ಜಪ್ಪು: ಮಂಗಳೂರು ನಗರ ವ್ಯಾಪ್ತಿಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಹಲವು ಕಡೆಗಳಲ್ಲಿ ತ್ಯಾಜ್ಯ ತುಂಬಿಕೊಂಡು ಪ್ರಯಾಣಿಕರಿಗೆ ದುರ್ನಾತ ಬೀರುವ ಪರಿಸ್ಥಿತಿಯಿದೆ. ಪಾಲಿಕೆ ವ್ಯಾಪ್ತಿಯ ರಸ್ತೆ ಬದಿಯಲ್ಲಿ ತ್ಯಾಜ್ಯ ಸಮಸ್ಯೆ ಇದ್ದರೆ ಪಾಲಿಕೆಯ ಸಂಬಂಧಪಟ್ಟವರು ತ್ಯಾಜ್ಯ ತೆರವು ಮಾಡುವ ಬಗ್ಗೆ ಗಮನಹರಿಸುತ್ತಾರೆ. ಆದರೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ತ್ಯಾಜ್ಯದ ಸಮಸ್ಯೆ ಇದ್ದರೆ ಯಾರೂ ಕೂಡ ಇತ್ತ ಗಮನಹರಿಸುವುದಿಲ್ಲ. ಹೀಗಾಗಿ ಹೆದ್ದಾರಿ ಬದಿಯ ತ್ಯಾಜ್ಯದ ಗೋಳು ಕೇಳುವವರೇ ಇಲ್ಲ ಎಂಬಂತಾಗಿದೆ.
ತಲಪಾಡಿ ಹೆದ್ದಾರಿ ಬದಿಯಿಂದ ಆರಂಭ ವಾಗಿ ತೊಕ್ಕೊಟ್ಟು ವರೆಗಿನ ರಸ್ತೆಯ ಇಕ್ಕೆಲಗಳ ಅಲ್ಲಲ್ಲಿ ತ್ಯಾಜ್ಯ ತುಂಬಿರುವ ಸ್ಪಾಟ್‌ಗಳಿವೆ. ಇನ್ನು ಕಲ್ಲಾಪುವಿನಿಂದ ನೇತ್ರಾವತಿ ಸೇತುವೆ ಹಾಗೂ ಅಲ್ಲಿಂದ ಎಕ್ಕೂರುವರೆಗೆ ಕೂಡ ಅಲ್ಲಲ್ಲಿ ತ್ಯಾಜ್ಯ ವ್ಯಾಪಿಸಿದ ಜಾಗವಿದೆ. ಪಂಪ್‌ವೆಲ್‌ನಿಂದ ನಂತೂರವರೆಗಿನ ಹೆದ್ದಾರಿ ಬದಿಯಲ್ಲಿಯೂ ತ್ಯಾಜ್ಯ ಎಸೆಯುವ ಜಾಗವಿದೆ.
ನಂತೂರು-ಕೆಪಿಟಿ ಅಲ್ಲಿಂದ ಕೊಟ್ಟಾರ ಚೌಕಿ, ಬೈಕಂಪಾಡಿ, ಸುರತ್ಕಲ್, ಮೂಲ್ಕಿ ಹೀಗೆ ಹೆದ್ದಾರಿಯುದ್ದಕ್ಕೂ ತ್ಯಾಜ್ಯ ಎಸೆಯುವ ಪರಿಪಾಠ ಬೆಳೆದುಬಂದಿದೆ. ಹೆದ್ದಾರಿ ಬದಿಯಲ್ಲಿ ತ್ಯಾಜ್ಯ ಕಂಡರೆ ಮತ್ತೆ ಅಲ್ಲಿ ತ್ಯಾಜ್ಯ ಎಸೆಯುವವರ ಸಂಖ್ಯೆ ಏರಿಕೆಯಾಗುತ್ತಲೇ ಇರುತ್ತದೆ. ತ್ಯಾಜ್ಯ ಕಂಡ ಕೂಡಲೇ ಅವರು ಕೂಡ ತಮ್ಮಲ್ಲಿರುವ ತ್ಯಾಜ್ಯವನ್ನು ಅಲ್ಲೇ ಸುರಿದು ಸಾಗುತ್ತಾರೆ.
ರಾತ್ರಿಯಾಗುತ್ತಿಂದ್ದಂತೆ ಅಕ್ಕ ಪಕ್ಕದ ಅಂಗಡಿಯವರ ಸಹಿತ ಕೋಳಿ ತ್ಯಾಜ್ಯವೂ ಇಲ್ಲಿಯೇ ಡಂಪ್ ಆಗಿ ಆ ಜಾಗ ತ್ಯಾಜ್ಯಮಯವಾಗುತ್ತಿದೆ. ಹಲವು ಕಡೆಯ ಹೆದ್ದಾರಿ ಬದಿಯಲ್ಲಿ ಹೊರ ಜಿಲ್ಲೆ-ರಾಜ್ಯದ ವಾಹನಗಳನ್ನು ನಿಲ್ಲಿಸಿ ಹೆದ್ದಾರಿ ಬದಿಯಲ್ಲಿ ಗಲೀಜು ಮಾಡುತ್ತಿದ್ದಾರೆ ಎಂಬ ಆರೋಪವೂ ಇದೆ.
ಜಪ್ಪಿನ ಮೊಗರು -ಸೀಯಾಳದ ಸಿಪ್ಪೆ ರಾಶಿ ಜಪ್ಪಿನಮೊಗರು ಕಂರ್ಭಿಸ್ಥಾನ ದ್ವಾರದ ಮುಂಭಾಗದ ಬಸ್ ನಿಲ್ದಾಣದ ಪಕ್ಕದಲ್ಲಿ ಗಲೀಜಿನ ವಾತಾವರಣ ನಿರ್ಮಾಣವಾಗಿದೆ. ಸೀಯಾಳದ ಚಿಪ್ಪು ಇಲ್ಲಿ ರಾಶಿ ಹಾಕಲಾಗಿದೆ. ಬಿದ್ದ ತ್ಯಾಜ್ಯವನ್ನು ತೆರವು ಮಾಡಲು ಸಂಬಂಧಪಟ್ಟವರು ಯಾರೂ ಗಮನಹರಿಸದೆ ಇಲ್ಲಿ ಗಲೀಜಿನ ಪರಿಸ್ಥಿತಿ ನಿರ್ಮಾಣವಾಗಿದೆ. ಸೀಯಾಳ ವ್ಯಾಪಾರಿಗಳು ಸೀಯಾಳದ ಸಿಪ್ಪೆಗಳನ್ನು ಇಲ್ಲೇ ರಾತ್ರಿ ವೇಳೆಯಲ್ಲಿ ಸುರಿದು ಇಲ್ಲಿನ ಪರಿಸರಕ್ಕೆ ಹಾನಿಗೊಳಿಸುತ್ತಿದ್ದಾರೆ. ಇದರ ಅಕ್ಕಪಕ್ಕದಲ್ಲಿ
ಮಹಾನಗರ ಪಾಲಿಕೆಯ ವಾಹನಗಳು ಕಸ ವಿಲೇವಾರಿ ನಡೆಸುತ್ತಿದ್ದರೂ ಈ ತ್ಯಾಜ್ಯದ ಬಗ್ಗೆ ಗಮನಹರಿಸುತ್ತಿಲ್ಲ ಎಂಬುದು ಸ್ಥಳೀಯರ ದೂರು.