Advertisement

ಗಾಂಜಾ ಅಮಲಿನ ಅನುಮಾನ !

10:01 AM Nov 28, 2018 | |

ಮಹಾನಗರ: ತಣ್ಣೀರುಬಾವಿ ಬಳಿಯ ತೋಟಬೆಂಗ್ರೆಯ ಸಮುದ್ರ ಕಿನಾರೆಯಲ್ಲಿ ನಡು ಮಧ್ಯಾಹ್ನವೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎನ್ನಲಾದ ಪ್ರಕರಣದಿಂದಾಗಿ ನಗರದ ಜನತೆ ತಲೆ ತಗ್ಗಿಸುವಂತಾಗಿದೆ. ಈ ಹೇಯ ಕೃತ್ಯಕ್ಕೆ ನಗರದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಮಾದಕ ದ್ರವ್ಯ ಮಾರಾಟ ಜಾಲವೇ ಪ್ರಮುಖ ಕಾರಣ ಎಂಬ ಅನುಮಾನವೂ ವ್ಯಕ್ತವಾಗಿದೆ. ತಡವಾಗಿ ಬೆಳಕಿಗೆ ಬಂದಿರುವ ಈ ಪ್ರಕರಣದಲ್ಲಿಯೂ ಆರೋಪಿಗಳು ಗಾಂಜಾದ ಅಮಲಿನಲ್ಲಿ ಈ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇದಕ್ಕೆ ಪೂರಕವಾಗಿ ಏಳು ಮಂದಿ ಯುವಕರು ಹಗಲು ಹೊತ್ತಿನಲ್ಲೇ ಸಾರ್ವಜನಿಕ ಸ್ಥಳದಲ್ಲಿ ಈ ಕೃತ್ಯ ನಡೆಸಿರುವುದಕ್ಕೆ ಗಾಂಜಾ ಸೇವನೆಯೂ ಕಾರಣವಾಗಿರಬಹುದು ಎಂದು ಪೊಲೀಸರೂ ಅಭಿಪ್ರಾಯಿಸಿದ್ದಾರೆ. ನಡು ಮಧ್ಯಾಹ್ನವೇ ತನ್ನ ಪ್ರಿಯತಮನ ಎದುರೇ ಆರೋಪಿಗಳು ಅತ್ಯಾಚಾರ ನಡೆಸಿದರೆಂದು ಸಂತ್ರಸ್ತ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ. ವಾಸ್ತವದಲ್ಲಿ, ಮಂಗಳೂರಿನ ಕೆಲವು ಬೀಚ್‌ ಹಾಗೂ ನಿರ್ಜನ ಪ್ರದೇಶಗಳಲ್ಲಿ ಮಾದಕ ವ್ಯಸನಿಗಳ ಕಾಟದಿಂದಾಗಿ ಳಿಗೆ ರಾತ್ರಿ ಹೊತ್ತಿನಲ್ಲಿ ಓಡಾಡುವುದೂ ಕಷ್ಟವಾಗಿದೆ ಎನ್ನುವುದು ಜನರ ಅಭಿಪ್ರಾಯ.

Advertisement

ಈ ಪ್ರಕರಣದ ಹಿಂದಿನ ವಿವರ ಇನ್ನಷ್ಟೇ ಹೊರಬರಬೇಕಿದೆ. ನಗರದಲ್ಲಿ ನಡೆಯುತ್ತಿರುವ ಬಹುತೇಕ ಕೆಟ್ಟ ಘಟನೆಗಳ ಹಿಂದೆ ಮಾದಕ ದ್ರವ್ಯ ಸೇವನೆ ಇರುವುದು ಸುಳ್ಳಲ್ಲ. ಇದರಿಂದಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ನಿರಂತರವಾಗಿ ಇದಕ್ಕೆ ಬಲಿಯಾಗುತ್ತಿದ್ದಾರೆ. ಆ ಮೂಲಕ ಅಪರಾಧ ಪ್ರಕರಣಗಳೂ ಹೆಚ್ಚುತ್ತಿವೆ ಎಂಬ ಟೀಕೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ನಗರಕ್ಕೆ ಡ್ರಗ್‌ ಪೂರೈಸುವ ವ್ಯವಸ್ಥಿತ ಜಾಲವೊಂದು ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಈ ಹಿಂದೆ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ನಡೆದ ಸಭೆಗಳಲ್ಲಿ ಹಲವರು ದೂರಿದ್ದರು. ಹಾಗೆ ಸರಬರಾಜು ಆಗುವ ಮಾದಕ ವಸ್ತುಗಳನ್ನು ಪ್ರತಿಷ್ಠಿತ ಕಾಲೇಜು ಮತ್ತು ವೃತ್ತಿ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ವಿತರಿಸುವ ಏಜೆಂಟರು/ಕರ್‌ಗಳಿದ್ದಾರೆ. ಒಬ್ಬ ವಿದ್ಯಾರ್ಥಿ ತನ್ನ ಸ್ನೇಹಿತರಿಗೆ ಪತಚಯಿಸುತ್ತಾನೆ. ಹೀಗಾಗಿ ಮಾದಕ ವ್ಯಸನಕ್ಕೆ ಬಲಿಯಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚುತ್ತಿದೆ. 

ವಿದ್ಯಾರ್ಥಿನಿಯರನ್ನು ಪಕ್ಕದ ಜ್ಯೂಸ್‌/ ಸ್ನಾಕ್ಸ್ ಅಂಗಡಿಗೆ ಕರೆದೊಯ್ದು ಅಲ್ಲಿ ಜ್ಯೂಸ್‌/ ತಂಪು ಪಾನೀಯ ಖರೀದಿಸಿ ಕೊಡುವಾಗ ಅವರಿಗೆ ಅರಿವಿಲ್ಲದಂತೆ ಯಾವುದೋ ಪುಡಿ ಮಿಶ್ರಣ ಮಾಡುತ್ತಾರೆ. ಅದನ್ನು ಸೇವಿಸಿದ ಬಳಿಕ ವಿದ್ಯಾರ್ಥಿನಿಯರು ಅಮಲೇರಿ ಇಲ್ಲಿನ ಅರಿವು ಕಳೆದುಕೊಳ್ಳುತ್ತಾರೆ. ಕೆಲವೊಮ್ಮೆ ಪೆಪ್ಪರಮೆಂಟು ಮುಖೇನವೂ ನೀಡಲಾಗುತ್ತದೆ. ಹೀಗೆ ವಿದ್ಯಾರ್ಥಿನಿಯರನ್ನು ತಮ್ಮ ಖೆಡ್ಡಾಕ್ಕೆ ಬೀಳಿಸಿ ದೌರ್ಜನ್ಯ ಎಸಗಲಾಗುತ್ತಿದೆ.

ವಿಧಾನಸಭೆಯಲ್ಲೂ ಪ್ರಸ್ತಾವ 
ಮಂಗಳೂರಿನಲ್ಲಿ ಮಾದಕ ದ್ರವ್ಯ ಮಾರಾಟ ಜಾಲ ವ್ಯಾಪಕವಾಗುತ್ತಿರುವ ಬಗ್ಗೆ ಈ ಹಿಂದೆ ವಿಧಾನಸಭೆಯಲ್ಲಿಯೂ ಪ್ರಸ್ತಾಪವಾಗಿತ್ತು. ಸದನದಲ್ಲಿಯೂ ಸ್ಥಳೀಯ ಶಾಸಕರು ಮಾದಕ ದ್ರವ್ಯ ಜಾಲ ನಿಯಂತ್ರಣಕ್ಕೆ ಒತ್ತಾಯಿಸಿದ್ದರು. ಇದಕ್ಕೆ ಉಪಮುಖ್ಯಮಂತ್ರಿ ಡಾ| ಜಿ.ಪರಮೇಶ್ವರ್‌ ಅವರೂ ಕಟ್ಟುನಿಟ್ಟಿನ ಕ್ರಮ ಜರಗಿಸುವುದಾಗಿ ಹೇಳಿದ್ದರು. ಬಳಿಕ ಶಾಸಕ ಡಾ| ವೈ. ಭರತ್‌ ಶೆಟ್ಟಿ ವಿದ್ಯಾರ್ಥಿಗಳ ಗುಂಪು ಕಟ್ಟಿ ಮಾದಕ ದ್ರವ್ಯ ವ್ಯಸನದ ಬಗ್ಗೆ ಮಾಹಿತಿ ನೀಡುವಂತೆ ಮಾರ್ಗದರ್ಶನ ಮಾಡಿದ್ದರು. ಮಾಹಿತಿಗಾಗಿ ವಿದ್ಯಾರ್ಥಿಗಳ ವಾಟ್ಸಾಪ್‌ ಗ್ರೂಪ್‌ ತೆರೆದು, ಅದಕ್ಕಾಗಿ ಪ್ರತ್ಯೇಕ ಸಂಖ್ಯೆಯನ್ನೂ ನೀಡುವುದಾಗಿ ತಿಳಿಸಿದ್ದರು. ಆದರೆ, ಇಂಥ ಪ್ರಯತ್ನ ಪರಿಣಾಮಕಾರಿಯಾಗಬೇಕಿದೆ.

Advertisement

ದಾಳಿ ನಡೆಸಿದರೂ ಪರಿಣಾಮ ಬೀರುತ್ತಿಲ್ಲ 
2013 ಫೆಬ್ರವರಿ 3ರಂದು ವಿದ್ಯಾರ್ಥಿನಿಯೊಬ್ಬಳು ಮಾದಕ ದ್ರವ್ಯ ವ್ಯಸನಕ್ಕೆ ಬಲಿಯಾಗಿದ್ದಳು. ಏಳು ವರ್ಷದ ಹಿಂದೆ ಡ್ರಗ್‌ ಸೇವನೆ ಚಟ ಹೊಂದಿದ್ದ ವಿದ್ಯಾರ್ಥಿನಿಯೋರ್ವಳನ್ನು ಮುಂಬಯಿಗೆ ಸಾಗಿಸುವ ವ್ಯರ್ಥ ಪ್ರಯತ್ನ ನಡೆದಿತ್ತು. ಇವು ಕೇವಲ ಉದಾಹರಣೆಗಳಷ್ಟೆ. ಇಂತಹ ಹಲವು ಘಟನೆಗಳು ಘಟಿಸಿವೆ. ಪೊಲೀಸರು ದಾಳಿ ನಡೆಸಿ ಮಾದಕ ದ್ರವ್ಯ ಮಾರಾಟ ಜಾಲವನ್ನು ಮಟ್ಟ ಹಾಕುತ್ತಿದ್ದರೂ ಸಾಕಾಗುತ್ತಿಲ್ಲ ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಅಭಿಮತ. ಈ ಹಿಂದೆ, ಸೀಮಂತ್‌ ಕುಮಾರ್‌ ಸಿಂಗ್‌ ಪೊಲೀಸ್‌ ಆಯುಕ್ತರಾಗಿದ್ದಾಗ ಗಾಂಜಾ ಮತ್ತು ಡ್ರಗ್ಸ್‌ ಮಾರಾಟಗಾರರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ಜರಗಿಸುವುದಾಗಿ ಹೇಳಿದ್ದರು. ಬಳಿಕ ಬಂದ ಪೊಲೀಸ್‌ ಆಯುಕ್ತರೂ ದಾಳಿ ಮುಂದುವರಿಸಿದರೂ ನಿರೀಕ್ಷಿತ ಪ್ರಮಾಣ ಬೀರುತ್ತಿಲ್ಲ. 

ಭಯ ಪಡುವಂತಾಗಿದೆ
ಅಡ್ಯಾರುಗುಡ್ಡ, ಧಕ್ಕೆ, ತಣ್ಣೀರುಬಾವಿ ಬೀಚ್‌ ಮುಂತಾದವು ಪ್ರವಾಸಿ ತಾಣವಾದ ಕಾರಣ ಜನರು ಹೆಚ್ಚು. ಇಂಥ ಕಡೆಯಲ್ಲೇ ಮಾದಕ ವ್ಯಸನಿಗಳ ಕಾಟ ಹೆಚ್ಚಾಗಿದ್ದು, ಸಾರ್ವಜನಿಕರು ಭಯಪಡುವಂತಾಗಿದೆ. ಹೆಣ್ಣು ಮಕ್ಕಳಿಗೆ ಇಲ್ಲೆಲ್ಲ ಯಾವ ರಕ್ಷಣೆ ಇದೆ? ಪೊಲೀಸರು ಈ ಜಾಲ ಬೇಧಿಸಲು ಪ್ರತ್ಯೇಕ ತಂಡ ರಚನೆ ಮಾಡಿದರೂ ಪ್ರಯೋಜನವಾಗಿಲ್ಲ. 
– ಹಿಲ್ಡಾ ರಾಯಪ್ಪನ್‌, 
ಮುಖ್ಯಸ್ಥರು, ಪ್ರಜ್ಞಾ ಕೌನ್ಸೆಲಿಂಗ್‌ ಸೆಂಟರ್ 

ಮಂಗಳವಾರ ಸ್ಥಳದಲ್ಲಿ ಕಂಡು ಬಂದದ್ದು ಏನು?
ಅತ್ಯಾಚಾರ ಪ್ರಕರಣ ಹಿನ್ನೆಲೆಯಲ್ಲಿ ‘ಸುದಿನ’ ತಂಡವು ಮಂಗಳವಾರ ಆ ಪ್ರದೇಶಕ್ಕೆ ತೆರಳಿ ವಾಸ್ತವಾಂಶ ಪರಿಶೀಲಿಸಿತು. ಆದರೆ, ಈ ಹಿಂದೆ ವರದಿಗಳಲ್ಲಿ ಪ್ರಸ್ತಾಪಿಸಿದ ಸಮಸ್ಯೆಗಳು ಹಾಗೆಯೇ ಮುಂದುವರಿದಿದೆ. ಪತ್ರಿಕೆ ವರದಿ ಪ್ರಕಟಿಸಿ ತಿಂಗಳು ಕಳೆದಿದ್ದರೂ, ಸಂಬಂಧಪಟ್ಟ ಇಲಾಖೆಯವರು ತೋಟಬೆಂಗ್ರೆ ಪ್ರದೇಶ ಅಥವಾ ಕಡಲ ಕಿನಾರೆಯಲ್ಲಿ ಅಕ್ರಮ ಚಟುವಟಿಕೆ ತಡೆಯಲು ಯಾವುದೇ ಕ್ರಮ ಕೈಗೊಂಡಿಲ್ಲ. ತೋಟ ಬೆಂಗ್ರೆ ಬೀಚ್‌ ಪ್ರವೇಶ ದ್ವಾರದಲ್ಲಿಯೇ ಮದ್ಯದ ಬಾಟಲ್‌ಗ‌ಳು, ಸಿಗರೇಟ್‌ ಪ್ಯಾಕೆಟ್‌ಗಳು ರಾಶಿ ಬಿದ್ದಿದ್ದು, ಪಡ್ಡೆ ಹುಡುಗರ ಅಕ್ರಮ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿದೆ. ಜತೆಗೆ ತೋಟ ಬೆಂಗ್ರೆ ಬೀಚ್‌ನಲ್ಲಿ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಸಿಸಿ ಕೆಮರಾಗಳಿಲ್ಲ. ಈ ಬಗ್ಗೆ ಸ್ಥಳೀಯರು ಪೊಲೀಸ್‌ ಇಲಾಖೆಗೆ ಮನವಿ ಮಾಡಿದರೂ, ಫಲ ಕಾಣಲಿಲ್ಲ. ತೋಟ ಬೆಂಗ್ರೆ ಕಡಲ ಕಿನಾರೆಯ ನಿರ್ಜನ ಪ್ರದೇಶವಾಗಿದ್ದು, ಸುತ್ತಮುತ್ತಲೂ ಪೊದೆಗಳಿಂದ ಕೂಡಿದ್ದು, ಕೂಗಳತೆ ದೂರದಲ್ಲಿ ಯಾವುದೇ ಮನೆಗಳಿಲ್ಲ. ಬೆಳಗ್ಗೆ, ಮಧ್ಯಾಹ್ನ ಸಮಯದಲ್ಲಿ ಪ್ರವಾಸಿಗರ ಸಂಖ್ಯೆಯೂ ಕಡಿಮೆ. ಸಂಜೆ ವೇಳೆ ಮತ್ತು ವೀಕೆಂಡ್‌ಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚು. ಆದರೆ, ಇಲ್ಲಿ ಯಾವುದೇ ಭದ್ರತಾ ಸಿಬಂದಿ ಇಲ್ಲ. ಈ ಪ್ರದೇಶದಲ್ಲಿ ಪೊಲೀಸರು ಗಸ್ತು ಹಾಕಿದರೂ ಬೀಚ್‌ ಕಡೆ ಸಾಗುವುದು ಕಡಿಮೆ ಎಂಬುದು ಸ್ಥಳೀಯರ ಮಾಹಿತಿ.

‡ ಸುದಿನ ತಂಡ

Advertisement

Udayavani is now on Telegram. Click here to join our channel and stay updated with the latest news.

Next