ಮಂಗಳೂರು: ಕೋಟ್ಯಂತರ ರೂಪಾಯಿ ಬೆಲೆಬಾಳುವ ತಿಮಿಂಗಿಲದ ವಾಂತಿ (ಅಂಬರ್ ಗ್ರೀಸ್) ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಮೂವರು ಆರೋಪಿ ಗಳನ್ನು ಸಿಸಿಬಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ನ. 25 ಮಂಗಳೂರು ನಗರದ ಪಂಪ್ ವೆಲ್ ಬಳಿಯ ಆಸ್ಪತ್ರೆಯ ಹತ್ತಿರ 4 ಮಂದಿ ಕಾರಿನಲ್ಲಿ ತಿಮಿಂಗಿಲದ ವಾಂತಿ(ಅಂಬರ್ ಗ್ರೀಸ್) ಬೆಲೆಬಾಳುವ ವನ್ಯ ಜೀವಿ ಉತ್ಪನ್ನವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಚಿಕ್ಕಮಗಳೂರು ಮೂಲದ ವಿಟ್ಲದ ಮಂಗಿಲಪದವು ನಿವಾಸಿ ಪ್ಯಾರೇಜಾನ್ ಸೇಟು(37),ವಿಟ್ಲ, ಮಂಗಿಲಪದವಿನ ಬದ್ರುದ್ದೀನ್(28) ಮತ್ತು ತಮಿಳುನಾಡಿನ ನಾಗಪಟ್ಟಿನಂ ನ ರಾಜೇಶ್.ಆರ್(22) ಎನ್ನುವವರಾಗಿದ್ದಾರೆ.
1 ಕೋಟಿಯ 57 ಲಕ್ಷದ 50 ಸಾವಿರ ರೂ. ಮಾರುಕಟ್ಟೆ ಮೌಲ್ಯದ 1.575 ಕೆಜಿ ತಿಮಿಂಗಿಲದ ವಾಂತಿ (ಅಂಬರ್ ಗ್ರೀಸ್) ವಶಪಡಿಸಿಕೊಳ್ಳಲಾಗಿದೆ. 5 ಲಕ್ಷ ರೂ ಮೌಲ್ಯದ ಕಾರು, ಮೊಬೈಲ್ ಫೋನ್ ಗಳನ್ನು ಜಪ್ತಿ ಮಾಡಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 1 ಕೋಟಿಯ 62ಲಕ್ಷದ 80 ಸಾವಿರ ರೂ ಆಗಬಹುದು ಎಂದು ಅಂದಾಜಿಸಲಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾರ್ಗದರ್ಶನದಲ್ಲಿ , ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಸಿದ್ದಾರ್ಥ ಗೋಯಲ್, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ನಿರ್ದೇಶನದಲ್ಲಿ ಮಂಗಳೂರು ಸಿಸಿಬಿ ಘಟಕದ ಎಸಿಪಿ ಪಿ.ಎ.ಹೆಗಡೆ ರವರ ನೇತೃತ್ವದಲ್ಲಿ ಸಿಸಿಬಿ ಘಟಕದ ಅಧಿಕಾರಿಗಳು ಮತ್ತು ಸಿಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.