Advertisement

Mangaluru: ಕದ್ರಿ ಪಾರ್ಕ್‌ನಲ್ಲಿ ರಾಜ್ಯದ ಎರಡನೇ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ಅನಾವರಣ

04:36 AM Sep 19, 2024 | Team Udayavani |

ಮಂಗಳೂರು: ರಾಜ್ಯದ ಎರಡನೇ ಅತಿ ಎತ್ತರದ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ಉದ್ಘಾಟನ ಸಮಾರಂಭ ನಗರದ ಕದ್ರಿ ಪಾರ್ಕ್‌ನಲ್ಲಿ ಬುಧವಾರ ಜರಗಿತು.

Advertisement

ಸಂಸದ ಕ್ಯಾ| ಬ್ರಿಜೇಶ್‌ ಚೌಟ ಮಾತನಾಡಿ, ಕೇಂದ್ರ ಸರಕಾರದ ಸ್ಮಾರ್ಟ್‌ಸಿಟಿ ಯೋಜನೆಯ ಮೂಲಕ ರಾಷ್ಟ್ರಧ್ವಜ ಸ್ತಂಭ ನಿರ್ಮಾಣದ ಮಹತ್ತರ ಕಾರ್ಯ ನಡೆದಿದ್ದು, ಇದರೊಂದಿಗೆ ಭಾರತೀಯತೆಯ ಗರ್ವ ಮತ್ತಷ್ಟು ಇಮ್ಮಡಿಗೊಳಿಸಿದೆ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ರಾಷ್ಟ್ರೀಯ ಭಾವನೆ, ಚಿಂತನೆ ಮತ್ತಷ್ಟು ಹೆಚ್ಚಾಗಿದೆ. ರಾಷ್ಟ್ರಧ್ವಜ ನಮ್ಮ ಸ್ವಾಭಿಮಾನದ ಸಂಕೇತ ಎಂದು ಹೇಳಿದರು.

ಶಾಸಕ ಡಿ. ವೇದವ್ಯಾಸ ಕಾಮತ್‌ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಕದ್ರಿ ಪಾರ್ಕ್‌ನಲ್ಲಿ ರಾಷ್ಟ್ರಧ್ವಜಸ್ತಂಭ ನಿರ್ಮಾಣದ ಕೆಲಸ ನಡೆದಿದೆ. ಇದು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವಲ್ಲೂ ಮಹತ್ತರ ಪಾತ್ರ ವಹಿಸಲಿದೆ ಎಂದರು.

ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಸಾಕಾರ
ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು ಮಾತನಾಡಿ, ರಾಜ್ಯದಲ್ಲಿ ಬೆಳಗಾವಿ ಹೊರತುಪಡಿಸಿ (110 ಮೀ.) ಅತೀ ಎತ್ತರದ ರಾಷ್ಟ್ರ ಧ್ವಜಸ್ತಂಭ ಕದ್ರಿ ಪಾರ್ಕ್‌ನಲ್ಲಿ ನಿರ್ಮಾಣಗೊಂಡಿದೆ. ಸ್ಮಾರ್ಟ್‌ ಸಿಟಿ ಯೋಜನೆ ಮೂಲಕ ಸುಮಾರು 75 ಲ.ರೂ. ವೆಚ್ಚದಲ್ಲಿ 75 ಮೀ. ಎತ್ತರದ ರಾಷ್ಟ್ರಧ್ವಜಸ್ತಂಭ ಇದಾಗಿದೆ. ಧ್ವಜಸ್ತಂಭ ಕಟ್ಟೆ, ಬೆಳಕಿನ ವ್ಯವಸ್ಥೆ ಹೊಂದಿರಲಿದೆ ಎಂದು ವಿವರಿಸಿದರು.

ಉಪಮೇಯರ್‌ ಸುನೀತಾ, ಸ್ಥಾಯೀ ಸಮಿತಿ ಅಧ್ಯಕ್ಷರಾದ ಭರತ್‌ ಕುಮಾರ್‌, ವರುಣ್‌ ಚೌಟ, ಗಣೇಶ್‌ ಕುಲಾಲ್‌, ಪಾಲಿಕೆ ವಿಪಕ್ಷ ನಾಯಕ ಪ್ರವೀಣ್‌ ಚಂದ್ರ ಆಳ್ವ, ಸ್ಥಳೀಯ ಮನಪಾ ಸದಸ್ಯೆ ಶಕೀಲ ಕಾವ, ಮಾಜಿ ಮೇಯರ್‌ ಜಯಾನಂದ ಅಂಚನ್‌, ಭಾಸ್ಕರ್‌ ಕೆ., ಮುಡಾ ಮಾಜಿ ಅಧ್ಯಕ್ಷ ರವಿಶಂಕರ ಮಿಜಾರ್‌ ಮೊದಲಾದವರು ಭಾಗವಹಿಸಿದ್ದರು. ಮಂಜುಳಾ ಶೆಟ್ಟಿ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next