Advertisement

Mangaluru: ಪ್ಲಾಸ್ಟಿಕ್‌ ಬ್ರಹ್ಮರಾಕ್ಷಸನ ತಡೆವ ಮಂತ್ರದಂಡ ಬೇಕಿದೆ !

01:14 PM Oct 18, 2024 | Team Udayavani |

ಮಹಾನಗರ: ಒಂದು ಮಾಂತ್ರಿಕ ದೃಶ್ಯವನ್ನು ಕಲ್ಪಿಸಿಕೊಳ್ಳಿ. ಗಟ್ಟಿಯಾಗಿ ಮುಚ್ಚಿಟ್ಟ ಪುಟ್ಟದೊಂದು ಕರಂಡಕ. ಅದರ ಕಟ್ಟನ್ನು ಮೆಲ್ಲಗೆ ಬಿಚ್ಚಿದಾಗ ಅಲ್ಲಿಂದ ಸಣ್ಣ ಧೂಮವೊಂದು ಹೊರಬರುತ್ತದೆ. ನಿಧಾನವಾಗಿ ಅದು ಆಕಾಶಕ್ಕೇರುತ್ತಾ ರಾಕ್ಷಸ ರೂಪವನ್ನು ತಳೆದು ಎಲ್ಲರನ್ನೂ, ಎಲ್ಲವನ್ನೂ ತಿಂದು ತೇಗುವ ಹಂತಕ್ಕೆ ತಲುಪುತ್ತದೆ! ಎರಡು ಶತಮಾನದ ಹಿಂದಿನ ಮಹಾ ಸಂಶೋಧನೆಯಾಗಿರುವ ಪ್ಲಾಸ್ಟಿಕ್‌ನ ದುರ್ಬಳಕೆಯೂ ಇದೇ ರೀತಿಯಾಗಿ ಬ್ರಹ್ಮರಾಕ್ಷಸನ ರೂಪ ತಾಳಿ ನಮ್ಮನ್ನೇ ಆಪೋಷನ ತೆಗೆದುಕೊಳ್ಳುತ್ತಿದೆ ಎಂದರೆ ತಪ್ಪಾಗಲಾರದು. ನಾವೇ ಅಲ್ಲಲ್ಲಿ ಎಸೆದ ಪ್ಲಾಸ್ಟಿಕ್‌ ಚೂರುಗಳೆಲ್ಲ  ಗಾಳಿಯಲ್ಲಿ ಹಾರಾಡಿ ಒಂದು ಮೂಟೆಯಾಗಿ, ಬಳಿಕ ಪರ್ವತವಾಗಿ ನಮ್ಮ ಕಟ್ಟಡ, ಸಮುದ್ರ, ಜನಜೀವನವನ್ನೆಲ್ಲ ನಾಶ ಮಾಡುವ ವಿಡಿಯೊ ಕಲ್ಪನೆ ಕೂಡಾ ಮುಂದೊಂದು ದಿನ ನಿಜವಾದೀತೇನೋ ಎಂಬಷ್ಟು ಆತಂಕಕಾರಿ ಪರಿಸ್ಥಿತಿ ನಿರ್ಮಾಣಗೊಂಡಿದೆ.

Advertisement

ನೀವು ನಂಬಲಾರಿರಿ.. ಮಂಗಳೂರಿನಲ್ಲಿ ಪ್ರತಿ ದಿನ ಉತ್ಪಾದನೆಯಾಗುವ ತ್ಯಾಜ್ಯ ಸುಮಾರು 300-350 ಟನ್‌. ಅದರಲ್ಲಿ  ಪ್ಲಾಸ್ಟಿಕ್‌ನ ಪಾಲೇ ಸುಮಾರು 70ರಿಂದ 80 ಟನ್‌! ಅಧ್ಯಯನವೊಂದರ ಪ್ರಕಾರ ಪ್ರತಿದಿನ ಅರಬ್ಬಿ ಸಮುದ್ರಕ್ಕೆ ನೇತ್ರಾವತಿ ನದಿಯ ಮೂಲಕ ಸೇರಿಕೊಳ್ಳುವ ಮೈಕ್ರೋ ಪ್ಲಾಸ್ಟಿಕ್‌ ತುಂಡುಗಳ ಪ್ರಮಾಣ 1.2 ಬಿಲಿಯನ್‌!

ಕುಸಿದು ಬಿದ್ದ ಪ್ಲಾಸ್ಟಿಕ್‌ ಪರ್ವತ
ಕೆಲವು ವರ್ಷಗಳ ಹಿಂದೆ ಪಚ್ಚನಾಡಿಯಲ್ಲಿ ಲೆಗೆಸಿ ವೇಸ್ಟ್‌ ಎಂದು ಕರೆಯಿಸಿಕೊಳ್ಳುವ ಹಳೇ ಕಸದ ರಾಶಿ  ಗುಡ್ಡದಂತೆಯೇ ಕುಸಿದು ಪ್ರವಾಹೋಪಾದಿಯಲ್ಲಿ ಹರಿದು ಹಲವು ಮನೆಗಳಿಗೆ ನುಗ್ಗಿದ್ದು ನಾವೆಲ್ಲ ನೋಡಿದ್ದೇವೆ. ಇದರಲ್ಲಿ ದೊಡ್ಡ ಪಾತ್ರ ಪ್ಲಾಸ್ಟಿಕ್‌ನದ್ದೇ. ಬರೀ ಹಸಿಕಸವಾದರೆ ಆ ಪರ್ವತ ಯಾವತ್ತೋ ಕರಗಿ ಹೊಗುತ್ತಿತ್ತು. ಆದರೆ, ಅದರ ನಡುವಿನ ಪ್ಲಾಸ್ಟಿಕ್‌ ತಾನೂ ಕರಗುವುದಿಲ್ಲ. ಉಳಿದ ತ್ಯಾಜ್ಯವನ್ನೂ ಕರಗಲು ಬಿಡದೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಬೆಂಗ್ರೆಯ ದ್ವೀಪಗಳು ಪ್ಲಾಸ್ಟಿಕ್‌ಮಯ
ನೀವು ಮಳೆಗಾಲ ಮುಗಿದ ಬಳಿಕ ತಣ್ಣೀರುಬಾವಿ ಬೆಂಗ್ರೆಯ ಹತ್ತಿರದ ದ್ವೀಪಗಳನ್ನೊಮ್ಮೆ ನೋಡಬೇಕು. ಅಲ್ಲಿನ ಮ್ಯಾಂಗ್ರೋವ್‌ ಕಾಡುಗಳ ತುಂಬ ಪ್ಲಾಸ್ಟಿಕ್‌ ರಾಶಿಯೇ ತುಂಬಿರುತ್ತದೆ.

ಇಷ್ಟೆಲ್ಲ ದುರಂತಗಳು ಕಣ್ಣಮುಂದೆ ಇದ್ದರೂ ನಾವಿನ್ನೂ ಪ್ಲಾಸ್ಟಿಕ್‌ ವಿಚಾರದಲ್ಲಿ ಸಣ್ಣ ಆತಂಕವನ್ನೂ ಹೊಂದಿಲ್ಲ ಎನ್ನುವುದು ಇನ್ನೂ ಆತಂಕಕಾರಿ. ಬೇಕಾಬಿಟ್ಟಿಯಾಗಿ ಪ್ಲಾಸ್ಟಿಕ್‌ ಬಳಸುತ್ತೇವೆ, ಎಲ್ಲೆಂದರಲ್ಲಿ ಎಸೆಯುತ್ತೇವೆ. ಸಣ್ಣ ಸ್ಯಾಶೆಯಿಂದ ಹಿಡಿದು ಕಬ್ಬಿಣದಷ್ಟು ಬಲಿಷ್ಠವಾಗಿರುವ ರಾಡ್‌ಗಳ ವರೆಗೆ ವ್ಯಾಪಕತೆಯನ್ನು ಹೊಂದಿರುವ ಪ್ಲಾಸ್ಟಿಕ್‌ ನಮ್ಮನ್ನು ಇಡಿಯಾ ಮುಳುಗಿಸುವತ್ತ ಸಾಗುತ್ತಿದ್ದರೂ ನಾವು ಮಾತ್ರ ನಿರಾತಂಕದಲ್ಲಿದ್ದೇವೆ.

Advertisement

ಜಾಗತಿಕ ತಾಪಮಾನವೂ ಸಹಿತ ವಿನಾಶಕ್ಕೆ ಕಾರಣವಾಗುವ ಪ್ಲಾಸ್ಟಿಕ್‌ ದುರ್ಬಳಕೆಯ ಬಗ್ಗೆ ದೊಡ್ಡ ಸೆಮಿನಾರ್‌ಗಳು ನಡೆಯುತ್ತವೆ. ಹೊರಗೆ ಪ್ಲಾಸ್ಟಿಕ್‌ ನೀರಿನ ಬಾಟಲ್‌ಗಳು, ಚೀಲಗಳು ಅಣಕಿಸುತ್ತವೆ. ಪ್ಲಾಸ್ಟಿಕ್‌ ನಿಯಂತ್ರಣಕ್ಕೆ ಕಾನೂನುಗಳಿವೆ, ಅವು ಕಡತದಲ್ಲೇ ಉಳಿದಿವೆ. ಹಾಗಿದ್ದರೆ ನಮ್ಮ ಕೊರಳಿಗೆ, ನಮ್ಮ ಮುಂದಿನ ಪೀಳಿಗೆಗೆ ಉರುಳಾಗಬಲ್ಲ ಈ ದೈತ್ಯನನ್ನು ನಿಯಂತ್ರಿಸುವವರು ಯಾರು?

ಉದಯವಾಣಿ ಸುದಿನ ಕಳಕಳಿ
ಈ ಎಲ್ಲ ಪ್ರಶ್ನೆ, ಆತಂಕಗಳನ್ನು ಒಡಲಲ್ಲಿ ಹೊತ್ತುಕೊಂಡು ಉದಯವಾಣಿ ಸುದಿನ ಒಂದು ಜಾಗೃತಿಯ ಸರಣಿಗೆ ಮುಂದಾಗಿದೆ. ಇದರಲ್ಲಿ ಪ್ಲಾಸ್ಟಿಕ್‌ನ ದುರ್ಬಳಕೆ, ನಿರ್ಲಕ್ಷ್ಯದಿಂದ ಆಗುತ್ತಿರುವ ಪರಿಣಾಮಗಳ ಬಗ್ಗೆ ಎಚ್ಚರಿಕೆ ಇದೆ, ನಿಯಂತ್ರಣ  ಕ್ರಮಗಳ  ಅನುಷ್ಠಾನದಲ್ಲಿರುವ ಲೋಪಗಳ ಬಗ್ಗೆ ಚರ್ಚೆ ಇದೆ ಮತ್ತು ನಾಗರಿಕರಾಗಿ ನಾವು ಏನು ಮಾಡಬಹುದು ಎನ್ನುವ ಕೆಲವು ಸಲಹೆಗಳಿವೆ, ನಿಮ್ಮಿಂದಲೂ ಸಲಹೆಗಳು ಬೇಕು.

ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್‌ ರಾಶಿ.

ಏನ್ಮಾಡೋದು, ಜಗತ್ತೇ ಪ್ಲಾಸ್ಟಿಕ್‌ಮಯ!

  • ಈಗ ಮಾರ್ಕೆಟ್‌ಗೆ ಹೋದರೆ ನಾವು ಕೊಳ್ಳುವ ವಸ್ತುಗಳ ಒಟ್ಟು ತೂಕದಲ್ಲಿ ಪ್ಲಾಸ್ಟಿಕ್‌ನ ಪಾಲೇ ದೊಡ್ಡದಿರುತ್ತದೆ. ತಲೆಗೆ ಹಾಕುವ ಒಂದು ರೂಪಾಯಿಯ ಶಾಂಪೂನಿಂದ ಹಿಡಿದು ತಿನ್ನುವ ಅನ್ನದವರೆಗೆ ಎಲ್ಲದೂ ಪ್ಲಾಸ್ಟಿಕ್‌ ಕವರ್‌ನಲ್ಲೇ ಸಿಗುವುದು. ಎಣ್ಣೆಯಿಂದ ಬೆಣ್ಣೆವರೆಗೆ, ಮೆಣಸಿನಿಂದ ಗೆಣಸಿನ ಚಿಪ್ಸ್‌ವರೆಗೆ ಯಾವುದೇ ವಸ್ತುವನ್ನು ಪ್ಲಾಸ್ಟಿಕ್‌ ಕವರ್‌, ಪ್ಲಾಸ್ಟಿಕ್‌ ಬಾಟಲ್‌, ಪ್ಲಾಸ್ಟಿಕ್‌ ಕಂಟೇನರ್‌ಗಳಲ್ಲಿ  ತುಂಬಿಟ್ಟರಷ್ಟೇ ರಾಜ ಮರ್ಯಾದೆ.
  • ಇನ್ನು ಮದುವೆ ಯಾವುದೇ ಕಾರ್ಯಕ್ರಮಗಳು ನಡೆದರೂ ಪ್ಲಾಸ್ಟಿಕ್‌ ಕಪ್‌, ಪ್ಲೇಟ್‌, ಸ್ಪೂನ್‌ಗಳೇ ಬೇಕು.
  • ಒಂದು ಗೂಡಂಗಡಿಯನ್ನು ಕಲ್ಪಿಸಿಕೊಂಡರೆ ಅದರಲ್ಲಿ ಶೇಕಡಾ 40 ಪ್ಲಾಸ್ಟಿಕ್ಕೇ ತುಂಬಿರುತ್ತದೆ. ಜಗಿಯುವ ಜರ್ದಾದಿಂದ ಹಿಡಿದು ಕುಡಿದೆಸೆಯುವ ಜ್ಯೂಸ್‌ ಬಾಟಲ್‌ಗಳ ರಾಶಿ. ಒಂದೊಂದು ಅಂಗಡಿ ಪಕ್ಕದಲ್ಲಿ ಕೇಜಿಗಟ್ಟಲೆ ಪ್ಲಾಸ್ಟಿಕ್‌ ತ್ಯಾಜ್ಯದ ರಾಶಿ!
  • ನಾವೋ ಪರಮ ಸೋಮಾರಿಗಳು. ಪ್ರತಿ ತರಕಾರಿಗೊಂದು, ಹಣ್ಣಿಗೊಂದು, ಹಾಲಿಗೊಂದು ಪ್ಲಾಸ್ಟಿಕ್‌ ಕವರ್‌ ನೇತಾಡಿಸಿಕೊಂಡು ಬರುವುದೇ ನಮಗೆ ಹೆಮ್ಮೆ. ಅಂಗಡಿಗೆ ಹೊಗುವಾಗ ಒಂದು ಸಣ್ಣ ಬಟ್ಟೆ ಚೀಲ ಹಿಡಿದುಕೊಂಡು ಹೋದರೆ ಅದೆಷ್ಟು ಪ್ಲಾಸ್ಟಿಕ್‌ ತ್ಯಾಜ್ಯ ಉಳಿಸಬಹುದು ಎಂದು ಯೋಚಿಸುವುದಕ್ಕೂ ನಮಗೆ ನಾಚಿಕೆ, ಮುಜುಗರ!

ಪ್ಲಾಸ್ಟಿಕ್‌ ನಿಯಂತ್ರಣದ ಬಗ್ಗೆ ನಿಮ್ಮ ತಂತ್ರಗಳನ್ನು ಹಂಚಿಕೊಳ್ಳಿ
ಪ್ಲಾಸ್ಟಿಕ್‌ ನಿಯಂತ್ರಣದ ಬಗ್ಗೆ ಈಗಾಗಲೇ ಅನೇಕ ಸಂಘಟನೆಗಳು, ವಿದ್ಯಾಸಂಸ್ಥೆಗಳು ಧನಾತ್ಮಕ ಕಾರ್ಯತಂತ್ರ ರೂಪಿಸಿವೆ. ಅಂತಹ ಕಾರ್ಯಗಳಿದ್ದಲ್ಲಿ ಉದಯವಾಣಿ ಮೂಲಕ ಹಂಚಿಕೊಳ್ಳಬಹುದು.
ವಾಟ್ಸಪ್‌: 9900567000

ಪ್ರತ್ಯೇಕಿಸಿ ಕೊಡುವ ತಾಳ್ಮೆಯೂ ಇಲ್ಲ!
ಮಂಗಳೂರಿನಂಥ ನಗರದಲ್ಲಿ ಕಸ ವಿಲೇವಾರಿ ವ್ಯವಸ್ಥೆ ಇದೆ. ಹಸಿ ಕಸ ಮತ್ತು ಒಣಕಸವನ್ನು ವಿಭಾಗಿಸಿ ಕೊಡಿ ಎನ್ನುವುದು ಸಂಗ್ರಾಹಕರ ದಯನೀಯ ಮನವಿ. ಆದರೆ ನಾವೋ ಕೊಳೆತ, ಕೊಳೆಯದ ಎಲ್ಲ ತ್ಯಾಜ್ಯಗಳನ್ನು ಒಟ್ಟಿಗೆ ಹಾಕಿ  ಅದನ್ನು ಪ್ಲಾಸ್ಟಿಕ್‌ ಚೀಲದಲ್ಲಿ ಕಟ್ಟಿ ಗೇಟಿನ ಬಳಿ ಇರಿಸಿ ಕೈ ತೊಳೆದುಕೊಳ್ಳುತ್ತೇವೆ. ಕಸವನ್ನು ನಿಯತ್ತಾಗಿ ವಾಹನಗಳಿಗೆ ನೀಡುವ ಸೌಜನ್ಯವೂ ಇಲ್ಲ.

ಹೆಚ್ಚಿನವರು ಕಸವನ್ನು ವಾಹನಗಳಿಗೆ ತಲುಪಿಸುತ್ತಾರೆ. ಆದರೆ ಕೆಲವರು ಅದನ್ನು ಕಂಡಕಂಡಲ್ಲಿ ಬೇಕಾಬಿಟ್ಟಿಯಾಗಿ ಎಸೆಯುತ್ತಾರೆ.

ಗಂಭೀರವಾಗಿ ಪರಿಗಣಿಸದ ಆಡಳಿತ

  • ಪ್ಲಾಸ್ಟಿಕ್‌ಗೆ ಸಂಬಂಧಿಸಿ ಕಠಿನ ನಿಯಮಾವಳಿಗಳಿವೆ. ಆದರೆ, ಈ ನಿಯಮಗಳ ನೆನಪಾಗುವುದು ರಾಜ್ಯದಿಂದಲೋ, ಕೇಂದ್ರದಿಂದಲೋ ಸೂಚನೆ ಬಂದಾಗ. ಆಗ ಅಂಗಡಿಗಳಿಗೆ ದಾಳಿ ನಡೆಯುತ್ತವೆ. ಏಕಬಳಕೆಯ ಪ್ಲಾಸ್ಟಿಕ್‌ ವಶವಾಗುತ್ತದೆ. ಮುಂದೆ ಯಥಾವತ್‌ ಪ್ಲಾಸ್ಟಿಕ್‌ ಮರುಬಳಕೆ!
  • ಪಾಲಿಕೆಯಲ್ಲಿ ಹಿಂದಿದ್ದ ಆಯುಕ್ತರೊಬ್ಬರು ಕಲ್ಯಾಣ ಮಂಟಪಗಳಂತಹ ದೊಡ್ಡಪ್ರಮಾಣದ ತ್ಯಾಜ್ಯ ಉತ್ಪಾದಕರಲ್ಲಿ ಮರುಬಳಕೆಯ ವಸ್ತುಗಳನ್ನೇ(ಸ್ಟೀಲ್‌ ಲೋಟ, ತಟ್ಟೆ, ಸ್ಪೂನ್‌)ಇತ್ಯಾದಿ ಬಳಸುವಂತೆ ಕಟ್ಟುನಿಟ್ಟಾಗಿ ಸೂಚಿಸಿದ್ದರು. ಆದರೆ, ಅದು ಮುಂದುವರಿಯಲಿಲ್ಲ.
  • ಪ್ಲಾಸ್ಟಿಕ್‌ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲು ಪಾಲಿಕೆಗೆ ಸಿಬಂದಿ ಕೊರತೆಯೂ ಇದೆ. ಈಗ ಪಾಲಿಕೆ ಆರೋಗ್ಯ ವಿಭಾಗದಲ್ಲಿರುವುದು ಇಬ್ಬರೇ ಪರಿಸರ ಎಂಜಿನಿಯರ್‌ಗಳು.

ಪ್ಲಾಸ್ಟಿಕ್‌ ಕಸ  ಹೇಗೆ ಬಿದ್ದಿದೆ ನೋಡಿ!

  •  ಮಂಗಳೂರಿನ ಯಾವುದೇ ಮಾರುಕಟ್ಟೆಗೆ ಹೋಗಿ ಅಲ್ಲಿ ರಾಶಿ ರಾಶಿ ಪ್ಲಾಸ್ಟಿಕ್‌ ಬಿದ್ದಿರುತ್ತದೆ.
  •  ಯಾವುದೇ ನದಿಯ ಬದಿಗಳನ್ನು ಗಮನಿಸಿ ಅಲ್ಲಿ ಪ್ಲಾಸ್ಟಿಕ್‌ ಕಸವೇ ತುಂಬಿರುತ್ತದೆ.
  •  ರಸ್ತೆಯ ಉದ್ದಕ್ಕೆ ಬರೀ ಬಳಸಿ ಎಸೆದ ಪ್ಲಾಸ್ಟಿಕ್‌ ಚೂರುಗಳದೇ ಸಾಮ್ರಾಜ್ಯ.
  •  ಯಾವುದೇ ರಸ್ತೆ, ಹೆದ್ದಾರಿಯ ಇಕ್ಕೆಲಗಳಲ್ಲಿ ಹಾರಾಡುವ ಪ್ಲಾಸ್ಟಿಕ್‌ಗಳದೇ ಗಾಳಿಪಟ.
  •  ಕಡಲ ತೀರದಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್‌ಗಳ ಟನ್‌ ಲೆಕ್ಕ ಕೇಳಿದರೆ ಬೆಚ್ಚಿಬೀಳಬೇಕು.

ಪ್ಲಾಸ್ಟಿಕ್‌ ಈ ಜಗತ್ತಿನ ಅತ್ಯಂತ ಉಪಯೋಗಿ ವಸ್ತು. ಆದರೆ ಅದರ ಬಳಕೆಗಿಂತ ದುರ್ಬಳಕೆಯೇ ಹೆಚ್ಚಾಗಿ, ನಿರ್ಲಕ್ಷ್ಯವೂ ಅದಕ್ಕೆ ಜತೆಯಾಗಿ ಘಾತಕವಾಗುವ ಹಂತ ತಲುಪಿದೆ. ಈಗಲೂ ಕಾಲ ಮಿಂಚಿಲ್ಲ. ಪ್ಲಾಸ್ಟಿಕ್‌ನ ಪರಿಣಾಮಕಾರಿ ನಿರ್ವಹಣೆಯ ಮೂಲಕ ಅಪಾಯವನ್ನು ತಪ್ಪಿಸಬಹುದು. ಆ ಧನಾತ್ಮಕ ಚಿಂತನೆಯೇ ಪ್ಲಾಸ್ಟಿಕ್‌ ಚಕ್ರವ್ಯೂಹ ಸರಣಿ

-ವೇಣುವಿನೋದ್‌  ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next