ಮಂಗಳೂರು : ಮಂಗಳೂರು ಅಟೋದಲ್ಲಿ ಬಾಂಬ್ ಸ್ಪೋಟ ಪ್ರಕರಣವನ್ನು ಕೇಂದ್ರ ಸರ್ಕಾರ ಎನ್ ಐ ಎ ಗೆ ಅಧಿಕೃತವಾಗಿ ಹಸ್ತಾಂತರಿಸಿದೆ. ಆರೋಪಿ ಶಾರಿಕ್ ಹೇಳಿಕೆ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಈಗಾಗಲೇ ತನಿಖಾ ತಂಡ ಶಾರಿಕ್ ಹೇಳಿಕೆಯ ವಿಡಿಯೋ ರೆಕಾರ್ಡ್ ಮಾಡಿದೆ. ಇದರ ಜೊತೆಗೆ ಎನ್ ಐ ಎ (NIA) ಅಧಿಕಾರಿಗಳು ಇಂದಿನಿಂದ ಪ್ರತ್ಯೇಕ ಹೇಳಿಕೆ ದಾಖಲಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಹೊರಬಂದಿದೆ.
ಕುಕ್ಕರ್ ಪ್ರಕರಣದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಂಕಿತ ಉಗ್ರ ಮಹಮ್ಮದ್ ಶಾರೀಕ್‌ನನ್ನು ಬುಧವಾರ ಕೂಡ ಪೊಲೀಸರು ವಿಚಾರಣೆಗೊಳಪಡಿಸಿದ್ದರು. ಆತನ ಖಾತೆಗಳಿಗೆ ವಿದೇಶಗಳಿಂದ ಹಣ ವರ್ಗಾವಣೆ ಯಾಗಿರುವುದು ಗೊತ್ತಾಗಿತ್ತು.
ಡಾರ್ಕ್‌ವೆಬ್ ಮೂಲಕ ಶಾರೀಕ್ ಖಾತೆ ತೆರೆದಿದ್ದ. ವಿದೇಶಗಳಿಂದ ವರ್ಗಾವಣೆಯಾಗುತ್ತಿದ್ದ ಹಣವನ್ನು ರೂಪಾಯಿಗೆ ಪರಿವರ್ತಿಸಿ ಹಲವಾರು ಖಾತೆಗಳಿಗೆ ವರ್ಗಾವಣೆ ಮಾಡುತ್ತಿದ್ದ. ಮೈಸೂರಿನಲ್ಲಿ ಹಲವರ ಬ್ಯಾಂಕ್ ಖಾತೆಗೆ ಹಣ ಹಾಕಿಸಿದ್ದ ಎಂಬ ಮಾಹಿತಿ ಲಭಿಸಿದ್ದು ಅದರಂತೆ ಪೊಲೀಸರು ಮೈಸೂರಿನಲ್ಲಿ 40ಕ್ಕೂ ಅಧಿಕ ಮಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಎನ್‌ಐಎ 3 ತಂಡ: ತನಿಖೆ ಕೈಗೆತ್ತಿಕೊಳ್ಳಲು ಎನ್‌ಐಎಯ ಮೂರು ತಂಡಗಳು ಮಂಗಳೂರಿಗೆ ಆಗಮಿಸಿತ್ತು. ಈಗ ಎನ್ ಐ ಎ ಅಧಿಕಾರಿಗಳು ಪ್ರತ್ಯೇಕ ತನಿಖೆ ನಡೆಸಲಿದ್ದಾರೆ.