Advertisement

Mangaluru; ಕೆತ್ತಿಕಲ್‌ ನಲ್ಲಿ ವಿಶಿಷ್ಟ ಕಲ್ಲು ಪತ್ತೆ!

12:43 AM Nov 28, 2023 | Team Udayavani |

ಮಂಗಳೂರು: ನಗರದ ಹೊರವಲಯದ ವಾಮಂಜೂರು ಸಮೀಪದ ಕೆತ್ತಿಕಲ್‌ನಲ್ಲಿ ಊರಿಗೆ ಆ ಹೆಸರು ಬರಲು ಕಾರಣ ಎನ್ನಲಾದ ಕಲ್ಲೊಂದು ಪತ್ತೆಯಾಗಿದೆ.

Advertisement

ಹಲವು ವರ್ಷಗಳಿಂದ ಈ ಕಲ್ಲು ಗಿಡಗಂಟಿಗಳ ಎಡೆಯಲ್ಲಿ ಹುದುಗಿತ್ತು. ಸೋಮವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಹೆದ್ದಾರಿ ವಿಸ್ತರಣೆ ಕಾಮಗಾರಿಗಾಗಿ ಗಿಡಗಳನ್ನು ತೆರವು ಮಾಡುವಾಗ ಕಲ್ಲು ಪತ್ತೆಯಾಗಿದೆ.
ಇದನ್ನು ಗಮನಿಸಿ ನೂರಾರು ಸ್ಥಳೀಯರು ಅಲ್ಲಿಗೆ ತೆರಳಿದ್ದು, ಕಲ್ಲನ್ನು ತತ್‌ಕ್ಷಣ ತೆರವು ಮಾಡಬಾರದು, ಕೆತ್ತಿಕಲ್‌ಗೆ ನೂರಾರು ವರ್ಷಗಳ ಚರಿತ್ರೆ ಇದ್ದು, ಆ ಮಾಹಿತಿ ಈ ಕಲ್ಲಿನಲ್ಲಿ ಲಭಿಸಬಹುದಾದ್ದರಿಂದ ಅದನ್ನು ಗೌರವ ಯುತವಾಗಿ ಸ್ಥಳಾಂತರ ಮಾಡಬೇಕು ಎಂದು ಹೆದ್ದಾರಿ ಪ್ರಾಧಿ ಕಾರದ ಅಧಿಕಾರಿಗಳಲ್ಲಿ ಆಗ್ರಹಿಸಿದರು.
ಇದಕ್ಕೊಪ್ಪಿದ ಅಧಿಕಾರಿಗಳು ಕ್ರೇನ್‌ ಹಾಗೂ ಹಗ್ಗ ಬಳಸಿಕೊಂಡು ಕಲ್ಲನ್ನು ಸ್ಥಳಾಂತರಿಸುತ್ತೇವೆ, ಯಾವುದೇ ಹಾನಿ ಮಾಡುವುದಿಲ್ಲ ಎಂದಿದ್ದಾರೆ.

ಕೆತ್ತಿದ ಕಲ್‌ ಕೆತ್ತಿಕಲ್‌?
ಕೆತ್ತಿಕಲ್‌ ಎಂಬ ಹೆಸರಿಗೂ ಈ ಕೆತ್ತಿರುವ ಕಲ್ಲೇ ಕಾರಣ ಎನ್ನುತ್ತಾರೆ ಸ್ಥಳೀಯರು. ನೋಡುವಾಗ 500 ವರ್ಷ ಹಳೆಯದರಂತೆ ಕಾಣುತ್ತದೆ. ಬಹಳ ಹಿಂದೆ ಎತ್ತಿನಗಾಡಿಯಲ್ಲಿ ಪಯಣಿಸುವಾಗಿನ ಕಾಲದಲ್ಲಿ ಜನರು ಇಲ್ಲಿ ಕುಳಿತು ವಿಶ್ರಾಂತಿ ಪಡೆದು ಮುಂದೆ ಸಾಗುತ್ತಿದ್ದರೆಂದು ನಮ್ಮ ಹಿರಿಯರು ಹೇಳುತ್ತಿದ್ದರು ಎನ್ನುತ್ತಾರೆ ಸ್ಥಳೀಯರಾಗಿರುವ ಕಲಾಮೃತ ಕಲಾವಿದರು ಸಂಘಟನೆಯ ಉಮೇಶ್‌ ಕೋಟ್ಯಾನ್‌.

ಕೆತ್ತಿಕಲ್‌ನಲ್ಲಿ ದಶಕಗಳ ಹಿಂದೆ ಗುಡ್ಡ ಜರಿತವೂ ಸಂಭವಿಸಿತ್ತು. ಗುಡ್ಡದ ವಿರುದ್ಧ ದಿಕ್ಕಿನಲ್ಲಿ ಕಣಿವೆ ಭಾಗಕ್ಕೆ ಹೆದ್ದಾರಿಯ ಬದಿಯಲ್ಲಿ ಈ ಕಲ್ಲು ಸ್ಥಿತವಾಗಿದೆ. ಮೇಲ್ನೋಟಕ್ಕೆ ಒಂದು ಪೀಠದ ಮೇಲೆ ಇದ್ದು ಶಿವಲಿಂಗದಂತೆ ಕಾಣುತ್ತಿದೆ. ಆದರೆ ಇದು ಕಪ್ಪುಕಲ್ಲಿನಲ್ಲಿ ಮಾಡಿದ್ದಲ್ಲ, ಬದಲಿಗೆ ಕೆಂಪುಕಲ್ಲಿನಲ್ಲಿ ವೃತ್ತಾಕಾರದಲ್ಲಿ ಕೆತ್ತಲಾಗಿದೆ. ಕಲ್ಲಿನಲ್ಲಿ ಯಾವುದೇ ಶಾಸನ ಬರೆದಿರುವುದು ಕಂಡು ಬಂದಿಲ್ಲ.

ಕೆತ್ತಿಕಲ್‌ ಹೆಸರು ಇದರಿಂದಲೇ ಬಂದಿರಬಹುದು, ಹಾಗಿರುವಾಗ ಅದನ್ನು ಉಳಿಸುವುದು ಎಲ್ಲರ ಜವಾಬ್ದಾರಿ, ಇಲ್ಲಿ “ಅಣ್ಣಾಜಿ’ ಸಿನೆಮಾದ ಚಿತ್ರೀಕರಣವೂ ನಡೆದಿತ್ತು ಎನ್ನುತ್ತಾರೆ ಉಮೇಶ್‌ ಕೋಟ್ಯಾನ್‌.

Advertisement

ಸ್ಮಾರಕ ಸಾಧ್ಯತೆ
ಇದೊಂದು ಮೇಲ್ನೋಟಕ್ಕೆ ಕ್ರಿ.ಪೂ. 6ನೇ ಶತಮಾನದ ಸ್ಮಾರಕದಂತೆ ಕಾಣುತ್ತದೆ. ಯಾವ ಕಾರಣಕ್ಕಾಗಿ ರಚಿಸಿರಬಹುದು ಎನ್ನುವ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿ ತಿಳಿಸಬಹುದು ಎಂದು ಇತಿಹಾಸ ತಜ್ಞ ಪ್ರೊ| ಮುರುಗೇಶಿ ತುರುವೇಕೆರೆ ಅವರು ಉದಯವಾಣಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next