Advertisement

Mangaluru: ವೆನ್ಲಾಕ್‌ಗೆ ಹೊಸ ಒಪಿಡಿ ಬ್ಲಾಕ್‌ ತುರ್ತು ಅಗತ್ಯ: ಆರೋಗ್ಯ ಸಚಿವ

01:24 AM Aug 18, 2024 | Team Udayavani |

ಮಂಗಳೂರು: ವೆನ್ಲಾಕ್‌ ಆಸ್ಪತ್ರೆಯ ಹೊರರೋಗಿ ಘಟಕ ಕಟ್ಟಡವು ತೀರಾ ಹಳೆಯದಾಗಿರುವುದರಿಂದ ಹೊಸ ಒಪಿಡಿ ಬ್ಲಾಕ್‌ ನಿರ್ಮಿಸಬೇಕಿದೆ. ಹಾಗಾಗಿ ಸದ್ಯ ಮಂಜೂರಾಗಿರುವ “ಕ್ರಿಟಿಕಲ್‌ ಕೇರ್‌ ಬ್ಲಾಕ್‌’ ನಿರ್ಮಿಸುವ ಮೊತ್ತವನ್ನೇ ಹೊಂದಾಣಿಕೆ ಮಾಡಿಕೊಂಡು ಅದನ್ನು ನಿರ್ಮಿಸುವುದು ಸೂಕ್ತ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.
ಅವರು ಶನಿವಾರ ವೆನ್ಲಾಕ್‌ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಸಿ ಮಾತನಾಡಿದರು. ವೆನ್ಲಾಕ್‌ ಆಸ್ಪತ್ರೆ ಆವರಣದಲ್ಲಿ 50 ಬೆಡ್‌ನ‌ ಕ್ರಿಟಿಕಲ್‌ ಕೇರ್‌ ಬ್ಲಾಕ್‌ಗೆ 24 ಕೋಟಿ ರೂ. ಮೀಸಲಿರಿಸಲಾಗಿದೆ. ಅದೇ ಮೊತ್ತವನ್ನು ಬಳಸಿಕೊಂಡು ಒಪಿಡಿ ಬ್ಲಾಕ್‌ ನಿರ್ಮಿಸುವ ಬಗ್ಗೆ ಯೋಜನೆ ರೂಪಿಸಿ, ಆ.28ಕ್ಕೆ ತನಗೆ ವರದಿ ಸಲ್ಲಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

Advertisement

ಸಾರ್ವಜನಿಕ ಸಂಪರ್ಕಾಧಿಕಾರಿಗಳ ನೇಮಕ
900ಕ್ಕೂ ಹೆಚ್ಚು ಹಾಸಿಗೆಯ ಹಲವು ಜಿಲ್ಲೆಗಳಿಗೆ ಸೇವೆ ಸಲ್ಲಿಸುವ ದೊಡ್ಡ ಆಸ್ಪತ್ರೆಯಾಗಿರುವ ವೆನ್ಲಾಕ್‌ ಗೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡುವುದಕ್ಕೆ ಸಾರ್ವಜನಿಕ ಸಂಪರ್ಕಾಧಿ ಕಾರಿ(ಪಿಆರ್‌ಒ)ಗಳ ಅಗತ್ಯ ಇದೆ. ಅದನ್ನು ಹೆಲ್ಪ್
ಡೆಸ್ಕ್ಗೆ ನಿರ್ವಹಿಸುವುದು ಅಸಾಧ್ಯ. ಹಾಗಾಗಿ ಕನಿಷ್ಠ 2 ಪಿಆರ್‌ಒಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಿಸುವ ಬಗ್ಗೆ ಪ್ರಸ್ತಾವನೆ ಕಳುಹಿಸುವಂತೆ ಸಚಿವರು ವೆನ್ಲಾಕ್‌ ಆಸ್ಪತ್ರೆಯ ಜಿಲ್ಲಾ ವೈದ್ಯಕೀಯ ಅಧೀಕ್ಷಕಿ ಡಾ| ಜೆಸಿಂತಾ ಡಿ’ಸೋಜಾರಿಗೆ ಸಚಿವರು ಸೂಚಿಸಿದರು.

ರೋಗಿಗಳ ಆರೈಕೆ ಕುರಿತ ಸಿಬಂದಿಯ ಹೊರಗುತ್ತಿಗೆ ಸಂಸ್ಥೆಗೆ ಸರಿಯಾಗಿ ಸರಕಾರದಿಂದ ಮೊತ್ತ ಪಾವತಿಯಾಗದ ಕಾರಣ ಹೊಸ ಗುತ್ತಿಗೆದಾರರು ಬರುತ್ತಿಲ್ಲ. ಹಾಗಾಗಿ ಈ ತಿಂಗಳಿಂದಲೇ ಹಳೆ ಗುತ್ತಿಗೆದಾರರು ಸೇವೆ ಸ್ಥಗಿತಗೊಳಿಸುವ ಸಾಧ್ಯತೆಯೂ ಇದೆ ಎಂದು ಸಚಿವರ ಗಮನ ಸೆಳೆಯಲಾಯಿತು. ಆಸ್ಪತ್ರೆಯ ಒಳಚರಂಡಿ ತ್ಯಾಜ್ಯ ಸಂಸ್ಕರಣ ಘಟಕ ಕಾರ್ಯನಿರ್ವಹಿಸದೆ ತ್ಯಾಜ್ಯ ಚರಂಡಿಗೆ ಸೇರುತ್ತಿರುವ ಬಗ್ಗೆಯೂ ಸಾರ್ವಜನಿಕರ ದೂರು ಕೇಳಿಬಂತು.

ರಸ್ತೆ ಅಗಲಗೊಳಿಸುವ ಪ್ರಸ್ತಾವ
ಪ್ರಸ್ತುತ ವೆನ್ಲಾಕ್‌ ಆಸ್ಪತ್ರೆ ಆರ್‌ಎಪಿಸಿಸಿ ಕಟ್ಟಡ ಹಾಗೂ ಶವಾಗಾರದ ಮಧ್ಯೆ ಇರುವ ರೈಲ್ವೇ ಸ್ಟೇಷನ್‌ ಸಂಪರ್ಕ ರಸ್ತೆಯನ್ನು ವೆನ್ಲಾಕ್‌ ಖಾಸಗಿ ರಸ್ತೆಯಾಗಿ ಮಾರ್ಪಡಿಸುವ ಪ್ರಸ್ತಾವ ನನೆಗುದಿಗೆ ಬಿದ್ದಿದೆ. ಅದನ್ನು ತ್ವರಿತಗೊಳಿಸುವಂತೆ ಸಚಿವರು ಸೂಚಿಸಿದರು.

ಅದಕ್ಕಾಗಿ ಮಿಲಾಗ್ರಿಸ್‌ ಚರ್ಚ್‌ ಬಳಿ ಸಾಗುವ ರಸ್ತೆ ಅಗಲಗೊಳಿಸಲು ಖಾಸಗಿಯವರಿಂದ ಭೂಮಿ ಪಡೆಯಬೇಕಾಗುತ್ತದೆ. ಅಗಲಗೊಳಿಸಿದ ಬಳಿಕ ಶವಾಗಾರ ಬಳಿಯ ರಸ್ತೆಯನ್ನು ವೆನ್ಲಾಕ್‌ ಆಸ್ಪತ್ರೆಯ ಖಾಸಗಿ ರಸ್ತೆಯನ್ನಾಗಿ ಮಾಡಬಹುದು ಎಂದು ಮಂಗಳೂರು ಸ್ಮಾರ್ಟ್‌ಸಿಟಿ ಅಧಿಕಾರಿಗಳು ತಿಳಿಸಿದರು.

Advertisement

ಆಸ್ಪತ್ರೆಯ ಆರೋಗ್ಯ ರಕ್ಷಾ ನಿಧಿಯಡಿ ಲಭ್ಯವಿರುವ 21.55 ಕೋಟಿ ರೂ. ಮೊತ್ತವನ್ನು ತುರ್ತು ಸೇವೆಗಳಿಗೆ ಬಳಸುವ ನಿಟ್ಟಿನಲ್ಲಿ ರೂಪುರೇಷೆ ಹಾಕಿಕೊಳ್ಳಬೇಕು. ವೈದ್ಯಕೀಯ ಸಿಬಂದಿ, ಡಿ ಗ್ರೂಪ್‌ ನೌಕರರು, ಡಾಟಾ ಎಂಟ್ರಿಯವರ ನೇಮಕ ಮುಂತಾದ ಆವಶ್ಯಕತೆಗಳ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಆಸ್ಪತ್ರೆಯ ಅಧೀಕ್ಷಕಿಗೆ ಸಚಿವರು ಸೂಚಿಸಿದರು.

ವಾಮಂಜೂರಿನಲ್ಲಿ ಟಿಬಿ ಆಸ್ಪತ್ರೆಯ ಎರಡು ಕಟ್ಟಡ ಬಳಕೆಯಾಗದೆ ಇದ್ದು, ಅಲ್ಲಿನ 8 ಎಕರೆ ಜಾಗವನ್ನೂ ಬೇರೆ ವ್ಯವಸ್ಥೆಗೆ ಬಳಸಲು ಮುಂದಾಗುವಂತೆ ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ಹೇಳಿದರು. ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ, ಜಿಲ್ಲಾಧಿಕಾರಿ ಮುಲ್ಲೈ  ಮುಗಿಲನ್‌, ಜಿಲ್ಲಾ ಪಂಚಾಯತ್‌ ಸಿಇಒ, ಸ್ಥಳೀಯ ಕಾರ್ಪೊರೇಟರ್‌ ಎ.ಸಿ. ವಿನಯರಾಜ್‌, ಡಾ| ಆನಂದ್‌ ಉಪಸ್ಥಿತರಿದ್ದರು.

ಸರ್ಜಿಕಲ್‌ ಬ್ಲಾಕ್‌ಗೆ ಸ್ಥಳಾಂತರ
ಆದಷ್ಟೂ ಬೇಗ ವೆನ್ಲಾಕ್‌ ಹಳೆಯ ಕಟ್ಟಡದಲ್ಲಿರುವ ಪ್ರಮುಖ ವಿಭಾಗಗಳನ್ನು ಸರ್ಜಿಕಲ್‌ ಬ್ಲಾಕ್‌ಗೆ ಸ್ಥಳಾಂತರಿಸಬೇಕು. ಕ್ಯಾಶುವಲ್ಟಿ ವಿಭಾಗದಲ್ಲಿ ತುರ್ತು ಸೇವೆಗೆ ವೈದ್ಯರಿಲ್ಲದೆ ಸಮಸ್ಯೆಯಾಗುತ್ತಿದೆ ಎಂಬ ದೂರುಗಳು ಸಾರ್ವಜನಿಕರಿಂದ ಬರುತ್ತಿವೆ ಎಂದರು.

ಇದಕ್ಕೆ ಉತ್ತರಿಸಿದ ಡಾ| ಜೆಸಿಂತಾ, ಸದ್ಯ ಒಪಿಡಿ ಹಾಗೂ ಕ್ಯಾಶುವಲ್ಟಿ ವಾರ್ಡ್‌ ತೀರಾ ಚಿಕ್ಕದಾಗಿದ್ದು, ಟ್ರಯಾಜಿಂಗ್‌ ಮತ್ತಿತರ ಸೇವೆಗೆ ಜಾಗವಿಲ್ಲ, ನೂತನ ಸರ್ಜಿಕಲ್‌ ವಾರ್ಡ್‌ಗೆ ಸ್ಥಳಾಂತರಗೊಂಡ ಬಳಿಕ ತುರ್ತು ಸೇವೆ ಸರಿಯಾಗಲಿದೆ ಎಂದರು. ಕೆಲವು ದಿನಗಳಲ್ಲೇ ಆಪರೇಶನ್‌ ಥಿಯೇಟರ್‌ಗಳು, ಎಂಡೋಸ್ಕೋಪಿ ಘಟಕ, ಎಕ್ಸ್‌ರೇ, ಅಲ್ಟ್ರಾ ಸೌಂಡ್‌, ಇಎನ್‌ಟಿ, ಯುರೋಲಜಿ ಇತ್ಯಾದಿ ವಾರ್ಡ್‌ಗಳನ್ನು ಸರ್ಜಿಕಲ್‌ ಬ್ಲಾಕ್‌ಗೆ ಸ್ಥಳಾಂತರಿಸಲಾಗುವುದು ಎಂದರು.

ಕೆಎಂಸಿ ಅಸೋಸಿಯೇಟ್‌ ಡೀನ್‌ ಡಾ| ಸುರೇಶ್‌ ಕುಮಾರ್‌ ಶೆಟ್ಟಿ ಮಾತನಾಡಿ, ಕೆಎಂಸಿ ವತಿಯಿಂದ 3 ಕೋಟಿ ರೂ. ವೆಚ್ಚದ ಯಂತ್ರೋಪಕರಣಗಳಿರುವ ಕ್ಯಾಥ್‌ಲ್ಯಾಬ್‌ ಸೆಪ್ಟಂಬರ್‌ ಅಂತ್ಯದೊಳಗೆ ಕಾರ್ಯಾರಂಭಿಸಲಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next