Advertisement

ಇನ್ನೂ ಕೈ ಸೇರದ ಪದವಿ ಅಂಕಪಟ್ಟಿ ; ವಿದ್ಯಾರ್ಥಿವೇತನ ಕೈ ತಪ್ಪುವ ಭೀತಿ!

12:15 AM Dec 15, 2022 | Team Udayavani |

ಮಂಗಳೂರು : ಎನ್‌ಇಪಿ ಪದವಿ ವಿದ್ಯಾರ್ಥಿಗಳ ಫಲಿತಾಂಶ ವಿಳಂಬ ಹಾಗೂ ಅಂಕಪಟ್ಟಿ ಸಿಗದೆ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದರೆ; ಮತ್ತೂಂದೆಡೆ ವಿದ್ಯಾರ್ಥಿವೇತನವೂ ಕೈತಪ್ಪುವ ಭೀತಿ ಎದುರಾಗಿದೆ.

Advertisement

ಕಟ್ಟಡ ಕಾರ್ಮಿಕ ಇಲಾಖೆ, ಪರಿಶಿಷ್ಟ ಜಾತಿ ಹಾಗೂ ಪಂಗಡ, ಹಿಂದುಳಿದ ವರ್ಗ, ವಿದ್ಯಾ ಸಿರಿ, ರೈತವಿದ್ಯಾನಿಧಿ ಸಹಿತ ವಿವಿಧ ಇಲಾಖೆಗಳ ವಿದ್ಯಾರ್ಥಿವೇತನಗಳು ಲಭ್ಯವಿದೆಯಾದರೂ ಅಂಕಪಟ್ಟಿ ಸಿಗದೆ ಇರುವುದರಿಂದ ಪದವಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವುದು ಅಸಾಧ್ಯವೆನಿಸಿದೆ.

ಒಬ್ಬ ವಿದ್ಯಾರ್ಥಿ ಒಂದು ಇಲಾಖೆಯ ವಿದ್ಯಾರ್ಥಿವೇತನ ಪಡೆಯಬಹುದು. ಕಟ್ಟಡ ಕಾರ್ಮಿಕ ಕಾರ್ಡ್‌ ಇರುವವರು ಅದೇ ವಿದ್ಯಾರ್ಥಿವೇತನಕ್ಕೆ ಅರ್ಜಿ ಹಾಕಬಹುದು. 20 ಸಾವಿರದಿಂದ 30 ಸಾವಿರ ರೂ. ಸಿಗುತ್ತದೆ. ಇದನ್ನು ಹೊರತುಪಡಿಸಿದ ಅರ್ಹ ವಿದ್ಯಾರ್ಥಿಗಳು ರೈತವಿದ್ಯಾನಿಧಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಮೊದಲ ವರ್ಷದ ಪದವಿ ವಿದ್ಯಾರ್ಥಿಗಳು ದ್ವಿತೀಯ ಪಿಯು ಅಂಕ ಪಟ್ಟಿ ನೀಡಿ ಅರ್ಜಿ ಹಾಕಬಹುದು. ಆದರೆ ದ್ವಿತೀಯ ಹಾಗೂ ತೃತೀಯ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಹಿಂದಿನ ವರ್ಷದ ಅಂಕಪಟ್ಟಿಯೇ ಬೇಕು.

ಕಾರ್ಮಿಕ ಇಲಾಖೆಯ ಅಧಿಕಾರಿಯೊಬ್ಬರು “ಉದಯವಾಣಿ’ ಜತೆಗೆ ಮಾತನಾಡಿ, “ಈ ಹಿಂದೆ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಹಾಕಿದ ಪ್ರಕಾರ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ವಿದ್ಯಾರ್ಥಿವೇತನ ಮಂಜೂರು ಮಾಡುತ್ತಿದ್ದರು. ಕೇಂದ್ರ ಕಚೇರಿಯಲ್ಲಿ ಪರಿಶೀಲನೆ ಆದ ನಂತರ “ಡಿಪಿಟಿ’ ಮುಖಾಂತರ ವಿದ್ಯಾರ್ಥಿಗಳ ಖಾತೆಗೆ ಹಣ ಬರುತ್ತಿತ್ತು. ಆದರೆ ಎಲ್ಲ ವಿದ್ಯಾರ್ಥಿವೇತನವನ್ನು ಇತ್ತೀಚೆಗೆ “ಸ್ಟೇಟ್‌ ಸ್ಕಾಲರ್‌ಶಿಪ್‌ ಪೋರ್ಟಲ್‌’ (ಎಸ್‌ಎಸ್‌ಪಿ) ಮೂಲಕವೇ ನೀಡಲಾಗುತ್ತಿದೆ. ಕಾರ್ಮಿಕರ ವಿವರ ಹಾಗೂ ವಿದ್ಯಾರ್ಥಿಗಳ ವಿವರವನ್ನು ತಾಳೆ ಮಾಡಿಕೊಂಡು ರಾಜ್ಯದಿಂದಲೇ ನೇರವಾಗಿ ವಿದ್ಯಾರ್ಥಿವೇತನ ನೀಡಲಾಗುತ್ತಿತ್ತು. ಆದರೆ ಸದ್ಯ ಮಂಗಳೂರು ವಿ.ವಿ. ವ್ಯಾಪ್ತಿಯಲ್ಲಿ ಫಲಿತಾಂಶ ಇನ್ನೂ ಬಾರದ ಕಾರಣ ಜಿಲ್ಲಾ ಮಟ್ಟದ ಕಾರ್ಮಿಕ ಇಲಾಖೆಯಿಂದ ಪರ್ಯಾಯ ವ್ಯವಸ್ಥೆ ಮಾಡಲು ಅಸಾಧ್ಯ. ಕೇಂದ್ರ ಕಚೇರಿಯಿಂದಲೇ ಈ ಬಗ್ಗೆ ಮುಂದಿನ ತೀರ್ಮಾನ ಕೈಗೊಳ್ಳಬೇಕಾಗುತ್ತದೆ’ ಎನ್ನುತ್ತಾರೆ.

ಎನ್‌ಇಪಿ; ಫಲಿತಾಂಶವೇ ಇಲ್ಲ!
ಎನ್‌ಇಪಿಗೆ ಸಿದ್ಧಪಡಿಸಿರುವ “ಯುಯುಸಿ ಎಂಎಸ್‌’ (ಸಮಗ್ರ ವಿ.ವಿ. ಹಾಗೂ ಸಮಗ್ರ ಕಾಲೇಜು ನಿರ್ವಹಣ ವ್ಯವಸ್ಥೆ) ತಂತ್ರಾಂಶ ಫಲಿತಾಂಶ ಅಪ್‌ಡೇಟ್‌ಗೆ ಹೊಂದಿಕೊಳ್ಳದ ಕಾರಣದಿಂದ ಫಲಿತಾಂಶ ವಿಳಂಬವಾಗುತ್ತಿದೆ. ಸದ್ಯ ಎನ್‌ಇಪಿ ಮೊದಲ ಸೆಮಿಸ್ಟರ್‌ನ ಮೌಲ್ಯಮಾಪನ ಪೂರ್ಣವಾಗಿದೆ. ಎಂಟ್ರಿ, ಕೋಡಿಂಗ್‌, ಡಿಕೋಡಿಂಗ್‌, ಸ್ಕ್ಯಾನ್‌, ಮ್ಯಾಪಿಂಗ್‌ ಸಹಿತ ಹಲವು ಸುತ್ತಿನ ದಾಖಲೆಗಳನ್ನು “ಯುಯುಸಿಎಂಎಸ್‌’ ತಂತ್ರಾಂಶಕ್ಕೆ ಅಪ್‌ಲೋಡ್‌ ಮಾಡುವ ಸಂದರ್ಭ ಎದುರಾದ ತಾಂತ್ರಿಕ ಎಡವಟ್ಟುಗಳಿಂದಾಗಿ ಫಲಿತಾಂಶ ನೀಡಲು ಸಾಧ್ಯವಾಗುತ್ತಿಲ್ಲ. ಜತೆಗೆ ಎನ್‌ಇಪಿ 2ನೇ ಸೆಮಿಸ್ಟರ್‌ ಮೌಲ್ಯಮಾಪನ ಈಗ ನಡೆಯುತ್ತಿದ್ದು ಫಲಿತಾಂಶ ಘೋಷಣೆ ಅನಿಶ್ಚಿತವಾಗಿದೆ.

Advertisement

ಈ ಮಧ್ಯೆ 3ನೇ ಸೆಮಿಸ್ಟರ್‌ ಪರೀಕ್ಷೆಗೆ ಸಿದ್ಧತೆ ನಡೆಯುತ್ತಿದೆ. ಮುಂದೇನು ಎಂಬ ಬಗ್ಗೆ ಖಚಿತತೆ ಯಾರಲ್ಲೂ ಇಲ್ಲ. ಅಂತೂ ಬಹುನಿರೀಕ್ಷಿತ ಎನ್‌ಇಪಿ ತರಾತುರಿಯಲ್ಲಿ ಜಾರಿಯಾಗಿ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ.

ಉತ್ತರಿಸುವವರೇ ಇಲ್ಲ
ಈ ಹಿಂದೆ ವಿದ್ಯಾರ್ಥಿವೇತನ ಕಾಲೇಜಿಗೆ ಬಂದು ಅಲ್ಲಿಂದ ವಿದ್ಯಾರ್ಥಿಗಳಿಗೆ ಚೆಕ್‌ ಮೂಲಕ ನೀಡಲಾಗುತ್ತಿತ್ತು. ಪ್ರಸ್ತುತ ಆನ್‌ಲೈನ್‌ ಮೂಲಕವೇ ಎಲ್ಲವೂ ನಡೆಯುವುದರಿಂದ ಯಾವ ಸಮಸ್ಯೆಗೂ ಕಾಲೇಜುಗಳಲ್ಲಿ ಉತ್ತರವಿಲ್ಲ; ಇಲಾಖೆಗಳನ್ನು ಸಂಪರ್ಕಿಸಿದರೆ ಆನ್‌ಲೈನ್‌ ಮುಖೇನವೇ ಖಾತೆಗೆ ಹಣ ಬರಲಿದೆ ಎನ್ನುತ್ತಾರೆ!

ಅಂಕಪಟ್ಟಿ ಸಿಗದೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಹಾಕಲು ಸಮಸ್ಯೆ ಆಗುವ ಬಗ್ಗೆ ಪರಿಶೀಲಿಸಲಾಗುವುದು. ಫಲಿತಾಂಶ ತುರ್ತಾಗಿ ನೀಡಿ ಅಂಕಪಟ್ಟಿ ನೀಡಲು ವಿ.ವಿ. ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ. ವಿದ್ಯಾರ್ಥಿವೇತನಕ್ಕೆ ಸಮಸ್ಯೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
– ಪ್ರೊ| ಪಿ.ಎಸ್‌. ಯಡಪಡಿತ್ತಾಯ, ಕುಲಪತಿ, ಮಂಗಳೂರು ವಿ.ವಿ.

Advertisement

Udayavani is now on Telegram. Click here to join our channel and stay updated with the latest news.

Next