Advertisement
ಕಾನೂನು ಜ್ಞಾನದ ಕೊರತೆಯಾವ ಕಾರಣಕ್ಕೆ ರಂಗರಾವ್ ಅವರ ಹೆಸರನ್ನು ಸೂಚಿಸುವುದಕ್ಕೆ ಪಾಲಿಕೆ ಇಷ್ಟೊಂದು ವಿಳಂಬ ಮಾಡಿದೆ ಎಂಬುದನ್ನು ಹುಡುಕುತ್ತ ಹೋದ ‘ಸುದಿನ’ಕ್ಕೆ ಕಾನೂನಿನ ಅರಿವಿನ ಕೊರತೆಯಿಂದಾಗಿ ಪಾಲಿಕೆಯೇ ಮಾಡಿಕೊಂಡಿರುವ ಎಡವಟ್ಟು ಬಯಲಾಗಿದೆ. ಪಾಲಿಕೆಯು ಈ ವಿಚಾರದಲ್ಲಿ ನಿಯಮಾನುಸಾರ ಪ್ರಕ್ರಿಯೆ ಗಳನ್ನು ಪೂರ್ಣಗೊಳಿಸಿಲ್ಲ. ಹಾಗಾಗಿ ಹೆಸರಿಡುವ ಕಡತವು ಪಾಲಿಕೆಯಲ್ಲಿ ಮೂಲೆ ಸೇರಿದೆ. ಇದೀಗ, ಈ ಬಗ್ಗೆ ವಿಪಕ್ಷದ ಕೆಲವು ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಬೀದಿಗಿಳಿದು ಹೋರಾಟ ಮಾಡಲು ಮುಂದಾಗುತ್ತಿದ್ದಂತೆ ಈಗ ತರಾತುರಿಯಲ್ಲಿ ಕಡತವನ್ನು ವಿಲೇವಾರಿಗೆ ಪಾಲಿಕೆ ಮುಂದಾಗಿದೆ.
2016 ಜು. 29ರಂದು ಅಂದಿನ ಮೇಯರ್ ಹರಿನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪುರಭವನಕ್ಕೆ ಕುದ್ಮುಲ್ ರಂಗರಾವ್ ಹೆಸರಿಡುವ ಬಗ್ಗೆ ನಿರ್ಣಯ ಕೈಗೊಂಡಿತ್ತು. ಪಾಲಿಕೆ ಮುಖ್ಯ ಸಚೇತಕ ಶಶಿಧರ ಹೆಗ್ಡೆ ಕಾರ್ಯಸೂಚಿ ಮಂಡಿಸಿದ್ದರು. 2016 ಡಿಸೆಂಬರ್ 8ರಂದು ಈ ಸಂಬಂಧ ಸಾರ್ವಜನಿಕರ ಆಕ್ಷೇಪಗಳನ್ನು ಆಹ್ವಾನಿಸಿ, ಪತ್ರಿಕೆಯಲ್ಲಿ ಜಾಹೀರಾತು ನೀಡಲಾಗಿತ್ತು. ಬಳಿಕ, ಈ ರೀತಿಯ ನಾಮಕರಣ ಪ್ರಕ್ರಿಯೆಗೆ ಸರಕಾರದ ಅನುಮತಿ ಪಡೆಯಬೇಕೇ ಎಂದು ತಿಳಿದುಕೊಳ್ಳಲು ಪಾಲಿಕೆ ಆಯುಕ್ತರು, ಪಾಲಿಕೆ ಕಾನೂನು ತಜ್ಞರಿಂದ ಅಭಿಪ್ರಾಯ ಕೋರಿ 2017ರ ಅ. 20ರಂದು ಮಾಹಿತಿ ಕಳುಹಿಸಿದ್ದರು. ಅದನ್ನು ಆಧರಿಸಿ ಕಾನೂನು ಸಲಹೆಗಾರರು 2017ರ ನ. 23ರಂದು (ಒಂದು ತಿಂಗಳೊಳಗೆ) ತಮ್ಮ ಅಭಿಪ್ರಾಯವನ್ನು ನೀಡಿದ್ದಾರೆ. ವಾಸ್ತವದಲ್ಲಿ ಕಾನೂನು ತಜ್ಞರ ಅಭಿಪ್ರಾಯ ಪಡೆದ ಅನಂತರ ಈ ಕಡತವು ಮೂಲೆ ಸೇರಿತ್ತು ಎನ್ನುವುದು ಈಗ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲ, ಕಾನೂನು ತಜ್ಞರು ‘ಪಾಲಿಕೆಯು ಪುರಭವನಕ್ಕೆ ಕುದ್ಮುಲ್ ರಂಗರಾವ್ ಹೆಸರು ಇಡುವ ವಿಚಾರದಲ್ಲಿ ಪ್ರಕ್ರಿಯೆಗಳನ್ನು ಸರಿಯಾಗಿ ಮಾಡಿಲ್ಲ’ ಎಂಬ ಅಭಿಪ್ರಾಯವನ್ನು ನೀಡಿದ್ದಾರೆ. ಪ್ರಕ್ರಿಯೆ ಹೇಗೆ ?
‘ಪುರಭವನಕ್ಕೆ ಕುದ್ಮುಲ್ ರಂಗರಾವ್’ ಹೆಸರಿಡುವ ವಿಚಾರವು ಮೊದಲು ಪಾಲಿಕೆಯ ಪಟ್ಟಣ ಮತ್ತು ಅಭಿವೃದ್ಧಿ ಸ್ಥಾಯೀ ಸಮಿತಿಯಲ್ಲಿ ಚರ್ಚೆ ಮಾಡಬೇಕು. ಆ ಬಳಿಕ ಈ ವಿಚಾರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದು, ಆಕ್ಷೇಪಣೆ-ಸಲಹೆ ಆಹ್ವಾನಿಸಲು ಎರಡು ಕನ್ನಡ ದಿನ ಪತ್ರಿಕೆಗಳಲ್ಲಿ ಪ್ರಕಟನೆ ನೀಡಬೇಕು. ಒಂದು ವೇಳೆ ಯಾವುದೇ ಆಕ್ಷೇಪಣೆ ಸಲ್ಲಿಕೆಯಾಗದಿದ್ದರೆ ಆದಾದ ಅನಂತರ ಮತ್ತೆ ಕೌನ್ಸೆಲ್‌ನಲ್ಲಿ ಮಂಡಿಸಿ ಬರಬೇಕು. ಅದುಬಿಟ್ಟು ನೇರವಾಗಿ ಕೌನ್ಸೆಲ್ ನಲ್ಲಿ ವಿಷಯ ಪ್ರಸ್ತಾವಿಸುವುದು ಸರಿಯಲ್ಲ. ಇನ್ನು ಪುರಭವನ ಮಹಾನಗರ ಪಾಲಿಕೆ ಸೊತ್ತು. ಹಾಗಾಗಿ, ಅದಕ್ಕೆ ನಾಮಕರಣ ಮಾಡಲು ಸರಕಾರದ ಅನುಮತಿ ಪಡೆಯಬೇಕಾಗಿಲ್ಲ ಎಂಬುದಾಗಿ ಕಾನೂನು ತಜ್ಞರು ಸಲಹೆ ನೀಡಿದ್ದರು. ಅದಾದ ಬಳಿಕ ಚುನಾವಣೆ ಸೇರಿದಂತೆ ಇನ್ನಿತರ ಕಾರಣಗಳನ್ನಿಟ್ಟು ಪಾಲಿಕೆ ಪುರಭವನಕ್ಕೆ ಕುದ್ಮುಲ್ ರಂಗರಾವ್ ನಾಮಕರಣ ಮಾಡುವ ಪ್ರಸ್ತಾವವನ್ನೇ ಮೂಲೆಗುಂಪು ಮಾಡಲಾಗಿದೆ ಎಂದು ಪಾಲಿಕೆ ವಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ ‘ಸುದಿನ’ಕ್ಕೆ ತಿಳಿಸಿದ್ದಾರೆ.
Related Articles
‘ಪುರಭವನಕ್ಕೆ ಕುದ್ಮುಲ್ ರಂಗರಾವ್’ ಅವರ ಹೆಸರು ನಾಮಕರಣ ಮಾಡುವಲ್ಲಿ ಪಾಲಿಕೆಯ ನಿರ್ಲಕ್ಷ್ಯತನ, ಉದಾಸೀನತೆ ಎದ್ದು ಕಾಣುತ್ತಿದೆ. ಕೇವಲ 3-4 ತಿಂಗಳಲ್ಲಿ ಆಗಬಹುದಾದ ಕೆಲಸವನ್ನು ಎರಡು ವರ್ಷಗಳ ಕಾಲ ಮುಂದೂಡಿದ್ದಾರೆ. ವಿಪಕ್ಷಗಳು ಈ ಬಗ್ಗೆ ಸದನದಲ್ಲಿ ಅನೇಕ ಬಾರಿ ದನಿ ಎತ್ತಿದ್ದವು.
– ಪ್ರೇಮಾನಂದ ಶೆಟ್ಟಿ, ಮನಪಾ ವಿಪಕ್ಷ ನಾಯಕ
Advertisement
ಬೇಗ ಈ ಪ್ರಕ್ರಿಯೆ ಪೂರ್ಣ‘ಪುರಭವನಕ್ಕೆ ಕುದ್ಮುಲ್ ರಂಗರಾವ್ ಹೆಸರು ಇಡುವ ವಿಚಾರವು ಚುನಾವಣೆ ಹಾಗೂ ಇತರೆ ಕೆಲವು ಕಾರಣಗಳಿಂದಾಗಿ ವಿಳಂಬವಾಗಿರುವುದು ನಿಜ. ಆದರೆ, ಕಾನೂನು ಸಲಹೆಗಾರರು, ಕುದ್ಮುಲ್ ರಂಗರಾವ್ ಹೆಸರು ಸೂಚಿಸುವ ವಿಚಾರದಲ್ಲಿ ನೀಡಿರುವ ಅಭಿಪ್ರಾಯ ನನ್ನ ಗಮನಕ್ಕೆ ಬಂದಿಲ್ಲ. ಆ ಬಗ್ಗೆ ಪರಿಶೀಲಿಸಿ ಆದಷ್ಟು ಬೇಗ ಈ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು.
– ಮಹಮ್ಮದ್ ನಝೀರ್, ಪಾಲಿಕೆ ಆಯುಕ್ತ — ಪ್ರಜ್ಞಾ ಶೆಟ್ಟಿ