Advertisement

Mangaluru University ಪಿಜಿ ಪ್ರವೇಶಕ್ಕೆ “ನೀಟ್‌’ ಮಾದರಿ “ಸಿಯುಇಟಿ’!

10:44 PM Oct 08, 2023 | Team Udayavani |

ಮಂಗಳೂರು: ವೈದ್ಯಕೀಯ ಶಿಕ್ಷಣಕ್ಕೆ “ನೀಟ್‌’ ಪ್ರವೇಶ ಪರೀಕ್ಷೆ ಇದ್ದ ಸ್ವರೂಪದಲ್ಲಿಯೇ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತ ಕೋತ್ತರದ ವಿವಿಧ ವಿಭಾಗಗಳ ಪ್ರವೇಶಕ್ಕೂ ಯುಜಿಸಿ (ವಿ.ವಿ. ಧನಸಹಾಯ ಆಯೋಗ) ರಾಷ್ಟ್ರೀಯ ಮಟ್ಟದ “ವಿಶ್ವವಿದ್ಯಾನಿಲಯ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಯುಇಟಿ-ಪಿಜಿ) ಜಾರಿಗೊಳಿಸುವ ಸಂಬಂಧ ಮಹತ್ವದ ಚರ್ಚೆ ಆರಂಭವಾಗಿದೆ.

Advertisement

ಸಿಯುಇಟಿ ಅನ್ವಯವಾದರೆ ದೇಶದ ಯಾವುದೇ ಭಾಗದ ವಿದ್ಯಾರ್ಥಿ ಸ್ನಾತಕೋತ್ತರ ಪ್ರವೇಶ ಅಪೇಕ್ಷಿಸಿದರೆ ಪರೀಕ್ಷೆ ಬರೆದು ಮಂಗಳೂರು ವಿ.ವಿ.ಯಲ್ಲಿ ಆಯ್ದ ಸೀಟು ಪಡೆಯಬಹುದು.

ಮಂಗಳೂರು ವಿ.ವಿ.ಯ ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯಗಳಡಿಯ ಯೋಗ ವಿಜ್ಞಾನ, ಗಣಿತಶಾಸ್ತ್ರ ಹಾಗೂ ಎಲೆಕ್ಟ್ರಾನಿಕ್ಸ್‌ ಅಧ್ಯಯನ ಮಂಡಳಿಯು ಸಿಯುಇಟಿ ಮೂಲಕ ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸುವಂತೆ ವಿ.ವಿ.ಗೆ ಪ್ರಸ್ತಾವನೆ ಸಲ್ಲಿಸಿದೆ.

ದೇಶದ ಯಾವುದೇ ಭಾಗದ ವಿದ್ಯಾರ್ಥಿ ಪರೀಕ್ಷೆ ಬರೆದು ಮಂಗಳೂರು ವಿ.ವಿ.ಯ ಈ ಕೋರ್ಸ್‌ಗಳನ್ನು ಕಲಿಯಲು ಅವಕಾಶ ನೀಡಬೇಕು ಎಂದು ಆಗ್ರಹಿಸಲಾಗಿದೆ.ಇದರ ಮುಂದುವರಿದ ಭಾಗವಾಗಿ ವಿವಿಯ ಕಲಾ, ವಾಣಿಜ್ಯ, ಶಿಕ್ಷಣ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ನಿಕಾಯದ ಡೀನ್‌ ಹಾಗೂ ಇತರ ಪರಿಣತರನ್ನು ಒಳಗೊಂಡ ಸಮಿತಿ ರಚಿಸಿ ವಿವಿಯ ಪ್ರಾದೇಶಿಕ ವ್ಯಾಪ್ತಿಯ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ವರದಿ ಸಿದ್ಧಪಡಿಸಿ ಅದರ ಆಧಾರದಂತೆ ಮುಂದಡಿ ಇಡಲು ವಿ.ವಿ. ತೀರ್ಮಾನಿಸಿದೆ.

ಪ್ರವೇಶ ಸ್ವರೂಪ ಹೇಗೆ?
ಮಂಗಳೂರು ವಿ.ವಿ.ಯ ಒಟ್ಟು ಸೀಟುಗಳ ಪೈಕಿ ಶೇ. 70 (ಪರಿಸ್ಥಿತಿಗೆ ಅನುಗುಣವಾಗಿ ಇದರಲ್ಲಿ ಏರಿಕೆ-ಇಳಿಕೆ ಇರಲಿದೆ)ನ್ನು ವಿ.ವಿ. ವ್ಯಾಪ್ತಿಯ ವಿದ್ಯಾರ್ಥಿಗಳನ್ನು ನೀಡಲಾಗುತ್ತದೆ. ಖಾಲಿ ಇರುವ ಸೀಟು ಮಾತ್ರ ದೇಶದ ವಿವಿಧ ಭಾಗದ ವಿದ್ಯಾರ್ಥಿಗಳಿಗೆ ಮೀಸಲು.

Advertisement

ಲಾಭವೇನು?
ಮಂಗಳೂರು ವಿ.ವಿ.ಯ ಸ್ನಾತಕೋತ್ತರದ ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳ ಕೊರತೆ ಇದೆ. ಕೆಲವು ಕೋರ್ಸ್‌ಗಳಲ್ಲಿ ಬೆರಳೆಣಿಕೆ ವಿದ್ಯಾರ್ಥಿಗಳು ಮಾತ್ರ ಇದ್ದಾರೆ. ಸಿಯುಇಟಿ ಪರೀಕ್ಷೆ ಮೂಲಕ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಕೂಲ ಕಲ್ಪಿಸಿದರೆ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗಲಿದೆ.

ಬೇಡಿಕೆ ಸೀಟ್‌ ಮಾತ್ರ ಭರ್ತಿ!
ಈ ಮಧ್ಯೆ ಸಾರ್ವತ್ರಿಕವಾಗಿ ವಿದ್ಯಾರ್ಥಿಗಳ ಪ್ರವೇಶದ ಬದಲು “ಪೇಮೆಂಟ್‌ ಸೀಟ್‌’ನಲ್ಲಿ ಮಾತ್ರ ಅವಕಾಶ ನೀಡಿದರೆ ಉತ್ತಮ ಎಂಬ ಅಭಿಪ್ರಾಯವೂ ಕೆಲವರಿಂದ ಕೇಳಿಬಂದಿದೆ. ಮಂಗಳೂರು ವಿ.ವಿ.ಯ ಕೆಲವು ವಿಭಾಗದಲ್ಲಿ ಮೆರಿಟ್‌ ಸೀಟ್‌ ಭರ್ತಿಯಾದ ಬಳಿಕ ಬೇಡಿಕೆಯ ಆಧಾರದಲ್ಲಿ “ಪೇಮೆಂಟ್‌ ಸೀಟ್‌’ ಭರ್ತಿ ಮಾಡಲಾಗುತ್ತದೆ. ಈ ಪೇಮೆಂಟ್‌ ಬ್ಯಾಚ್‌ ಅನ್ನು ಮಾತ್ರ ಯುಜಿಸಿ ಮುಖಾಂತರ ಮಾಡುವುದು ಉತ್ತಮ ಎಂಬ ಬಗ್ಗೆಯೂ ಕೆಲವರು ಸಲಹೆ ನೀಡಿದ್ದಾರೆ.

ಏನಿದು “ಕೇಂದ್ರೀಕೃತ ಪ್ರವೇಶ’?
ಪ್ರತೀ ವಿ.ವಿ.ಗಳು ಮೊದಲು ತಮ್ಮ ಪದವಿ-ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶವನ್ನು ತಮ್ಮ ವ್ಯಾಪ್ತಿಯಲ್ಲಿಯೇ ತೆಗೆದುಕೊಳ್ಳಬೇಕಿತ್ತು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ವಿಧಾನವನ್ನು ಏಕೀಕರಿಸಲು ಶಿಕ್ಷಣ ಸಚಿವಾಲಯವು ಯುಜಿಸಿಯೊಂದಿಗೆ ಸೇರಿ “ಸಾಮಾನ್ಯ ವಿಶ್ವವಿದ್ಯಾನಿಲಯಗಳ ಪ್ರವೇಶ ಪರೀಕ್ಷೆ’ (ಸಿಯುಇಟಿ)ಯನ್ನು ಈಗಾಗಲೇ ದೇಶವ್ಯಾಪಿ ಪರಿಚಯಿಸಿದೆ. ಈ ಮೂಲಕ ದೇಶದ ಕೇಂದ್ರೀಯ ಹಾಗೂ ಕೆಲವು ವಿ.ವಿ.ಗಳ ಕೋರ್ಸ್‌ಗಳಿಗೆ ಈ ಪರೀಕ್ಷೆ ಬರೆದು ಪ್ರವೇಶ ಪಡೆಯಬೇಕು. ದೇಶದ ವಿವಿಧ ವಿ.ವಿ.ಗಳು ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು ಇನ್ನೂ ಹಲವು ವಿ.ವಿ.ಗಳು ಸಹಭಾಗಿತ್ವದ ಆಶಯದಲ್ಲಿವೆ. ಮಂಗಳೂರು ವಿ.ವಿ.ಯೂ ಸಹಭಾಗಿತ್ವ ಪಡೆಯುವ ಆಶಯ ತೋರಿದ್ದು ನಿರ್ಧಾರ ಇನ್ನಷ್ಟೇ ಆಗಬೇಕಿದೆ.

ಯುಜಿಸಿಯು ಪ್ರತೀ ವರ್ಷ ವಿ.ವಿ.ಗಳಿಗೆ ಸಿಯುಇಟಿ ನಡೆಸುತ್ತದೆ. ಅರ್ಹ ವಿ.ವಿ.ಗಳು ಯುಜಿಸಿಯ ಈ ಪ್ರಕ್ರಿಯೆಗೆ ಸೇರಬಹುದು. ಮಂಗಳೂರು ವಿ.ವಿ.ಯೂ ಸೇರಿದರೆ ದೇಶದ ಯಾವುದೇ ಭಾಗದ ವಿದ್ಯಾರ್ಥಿ ಕೂಡ ಇಲ್ಲಿ ಕಲಿಯಲು ಅವಕಾಶ ಇರುತ್ತದೆ. ಅಂತಿಮ ತೀರ್ಮಾನ ಇನ್ನಷ್ಟೇ ಆಗಬೇಕಿದೆ.
– ಪ್ರೊ| ಜಯರಾಜ್‌ ಅಮೀನ್‌,
ಕುಲಪತಿ, ಮಂಗಳೂರು ವಿಶ್ವವಿದ್ಯಾನಿಲಯ

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next