Advertisement

ಮಂಗಳೂರು ವಿಶ್ವವಿದ್ಯಾನಿಲಯ ಶೈಕ್ಷಣಿಕ ಮಂಡಳಿ ಸಭೆ: ಏಕಕಾಲದಲ್ಲಿ 2 ಕೋರ್ಸ್‌ಗೆ ಅನುಮತಿ

12:43 AM Sep 28, 2022 | Team Udayavani |

ಮಂಗಳೂರು: ವಿದ್ಯಾರ್ಥಿಗಳು ಏಕಕಾಲದಲ್ಲಿ ಎರಡು ಕೋರ್ಸ್‌ಗಳನ್ನು ಅಧ್ಯಯನ ಮಾಡಲು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಅವಕಾಶ ನೀಡುವ ಮಹತ್ವದ ನಿರ್ಧಾರಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಅನುಮೋದನೆ ನೀಡಿದೆ.

Advertisement

ಮಂಗಳವಾರ ನಡೆದ ವಿ.ವಿ. ಶೈಕ್ಷಣಿಕ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ| ಪಿ.ಎಸ್‌. ಯಡಪಡಿತ್ತಾಯ ಈ ಮಾಹಿತಿ ನೀಡಿದರು. ಉನ್ನತ ಶಿಕ್ಷಣ ಸಂಸ್ಥೆಗಳು ಔಪ ಚಾ ರಿಕ ಹಾಗೂ ಅನೌಪಚಾರಿಕ ಶಿಕ್ಷಣವನ್ನು ಒಳಗೊಂಡ ಕಲಿಕೆಗೆ ಪೂರಕ ವ್ಯವಸ್ಥೆ ಕಲ್ಪಿಸುವಂತೆ ಯುಜಿಸಿ ನಿರ್ದೇಶನ ನೀಡಿದೆ.

ಎನ್‌ಇಪಿಯಲ್ಲಿ ಕೂಡ ಇದನ್ನು ಬೊಟ್ಟುಮಾಡಲಾಗಿದೆ ಎಂದರು. ಬಿಬಿಎ ಪದವಿ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಆಗಿರುವ ಲೋಪಕ್ಕೆ ಕಾರಣರಾದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈ ಕುರಿತ ವಿವರವನ್ನು ಸಿಂಡಿಕೇಟ್‌ ಸಭೆಗೆ ನೀಡ ಲಾಗಿದೆ ಎಂದರು.

ಹೆರಿಗೆ ರಜೆ/ ಮಕ್ಕಳ ಆರೈಕೆ ರಜೆ
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವ ಎಲ್ಲ ಮಹಿಳಾ ವಿದ್ಯಾರ್ಥಿಗಳಿಗೆ ಹೆರಿಗೆ ರಜೆ/ ಮಕ್ಕಳ ಆರೈಕೆ ರಜೆಯನ್ನು ಒದಗಿಸುವ ನಿಯಮಗಳಿಗೆ, ಎನ್‌ಇಪಿ ತೃತೀಯ ಮತ್ತು ಚತುರ್ಥ ಸೆಮಿಸ್ಟರ್‌ಗಳ ವಾಣಿಜ್ಯ ಪದವಿ, ವಿಜ್ಞಾನ ಮತ್ತು ತಂತ್ರಜ್ಞಾನ ಪದವಿ, ಕಲಾ ಪದವಿ, ಪರಿಷ್ಕೃತ ಪಠ್ಯಕ್ರಮಗಳನ್ನು 2022-23ನೇ ಸಾಲಿಗೆ ಸಂಬಂಧಿಸಿದಂತೆ ಅನು ಮೋದನೆ ನೀಡಲಾಯಿತು.

ಬಯೋ ಟೆಕ್ನಾಲಜಿ
ಬಹುಸ್ತರದ ಬಿಎಸ್ಸಿ
ಮಂಗಳೂರು ವಿ.ವಿ. ಅಧೀನಕ್ಕೊಳ ಪಟ್ಟ ಪುತ್ತೂರಿನ ವಿವೇಕಾನಂದ (ಕಲೆ, ವಿಜ್ಞಾನ ಮತ್ತು ವಾಣಿಜ್ಯ) ಕಾಲೇಜಿಗೆ 2022-23ರಿಂದ 2031-32ರ ವರೆಗೆ ಸ್ವಾಯತ್ತ ಸ್ಥಾನಮಾನ ನೀಡುವ ಬಗ್ಗೆ ಶೈಕ್ಷಣಿಕ ಮಂಡಳಿ ಅನುಮೋದನೆ ನೀಡಿದೆ. ಮಂಗಳೂರು ವಿ.ವಿ.ಯಲ್ಲಿ ಬಯೋ ಟೆಕ್ನಾಲಜಿ ಬಹುಸ್ತರದ ಬಿಎಸ್ಸಿ ಪದವಿಯನ್ನು 2022-23ನೇ ಸಾಲಿನಲ್ಲಿ ಆರಂಭಿಸಲು ಶೈಕ್ಷಣಿಕ ಮಂಡಳಿ ಅನುಮತಿಸಿತು.

Advertisement

ಸಂತ ಅಲೋಶಿಯಸ್‌ನಲ್ಲಿ ಡಾಟಾ ಸೈನ್ಸ್‌ ಎಂಬ ಹೊಸ ಕೋರ್ಸ್‌, ಸಂತ ಆ್ಯಗ್ನೆಸ್‌ನಲ್ಲಿ ಎಂಬಿಎ ಮತ್ತು ಎಂಸಿಎ ಕೋರ್ಸ್‌ಗಳನ್ನು ಸ್ವಾಯತ್ತಸ್ಥಾನಮಾನದೊಂದಿಗೆ ಹೆಚ್ಚುವರಿ ಯಾಗಿ ಪ್ರಾರಂಭಿಸಲು ಹಾಗೂ ರೋಶನಿ ನಿಲಯದಲ್ಲಿ 2022-23ನೇ ಸಾಲಿನಿಂದ ಬಿಕಾಂ ಆರಂಭಿಸಲು ಅನುಮೋದನೆ ನೀಡಲಾಯಿತು.

ಎನ್‌ಇಪಿ 3ನೇ ಸೆಮಿಸ್ಟರ್‌ (ಬಿಎ)ನಲ್ಲಿ ಕೊಡಗು-ಕರಾವಳಿ ಪ್ರಾದೇಶಿಕ ಇತಿಹಾಸ ಪತ್ರಿಕೆಯನ್ನು ಕೈಬಿಟ್ಟಿರುವುದು ಸರಿಯಲ್ಲ; ವಿರೋಧ ವ್ಯಕ್ತವಾದ ಬಳಿಕ ಸೇರ್ಪಡೆ ಮಾಡಿರುವುದು ಸ್ವಾಗತಾರ್ಹ. ಮುಂದೆ ಹೀಗಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಪದವಿ ಕಾಲೇಜುಗಳ ಇತಿಹಾಸ ಬೋಧಕರ ಸಂಘ (ಮಾನುಷ)ದ ಪ್ರಮುಖರು ತಿಳಿಸಿದರು.

ಮರುಮೌಲ್ಯಮಾಪನ
ಶೇ. 20ರಷ್ಟು ಏರಿಕೆ ಇದ್ದರೆ ಹಣ ವಾಪಸ್‌
ಕಾಲೇಜುಗಳಲ್ಲಿ ಮರು ಮೌಲ್ಯಮಾಪನದ ವೇಳೆ ಪಡೆದ ಅಂಕಗಳಲ್ಲಿ ಶೇ. 20ರಷ್ಟು ವ್ಯತ್ಯಾಸ ಕಂಡು ಬಂದಲ್ಲಿ ಅಂತಹ ಮೌಲ್ಯಮಾಪಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಹಾಗೂ ವಿದ್ಯಾರ್ಥಿ ಪಾವತಿಸಿರುವ ಪೂರ್ಣ ಮೊತ್ತವನ್ನು ಮರಳಿಸಲು ವಿ.ವಿ. ತೀರ್ಮಾನಿಸಿತು.

“ಹಾರ್ಟ್‌ಫುಲ್‌ನೆಸ್‌ ಪೀಠ’
ರಾಮ್‌ಚಂದ್ರ ಮಿಷನ್‌ನ ಸಹಸಂಸ್ಥೆ ಸಹಾಜ್‌ ಮಾರ್ಗ್‌ ಸ್ಪಿರಿಚಾಲಿಟಿ ಫೌಂಡೇಶನ್‌ ವತಿಯಿಂದ ಮಂಗಳೂರು ವಿ.ವಿ.ಯಲ್ಲಿ “ಹಾರ್ಟ್‌ಫುಲ್‌ನೆಸ್‌ ಪೀಠ’ ಸ್ಥಾಪಿಸುವಂತೆ ಪ್ರಸ್ತಾವನೆ ಬಂದಿದೆ. ಧ್ಯಾನ ಹಾಗೂ ಎಲ್ಲರೊಡನೆ ಪ್ರೀತಿಯ ತಣ್ತೀ ಉತ್ತೇಜಿಸುವುದು ಉದ್ದೇಶ. ಇದರ ಒಟ್ಟು ವೆಚ್ಚವನ್ನು ಸಂಬಂಧಪಟ್ಟ ಸಂಸ್ಥೆಯೇ ನಿರ್ವಹಿಸಲಿದೆ. ಹೀಗಾಗಿ ಅನುಮೋದನೆ ನೀಡಬಹುದು ಎಂದು ಕುಲಪತಿ ತಿಳಿಸಿದರು.

ಕಾಲೇಜುಗಳಿಗೆ ದಸರಾ ರಜೆ
ವಿ.ವಿ. ವ್ಯಾಪ್ತಿಯ ಎಲ್ಲ ಪದವಿ ಹಾಗೂ ಸ್ನಾತಕೋತ್ತರ ಪದವಿ ತರಗತಿಗಳಿಗೆ ದಸರಾ ಪ್ರಯುಕ್ತ ಸೆ. 29, 30, ಅ. 1 ಮತ್ತು ಅ. 3ರಂದು ರಜೆ ನೀಡಲಾಗುವುದು ಎಂದು ಕುಲಪತಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next