Advertisement

‘ಹಿಂದಿನ ಸಂಘಟಕರು ಯಕ್ಷಗಾನಕ್ಕಾಗಿ ಬದುಕು ತೇದವರು’

12:22 PM Nov 16, 2018 | |

ಕೊಡಿಯಾಲಬೈಲ್‌ : ಯಕ್ಷಗಾನ ತಾಳಮದ್ದಳೆ ಕಾರ್ಯಗಳಿಗೆ ಯಾವುದೇ ಪ್ರಾಯೋಜಕರಿಲ್ಲದ ಹೊತ್ತಿನಲ್ಲಿ ಸ್ವಂತ ದುಡಿಮೆಯ ಹಣದಿಂದ ಆ ಕಾಲದ ಮೇರು ಕಲಾವಿದರ ಕೂಟ ಗಳನ್ನು ಏರ್ಪಡಿಸುತ್ತಿದ್ದ ಹಿರಿಯರು ಇಂದಿನ ಸಂಘಟಕರಿಗೆ ಮಾದರಿ. ಅವರು ಯಕ್ಷಗಾನಕ್ಕಾಗಿ ಬದುಕಿ, ತಮ್ಮ ಬದುಕನ್ನು ಆ ಕಲೆಗಾಗಿ ತೇದವರು ಎಂದು ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಪಳ್ಳಿ ರಮಾನಾಥ ಹೆಗ್ಡೆ ಹೇಳಿದರು.

Advertisement

ಯಕ್ಷಾಂಗಣ ಮಂಗಳೂರು ಮತ್ತು ಕರ್ನಾಟಕ ಯಕ್ಷಭಾರತಿ ಪುತ್ತೂರು ವತಿಯಿಂದ ಕರ್ನಾಟಕ ರಾಜ್ಯೋತ್ಸವ ಕಲಾಸಂಭ್ರಮದ ಪ್ರಯುಕ್ತ ನಗರದ ಎಸ್‌ಡಿಎಂ ಕಾನೂನು ಕಾಲೇಜು ಸಭಾಂಗಣದಲ್ಲಿ 6ನೇ ವರ್ಷದ ಕನ್ನಡ ನುಡಿಹಬ್ಬ ಯಕ್ಷಗಾನ ತಾಳಮದ್ದಳೆ ಸಪ್ತಾಹ -2018ರ ಕೀರ್ತಿಶೇಷ ಅರ್ಥಧಾರಿಗಳಾದ ದಿ| ಎ.ಕೆ. ನಾರಾಯಣ ಶೆಟ್ಟಿ ಮತ್ತು ದಿ| ಎ.ಕೆ. ಮಹಾಬಲ ಶೆಟ್ಟಿ ಅವರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮ್ಮಾನ
ಉದ್ಯಮಿ ಕಿಶನ್‌ ಶೆಟ್ಟಿ ಅವರನ್ನು ಯಕ್ಷಾಂಗಣ ವತಿಯಿಂದ ಸಮ್ಮಾನಿಸಲಾಯಿತು. ನ್ಯಾಯವಾದಿ ಶ್ರೀಧರ ಶೆಟ್ಟಿ ಪುಳಿಂಚ, ಕೊಲ್ಯ ಶಾರದಾ ಸೇವಾ ಟ್ರಸ್ಟ್‌ ಅಧ್ಯಕ್ಷ ಪ್ರಕಾಶ್‌ ಎಚ್‌., ಮುಡಾ ಅಧಿಕಾರಿ ವಿಶ್ವನಾಥ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಎ.ಕೆ. ಸ್ಮಾರಕ ಸಮಿತಿಯ ಪದ್ಮಾವತಿ ಶೇಖ, ಎ.ಕೆ. ಸಂಜ್ಯೋತ್‌ ಶೇಖ, ಎ.ಕೆ. ಪ್ರಶಾಂತ್‌ ಶೆಟ್ಟಿ, ಪ್ರ. ಕಾರ್ಯದರ್ಶಿ ತೋನ್ಸೆ ಪುಷ್ಕಳಕುಮಾರ್‌, ಪದಾಧಿಕಾರಿಗಳಾದ ವಿಶ್ವನಾಥ ಶೆಟ್ಟಿ ತೀರ್ಥಹಳ್ಳಿ, ಕೆ. ಲಕ್ಷ್ಮೀ ನಾರಾಯಣ ರೈ ಹರೇಕಳ, ಉಮೇಶಾಚಾರ್ಯ ಗೇರುಕಟ್ಟೆ, ಸಿದ್ಧಾರ್ಥ ಅಜ್ರಿ, ಮಧುಸೂದನ ಅಲೆವೂರಾಯ, ಪೂರ್ಣೇಶ ಆಚಾರ್ಯ ಉಪಸ್ಥಿತರಿದ್ದರು.

ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರು. ಮಹಿಳಾ ಪ್ರತಿನಿಧಿ ಶೋಭಾ ಕೇಶವ ಕಣ್ಣೂರು ವಂದಿಸಿದರು. ಸುಧಾಕರ ರಾವ್‌ ಪೇಜಾವರ ನಿರೂಪಿಸಿದರು. ಬಳಿಕ ಹರೀಶ್‌ ಶೆಟ್ಟಿ ಸೂಡ ವಿರಚಿತ ‘ಅರ್ಜುನ ಸನ್ನೆಸಿ’ (ಸುಭದ್ರಾ ಕಲ್ಯಾಣ) ತುಳು ಯಕ್ಷಗಾನ ತಾಳಮದ್ದಳೆ ಸತೀಶ್‌ ಶೆಟ್ಟಿ ಬೊಂದೇಲ್‌ ಭಾಗವತಿಕೆಯಲ್ಲಿ ಜರಗಿತು.

ಆಸಕ್ತರಿಗೆ ಮಾರ್ಗದರ್ಶಕರು
ಸಂಸ್ಮರಣೆ ಸಮಿತಿ ಸಂಚಾಲಕ ಎ.ಕೆ. ಜಯರಾಮ ಶೇಖ ನುಡಿನಮನ ಸಲ್ಲಿಸಿ ಮಾತನಾಡಿ, ಎ.ಕೆ. ನಾರಾಯಣ ಶೆಟ್ಟರು ತಮ್ಮ ಟೈಲರ್‌ ವೃತ್ತಿಯೊಂದಿಗೆ ಯಕ್ಷಗಾನ ಅರ್ಥಧಾರಿಯಾಗಿ ಹೆಸರು ಗಳಿಸಿದವರು. ಫರಂಗಿಪೇಟೆಯಲ್ಲಿ ಯಕ್ಷಗಾನ ಸಂಘ ಸ್ಥಾಪಿಸಿ, ಹಲವು ಆಸಕ್ತರಿಗೆ ಮಾರ್ಗದರ್ಶಕರಾಗಿದ್ದರು. ಯಕ್ಷಗಾನಕ್ಕೆ ಬೇಕಾಗುವ ಪರದೆ, ಟೆಂಟ್‌ಗಳನ್ನು ತಯಾರಿಸಿ ಕೊಡುತ್ತಿದ್ದರು. ಅವರ ಜತೆ ಪಳಗಿದ ಮಹಾಬಲ ಶೆಟ್ಟರು ಚೌತಿ ತಾಳಮದ್ದಳೆಗಳನ್ನು ಸಂಯೋಜಿಸುತ್ತಿದ್ದರು ಎಂದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next