ಮಂಗಳೂರು: ಉತ್ತರಾಖಂಡದ ಯುವತಿಯೋರ್ವಳು ನಾಪತ್ತೆಯಾಗಿರುವ ಬಗ್ಗೆ ಮಂಗಳೂರಿನಲ್ಲಿ ಪ್ರಕರಣ ದಾಖಲಾಗಿದೆ.
ಹಿಮಾನಿ (25)ನಾಪತ್ತೆಯಾದವಳು. ಈಕೆ 2018ನೇ ಸಾಲಿನಲ್ಲಿ ಬಿಎಸ್ಎಫ್ ನಲ್ಲಿ ಮಹಾರಾಷ್ಟ್ರದಲ್ಲಿ ಕೆಲಸ ಸಿಕ್ಕಿರುವುದಾಗಿ ಹೇಳಿ ಮುಂಬಯಿಗೆ ತೆರಳಿದ್ದಳು.
ಕೆಲಸಕ್ಕೆ ಸೇರಿದ ಅನಂತರ ತಾಯಿಗೆ ಕರೆ ಮಾಡುತ್ತಿದ್ದಳು. ಈ ವರ್ಷದ ಫೆಬ್ರವರಿಯಲ್ಲಿ ಮಂಗಳೂರಿಗೆ ವರ್ಗಾವಣೆಯಾಗಿರುವುದಾಗಿ ತಿಳಿಸಿದ್ದಳು.
ಅಕ್ಟೋಬರ್ನಲ್ಲಿ ಸ್ವಲ್ಪ ಹಣದ ಆವಶ್ಯಕತೆ ಇದೆ ಎಂದಿದ್ದಳು. ಅದರಂತೆ ಅವಳ ತಾಯಿ ಗೂಗಲ್ ಪೇ ಮೂಲಕ ಹಣ ಕಳುಹಿಸಿಕೊಟ್ಟಿದ್ದರು.
ಅ.26ರಂದು ಅಪರಾಹ್ನ 12.40ರ ವೇಳೆಗೆ ಹಿಮಾನಿ ಕರೆ ಮಾಡಿ ಮಂಗಳೂರು ನಗರದ ಕೇಂದ್ರ ರೈಲು ನಿಲ್ದಾಣ ಬಳಿ ಇರುವುದಾಗಿ ಹೇಳಿದ್ದಳು.
ಆ ಬಳಿಕ ಆಕೆಯ ತಾಯಿ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು ಎಂದು ಮಂಗಳೂರು ದಕ್ಷಿಣ ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ.