Advertisement

Mangaluru University ಕುಸಿತ ಕಂಡ ಮಂಗಳೂರು ವಿ.ವಿ. ಗ್ರೇಡ್‌ ಮೇಲೆತ್ತಲು ಸಿದ್ಧತೆ

12:12 AM Nov 28, 2023 | Team Udayavani |

ಮಂಗಳೂರು: ಕರಾವಳಿ, ಕೊಡಗು ಭಾಗವಲ್ಲದೆ ಕೇರಳದ ಉತ್ತರ ಭಾಗದವರಿಗೂ ಉನ್ನತ ವ್ಯಾಸಂಗದ ತಾಣವಾದ ಮಂಗಳೂರು ವಿಶ್ವವಿದ್ಯಾನಿಲಯವು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್‌) ಮೌಲ್ಯಮಾಪನದಲ್ಲಿ “ಎ’ ಗ್ರೇಡ್‌ನಿಂದ “ಬಿ’ಗೆ ಜಾರಿದೆ. ಹಾಗಾಗಿ ಕೆಲವೊಂದು ಲೋಪದೋಷಗಳನ್ನು ಸರಿಪಡಿಸಿಕೊಂಡು ಮುಂದಿನ ಬಾರಿ ಗ್ರೇಡ್‌ ಉತ್ತಮ ಪಡಿಸಿಕೊಳ್ಳಲು ಮುಂದಾಗಿದೆ.

Advertisement

ವಿ.ವಿ.ಯ ಚರಿತ್ರೆಯಲ್ಲೇ ಇದು ಕೆಳಮಟ್ಟದ ನ್ಯಾಕ್‌ ಶ್ರೇಯಾಂಕ. ಕೆಲವು ವರ್ಷಗಳ ಮೊದಲು ವಿಶ್ವವಿದ್ಯಾನಿಲಯ “ಎ’ ಪ್ಲಸ್‌ ಗ್ರೇಡ್‌ಗೆ ಏರಿತ್ತು. ಸಾಮಾನ್ಯವಾಗಿ “ಎ’ ಗ್ರೇಡ್‌ನ‌ಲ್ಲೇ ಇರುತ್ತಿತ್ತು. ದಶಕದ ಹಿಂದೆ ಗ್ರೇಡ್‌ ಬದಲು ಸ್ಟಾರ್‌ ವ್ಯವಸ್ಥೆ ಇದ್ದಾಗಲೂ “ಫೋರ್‌ ಸ್ಟಾರ್‌’ ಪಡೆಯುವ ಮೂಲಕ ಉತ್ತಮ ಸ್ಥಾನ ಪಡೆದಿತ್ತು. ಆದರೆ ಕಳೆದ ಗ್ರೇಡಿಂಗ್‌ನಲ್ಲಿ ಮಂಗಳೂರು ವಿ.ವಿ.ಯ ಗ್ರೇಡ್‌ ಕುಸಿತ ಕಂಡು “ಬಿ’ಗೆ ಜಾರಿದೆ. ಇದಕ್ಕೆ ಬದಲಾದ ಮೌಲ್ಯಮಾಪನ ವಿಧಾನವೂ ಮುಖ್ಯ ಕಾರಣಗಳಲ್ಲೊಂದು.

ಬದಲಾದ ವಿಧಾನ
ಹಿಂದೆ ನ್ಯಾಕ್‌ ಸಮಿತಿಯ ಸದಸ್ಯರಿರುವ “ಪೀರ್‌ ಟೀಂ’ ವಿ.ವಿ.ಗೆ ಭೇಟಿಯಿತ್ತು, ಹಲವು ದಿನಗಳ ಕಾಲ ಅಧ್ಯಯನ ನಡೆಸಿ ವರದಿ ಸಲ್ಲಿಸುತ್ತಿತ್ತು ಮತ್ತು ಅದರ ಆಧಾರದಲ್ಲಿ ನ್ಯಾಕ್‌ ಗ್ರೇಡ್‌ ಇರುತ್ತಿತ್ತು. ಕಳೆದ ಬಾರಿಯಿಂದ ವಿಧಾನ ಬದಲಾಗಿದೆ. 70:30 ಅನುಪಾತದಲ್ಲಿ ಮೌಲ್ಯಾಂಕನ ನಡೆಸಲಾಗುತ್ತದೆ. ಶೇ. 70ರಷ್ಟನ್ನು ಡಾಟಾ ಪರಿಶೀಲನೆ ಮತ್ತು ದೃಢಪಡಿಸುವಿಕೆಯಿಂದ ಮಾಡಲಾಗುತ್ತದೆ. ಇದಕ್ಕೆ ಕ್ವಾಂಟಿಟೇಟಿವ್‌ ಮೆಟ್ರಿಕ್ಸ್‌ ಎನ್ನುತ್ತಾರೆ. ಎಂದರೆ ನ್ಯಾಕ್‌ನವರು ಸೂಚಿಸುವ ಹಲವು ಅಂಶಗಳ ವಿವರ, ದಾಖಲೆಗಳನ್ನು ನಿಯಮಿತವಾಗಿ ವಿ.ವಿ.ಯವರು ತಮ್ಮ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಿ ಅದನ್ನು ನ್ಯಾಕ್‌ಗೆ ಸಲ್ಲಿಸಬೇಕಾಗುತ್ತದೆ. ಇದು ನಿರಂತರವಾಗಿ ಆಗಬೇಕಾದ್ದು. ಈ ವಿಧಾನ ಮೊದಲ ಬಾರಿ. ಹಾಗಾಗಿ ಕೆಲವು ಎಡವಟ್ಟುಗಳಾಗಿರುವುದರಿಂದ ಮೌಲ್ಯ ಮಾಪನ ದಲ್ಲಿ ಕುಸಿತವಾಗಿದೆ. ಕೆಲವು ವಿಭಾಗದ ಪ್ರಾಧ್ಯಾಪಕರೂ ಕೂಡ ಈ ಮೌಲ್ಯಮಾಪನಕ್ಕೆ ಸರಿಯಾಗಿ ಸಹಕಾರ ನೀಡದಿರುವುದು ಕೂಡ ಪರೋಕ್ಷವಾಗಿ ಕುಸಿತಕ್ಕೆ ಕಾರಣ ಎಂಬ ಮಾಹಿತಿಯಿದೆ. ಎರಡನೆಯದ್ದಕ್ಕೆ ಶೇ. 30ರಷ್ಟು ಪಾಲು. ಇದು ನ್ಯಾಕ್‌ ಪೀರ್‌ ಟೀಂ ವಿಸಿಟ್‌. ಇವರು ಮಂಗಳೂರು ವಿ.ವಿ.ಗೆ “ಎ’ ಪ್ಲಸ್‌ ಗ್ರೇಡ್‌ ಕೊಟ್ಟರೂ ಅದು ಸಾಕಾಗಲಿಲ್ಲ. ಕೊನೆಯಲ್ಲಿ ಒಟ್ಟು ಗ್ರೇಡಿಂಗ್‌ನಲ್ಲಿ ಗ್ರೇಡ್‌ “ಬಿ’ಗೇ ತೃಪ್ತಿಪಡುವಂತಾಗಿದೆ.

ಈಗಲೇ ಸಿದ್ಧತೆ
ಕಳೆದ ಬಾರಿಯ ತನ್ನ ತಪ್ಪುಗಳಿಂದ ಎಚ್ಚೆತ್ತು ಕೊಂಡಿರುವ ವಿ.ವಿ. ಈ ಬಾರಿ ತನ್ನ ಆಂತರಿಕ ಗುಣಮಟ್ಟ ಖಾತರಿ ಸೆಲ್‌ (ಐಕ್ಯೂಎಸಿ) ಮೂಲಕ ಸಮರ್ಪಕ ಕ್ವಾಂಟಿಟೇಟಿವ್‌ ಮೆಟ್ರಿಕ್ಸ್‌ಗೆ ಸಜ್ಜಾಗುತ್ತಿದೆ. ಮುಂದಿನ ವರ್ಷ ಮತ್ತೆ ನ್ಯಾಕ್‌ ಗ್ರೇಡಿಂಗ್‌ಗೆ ಅರ್ಜಿ ಸಲ್ಲಿಸಿ ವ್ಯವಸ್ಥಿತವಾಗಿ ದಾಖಲೀಕರಣ ಮಾಡಲು ಸೂಚನೆಯನ್ನು ಕುಲಪತಿ ಈಗಾಗಲೇ ನೀಡಿದ್ದಾರೆ.

ಸಂಶೋಧನೆ ಹೆಚ್ಚಬೇಕಿದೆ
ಪ್ರಸ್ತುತ ವಿವಿಯ ವಿವಿಧ ವಿಭಾಗಗಳಲ್ಲಿ ಅನುಭವಿ ಉಪನ್ಯಾಸಕರು ನಿವೃತ್ತರಾಗಿದ್ದಾರೆ, ಅಂತಾರಾಷ್ಟ್ರೀಯ ಮನ್ನಣೆಯಿದ್ದವರ ಸಂಖ್ಯೆ ಕಡಿಮೆಯಾಗಿದೆ. ಹಾಗಾಗಿ ಸಂಶೋಧನೆ ಪ್ರಮಾಣ, ಗುಣಮಟ್ಟ ಇಳಿಕೆಯಾಗಿದೆ. ಇದು ಕೂಡ ಗ್ರೇಡ್‌ ಕಡಿಮೆಯಾಗಲು ಕಾರಣ. ಹೊಸಬರು ಸದ್ಯಕ್ಕೆ ಸಹಾಯಕ ಪ್ರೊಫೆಸರ್‌ಗಳಾಗಿದ್ದು, ಅವರು ಪ್ರಸ್ತುತ ಅಸೋಸಿಯೇಟ್‌ ದರ್ಜೆಗೆ ಏರತೊಡಗಿದ್ದಾರೆ. ಹಾಗಾಗಿ ಮುಂದಿನ ಬಾರಿಗೆ ಗ್ರೇಡ್‌ ಉತ್ತಮಗೊಳ್ಳುವ ನಿರೀಕ್ಷೆ ಇದೆ.

Advertisement

ಗ್ರೇಡ್‌ ಕುಸಿತದಿಂದ
ಅನುದಾನ ಖೋತಾ?
ಎ ಗ್ರೇಡ್‌ ಇದ್ದರಷ್ಟೇ ಉತ್ಕೃಷ್ಟತಾ ಕೇಂದ್ರ (ಸೆಂಟರ್‌ ಆಫ್‌ ಎಕ್ಸಲೆನ್ಸ್‌) ಸ್ಥಾಪನೆಗೆ ಬೇಕಾದ ಅನುದಾನ ಕೇಂದ್ರ ಸರಕಾರದಿಂದ ಸಿಗುತ್ತದೆ. ಬಿ ಗ್ರೇಡ್‌ಗೆ ಇದು ಸಿಗಲಾರದು. ಪಿಎಂ-ಉಶಾ (ಉಚ್ಚತರ ಶಿಕ್ಷಾ ಅಭಿಯಾನ)ದ ಅನುದಾನಕ್ಕೂ ಎ ಗ್ರೇಡ್‌ ಕಡ್ಡಾಯ. ಡಿಜಿಟಲ್‌ ಆನ್‌ಲೈನ್‌ ಶಿಕ್ಷಣ ನೀಡುವುದಕ್ಕೂ ಮಂಗಳೂರು ವಿ.ವಿ.ಗೆ ಅನುಮೋದನೆ ಸಿಗಲಾರದು. ಇವುಗಳಿಂದಾಗಿ ಆದಾಯ ಖೋತಾ ಆಗುವ ಭೀತಿ ಎದುರಾಗಿದೆ.

ಒಂದೆಡೆ ಕಳೆದ ಆರು ವರ್ಷಗಳಿಂದ ಯುಜಿಸಿ ಅಭಿವೃದ್ಧಿ ನಿಧಿಯಿಂದ ರಾಜ್ಯ ಯುನಿವರ್ಸಿಟಿಗಳಿಗೆ ಸಿಗುತ್ತಿದ್ದ ಅನುದಾನ ನಿಂತು ಹೋಗಿವೆ. ಹಾಗಾಗಿ ಮೂಲಸೌಕರ್ಯ ಅಭಿವೃದ್ಧಿ, ನಿರ್ವಹಣೆಗೆ ಸಮಸ್ಯೆಯಾಗಿದೆ. ರಾಜ್ಯ ಸರಕಾರದಿಂದ ಸಿಗುವ ಅನುದಾನ ಸಾಕಾಗದೆ ವಿವಿ ಕಂಗೆಟ್ಟಿದೆ. ಆಂತರಿಕ ಸಂಪನ್ಮೂಲವೂ ಹೆಚ್ಚುತ್ತಿರುವ ಅತಿಥಿ ಉಪನ್ಯಾಸಕರ ವೇತನ, ಪಿಂಚಣಿ ಪ್ರಯೋಜನಗಳ ನಿರ್ವಹಣೆಗೇ ಬೇಕಾಗುತ್ತದೆ.

ಸಾಮರ್ಥ್ಯ
ಆಯ್ಕೆ ಆಧರಿತ ಕ್ರೆಡಿಟ್‌ ಸಿಸ್ಟಂ, ಅತ್ಯಾಧುನಿಕ ಸಂಶೋಧನ ಕೇಂದ್ರಗಳು, ಕ್ರೀಡಾಚಟುವಟಿಕೆ, ಜನಪದ ಚಟುವಟಿಕೆಗೆ ಪ್ರೋತ್ಸಾಹ. ದೌರ್ಬಲ್ಯ, ಅವಕಾಶ ಬೋಧನಾ, ಬೋಧನೇತರ ಸಿಬಂದಿಯ ಖಾಲಿ ಹುದ್ದೆ, ಕೈಗಾರಿಕೆ-ವಿ.ವಿ. ಅಂತರ, ಮಾನವಿಕ ವಿಭಾಗಗಳ ನಿರ್ವಹಣೆ ಹೆಚ್ಚಾಗಬೇಕು, ಸಂಶೋಧನೆ ಹೆಚ್ಚಾಗಬೇಕು, ಗ್ರಂಥಾಲಯ ಬಳಕೆ ಹೆಚ್ಚಾಗಬೇಕು.

ಹಿಂದಿನ ಎರಡು ಗ್ರೇಡ್‌ಗಳು
2014ನೇ ಇಸವಿ: ಎ ಗ್ರೇಡ್‌
2000ನೇ ಇಸವಿ: 4 ಸ್ಟಾರ್‌

ನ್ಯಾಕ್‌ ಕಮಿಟಿ ಕಂಡಂತೆ
ಮಂಗಳೂರು ವಿವಿ

ಕಳೆದ ಬಾರಿ ಕ್ವಾಂಟಿಟೇಟಿವ್‌ ಮೆಟ್ರಿಕ್ಸ್‌ನಲ್ಲಿ ದಾಖಲೆಗಳ ಅಪ್‌ಲೋಡ್‌ ಮಾಡುವ ವೇಳೆ ಕೆಲವೊಂದು ಲೋಪದೋಷಗಳಾಗಿದ್ದವು, ಹಾಗಾಗಿ ಗ್ರೇಡ್‌ “ಬಿ’ಗೆ ಇಳಿಕೆಯಾಗಿತ್ತು. ಮುಂದಿನ ಬಾರಿಯ ನ್ಯಾಕ್‌ ಮೌಲ್ಯಮಾಪನಕ್ಕೆ ಸೂಕ್ತ ಸಿದ್ಧತೆ ಮಾಡಿ, ವ್ಯವಸ್ಥೆ ಸರಿಪಡಿಸಿಕೊಳ್ಳಲಾಗುತ್ತದೆ.
-ಪ್ರೊ| ಜಯರಾಜ್‌ ಅಮೀನ್‌, ಕುಲಪತಿಗಳು, ಮಂಗಳೂರು ವಿ.ವಿ.

-ವೇಣುವಿನೋದ್‌ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next