ಮಂಗಳೂರು: ವಿಶ್ವವಿದ್ಯಾ ನಿಲಯವು ಸ್ವಾಯತ್ತ ಸಂಸ್ಥೆಯಾಗಿದ್ದು ಮಂಗಳೂರು ವಿ.ವಿ.ಯಲ್ಲಿ ಗಣೇಶ ಹಬ್ಬ ಆಚರಣೆಯ ಬಗೆಗಿನ ತೀರ್ಮಾನ ವನ್ನು ವಿ.ವಿ.ಯೇ ಕೈಗೊಳ್ಳಬೇಕು. ಅದರಲ್ಲಿ ಹೊರಗಿನವರ ಹಸ್ತಕ್ಷೇಪ ಸರಿಯಲ್ಲ.
ರಾಜ್ಯಪಾಲರು ಹಾಗೂ ಕುಲಪತಿಯವರು ಈ ಬಗ್ಗೆ ತೀರ್ಮಾನಿಸಲಿದ್ದಾರೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸೋಮವಾರ ಮಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಮಂಗಳೂರು ವಿ.ವಿ.ಶೈಕ್ಷಣಿಕವಾಗಿ ಈಗಾಗಲೇ ಬಿ ಗ್ರೇಡ್‌ಗೆ ಹೋಗಿದೆ. ಅದನ್ನು ಎ ಗ್ರೇಡ್‌ಗೆ ತರಲು ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಬೇಕೇ ವಿನಃ ಹೊರಗಿನವರು ಇತರ ವಿಷಯ ಚರ್ಚೆ ಮಾಡುವುದು ಸರಿಯಲ್ಲ ಎಂದರು.
ಕಳೆದ 40 ವರ್ಷಗಳಿಂದ ಅಲ್ಲಿ ಗಣೇಶೋತ್ಸವ ಆಚರಿಸುತ್ತಾರೆಂಬ ಮಾಹಿತಿ ಇದೆ. ಈಗ ಯಾಕೆ ವಿವಾದ ಮಾಡಲಾಗುತ್ತಿದೆ ಎಂದು ಅರ್ಥವಾಗುತ್ತಿಲ್ಲ. ವಿ.ವಿ. ಹಣ ಸಾರ್ವಜನಿಕರದ್ದು. ಅದು ಶಿಕ್ಷಣಕ್ಕೆ ಬಳಕೆ ಆಗಬೇಕು. ಕೆಲವರಿಗೆ ವೇತನ, ನಿವೃತ್ತಿ ವೇತನ ನೀಡಿಲ್ಲ. ಅವೆಲ್ಲ ಮೊದಲು ಸರಿ ಆಗಲಿ. ಹಬ್ಬ ಆಚರಣೆ ವಿವಿ ವಿವೇಚನೆಗೆ ಬಿಟ್ಟಿದ್ದು ಎಂದರು.
ಚೌತಿ ರಜೆ ಬದಲಾವಣೆಗೆ ಸಚಿವರ ಮೌನ!
ಗಣೇಶ ಚತುರ್ಥಿ ಸೆ. 19ರಂದು ಆಚರಿಸಲಾಗುತ್ತಿದ್ದು, ಸರಕಾರಿ ರಜೆ ಮಾತ್ರ ಸೆ. 18ಕ್ಕೆ ನೀಡಲಾಗಿದೆ ಎಂಬ ಬಗ್ಗೆ ಸುದ್ದಿಗಾರರು ಸಚಿವ ದಿನೇಶ್ ಗುಂಡೂರಾವ್ ಅವರ ಗಮನಕ್ಕೆ ತಂದಾಗ ನಿಖರವಾಗಿ ಉತ್ತರಿಸಲು ನಿರಾಕರಿಸಿದರು. “ಒಂದು ವೇಳೆ ಹಾಗಿದ್ದರೆ ಅದನ್ನು ಪಂಚಾಂಗ ನೋಡಿಕೊಂಡು ಸೂಕ್ತ ತೀರ್ಮಾನಕ್ಕೆ ಬಂದರೆ ಆಯಿತು’ ಎಂದಷ್ಟೇ ಹೇಳಿದರು.