ಮಂಗಳೂರು: ಮಂಗಳೂರು ನಗರ ಸಹಿತ ವಿವಿಧೆಡೆ ಕಳ್ಳತನ ನಡೆಸಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಕಸಬಾ ಬೆಂಗ್ರೆಯ ಮೊಹಮ್ಮದ್ ಆಸಿಫ್(32) ಮತ್ತು ಮೊಹಮ್ಮದ್ ಸಫ್ವಾನ್(21) ಬಂಧಿತರು. ಆರೋಪಿಗಳು ಪಡುಬಿದ್ರಿ ಗ್ರಾಮ ಸೇವಾ ಕೇಂದ್ರದಲ್ಲಿ ಕಳವು, ಕದ್ರಿ ಜಂಕ್ಷನ್ ನಲ್ಲಿ ಮೊಬೈಲ್ ಶಾಪ್, ಪೈಂಟ್ ಅಂಗಡಿಯಲ್ಲಿ ಕಳವು , ನಿರ್ಮಾಣ ಹಂತದ ಕಟ್ಟಡದಲ್ಲಿ ಕಳವು ನಡೆಸಿದ್ದರು. ಪೊಳಲಿ ದ್ವಾರದ ಬಳಿ ಹೊಟೇಲ್, ಅಂಗಡಿಗಳಲ್ಲಿ ಕಳವು,ಬಂಟ್ವಾಳ ಸಾರ್ವಜನಿಕ ಉದ್ಯೋಗಸ್ತರ ಸಹಕಾರ ಸಂಘದಲ್ಲಿ ಕಳವು ಮಾಡಿದ್ದರು. ಅಲ್ಲದೆ ಮಂಗಳೂರಿನ ಮಂಕಿಸ್ಟ್ಯಾಂಡ್ ಮತ್ತು ಉತ್ತರ ದಕ್ಕೆಯಲ್ಲಿ ದ್ವಿಚಕ್ರ ವಾಹನ ಕಳವು ಮಾಡಿದ್ದರು.
ಆರೋಪಿಗಳ ವಶದಲ್ಲಿದ್ದ ಎರಡು ಲ್ಯಾಪ್ ಟ್ಯಾಪ್ ಎರಡು ದ್ವಿಚಕ್ರ ವಾಹನ ಸಹಿತ 1.20 ಲ.ರೂ ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಮೊಹಮ್ಮದ್ ಆಸಿಫ್ ವಿರುದ್ದ ಮಂಗಳೂರು ಉತ್ತರ ಪೊಲೀಸ್ ಠಾಣೆ ಹಾಗೂ ಬರ್ಕೆ ಪೊಲೀಸ್ ಠಾಣೆಯಲ್ಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡ ಬಗ್ಗೆ ಮಾನ್ಯ ನ್ಯಾಯಾಲಯವು ವಾರೆಂಟ್ ಹೊರಡಿಸಿತ್ತು ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ ವಾಲ್ ತಿಳಿಸಿದ್ದಾರೆ.
ಡಿ.01 ರಂದು ಮಂಗಳೂರು ನಗರದ ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಉತ್ತರ ದಕ್ಕೆಯ ಬಳಿಯ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಆಕ್ಟೀವಾ ಸ್ಕೂಟರ್ ಕಳವು ಆದ ಬಗ್ಗೆ ಮಹಮ್ಮದ್ ಸಿನಾನ್ ಎಂಬವರು ನೀಡಿದ ದೂರಿನಂತೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.