಟ ಚಿತ್ರಣ ದೊರಕಿಲ್ಲ. ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್, ಐವನ್ ಡಿ’ಸೋಜ, ವಿನಯ ಕುಮಾರ್ ಸೊರಕೆ ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿವೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ, ಪಕ್ಕದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ಕುರಿತು ತಳುಕು ಹಾಕಿಕೊಂಡಿರುತ್ತದೆ. ಜತೆಗೆ ಈ ಬಾರಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಮುಸ್ಲಿಮ್ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂಬ ಬಲವಾದ ಬೇಡಿಕೆಯೂ ಸಮುದಾಯದ ನಾಯಕರಿಂದ ಕೇಳಿ ಬಂದಿದೆ. ಕಳೆದ 5 ವರ್ಷಗಳಲ್ಲಿ ಕ್ಷೇತ್ರಕ್ಕೆ ಒಟ್ಟು 16,000 ಕೋ. ರೂ.ಗಳ ಅನುದಾನ ತಂದಿದ್ದೇನೆ. ಇತ್ತೀಚೆಗೆ ಸುಮಾರು 4,000 ಕೋ. ರೂ. ವೆಚ್ಚದ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಾಗಿದೆ ಎಂಬುದು ಸಂಸದರ ಪ್ರತಿಪಾದನೆ. ಆದರೆ ಸಂಸದರ ಸಾಧನೆಗಳನ್ನು ಪ್ರಶ್ನಿಸುತ್ತಿರುವ ಕಾಂಗ್ರೆಸ್ ನಾಯಕರು, ಇದರಲ್ಲಿ ಬಹುತೇಕ ಯೋಜನೆಗಳು ಹಿಂದಿನ ಯುಪಿಎ ಸರಕಾರದ ಅವಧಿಯಲ್ಲಿ ಮಂಜೂರು ಆಗಿರುವಂತದ್ದು ಎನ್ನುತ್ತಿದ್ದಾರೆ. ಅಲ್ಲದೆ ಕಳೆದ 10 ವರ್ಷಗಳಲ್ಲಿ ಸಂಸದರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ದಾಖಲೆ ಬಿಡುಗಡೆ ಮಾಡುವಂತೆ ಆಗ್ರಹಿಸುತ್ತಿದ್ದಾರೆ. ಕೇಶವ ಕುಂದರ್