Advertisement
ಈ ಹಿಂದೆ ಎಸೆಸೆಲ್ಸಿ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಇರುವ “ಒಎಂಆರ್ ಶೀಟ್’ನಲ್ಲಿ ಮೌಲ್ಯಮಾಪನದ ಅಂಕಗಳನ್ನು ಎಂಟ್ರಿ ಮಾಡಿ ಬೆಂಗಳೂರಿನ ಮಂಡಳಿಗೆ ಕಳುಹಿಸಲಾಗುತ್ತಿತ್ತು. ಅಲ್ಲಿ ಸ್ಕ್ಯಾನ್ ಆಗಲು 15ಕ್ಕೂ ಹೆಚ್ಚು ದಿನ ಬೇಕಾಗಿತ್ತು. ಆದರೆ ಈಗ ಮೌಲ್ಯಮಾಪನ ಮಾಡಿದ ದಿನವೇ ಆಯಾ ಉಪಮೌಲ್ಯಮಾಪಕರು ಅದೇ ಕೇಂದ್ರದ ಕಂಪ್ಯೂಟರ್‌ನಲ್ಲಿ ಅಂಕ ನಮೂದು ಮಾಡುತ್ತಾರೆ. ಎ. 24ರಿಂದ ಈ ಬಾರಿಯ ಮೌಲ್ಯಮಾಪನ ರಾಜ್ಯಾದ್ಯಂತ ಆರಂಭವಾಗಲಿದೆ.
ಮೌಲ್ಯಮಾಪನ ಆದ ದಿನವೇ “ಮಾರ್ಕ್ ಎಂಟ್ರಿ ಶೀಟ್’ನಲ್ಲಿ ಅಂಕ ಬರೆಯಲಾಗುತ್ತದೆ. ಉಪ ಮೌಲ್ಯಮಾಪಕರು ತಮ್ಮ ಲಾಗಿನ್ ಬಳಸಿ ಅಲ್ಲೇ ಇರುವ ಕಂಪ್ಯೂಟರ್‌ನಲ್ಲಿ ಅಂಕಗಳನ್ನು ನಮೂದಿಸುತ್ತಾರೆ. ಇದನ್ನು ಅಲ್ಲಿ ಉಸ್ತುವಾರಿ ವಹಿಸಿರುವ ಸಹಾಯಕ ಮೌಲ್ಯಮಾಪಕರು ಪರಿಶೀಲಿಸಿ ಪ್ರತ್ಯೇಕ ಲಾಗಿನ್‌ನಲ್ಲಿ ನಮೂದಿಸುತ್ತಾರೆ. ಎರಡೂ ಜನರ ಅಂಕ ನಮೂದು ತಾಳೆ ಹೊಂದಿದರೆ ಮಾತ್ರ ಆನ್‌ಲೈನ್‌ನಲ್ಲಿ ಅಂತಿಮವಾಗುತ್ತದೆ. ಇದಕ್ಕಾಗಿ ಪ್ರತೀ ಮೌಲ್ಯಮಾಪನ ಕೇಂದ್ರದಲ್ಲಿ ಪ್ರತ್ಯೇಕ ಕಚೇರಿ ಇರುತ್ತದೆ. ಹಾಗೂ ಅಲ್ಲಿ ಸುಮಾರು 15 ಕಂಪ್ಯೂಟರ್‌ಗಳಿರುತ್ತವೆ. ಇಂಟರ್‌ನೆಟ್, ಸ್ಥಿರ ದೂರವಾಣಿ ಸಂಪರ್ಕ ಇರುತ್ತದೆ. ಬಂಡಲ್ ಸಹವಾಸಕ್ಕೆ ಮುಕ್ತಿ!
ಈ ಹಿಂದೆ ಮೌಲ್ಯಮಾಪನ ಆದ ಬಳಿಕ ಉತ್ತರ ಪತ್ರಿಕೆಯನ್ನು ಉಪಮೌಲ್ಯಮಾಪಕರು ಬಂಡಲ್ ಮಾಡಿ ಕೇಂದ್ರದಲ್ಲಿರುವ ಡಿಸಿ (ಸಹಾಯಕ ಮೌಲ್ಯಮಾಪಕರು)ಅವರಿಗೆ ನೀಡುತ್ತಿದ್ದರು. ಅದನ್ನು ಪ್ಯಾಕ್ ಮಾಡಿ ಬೆಂಗಳೂರಿಗೆ ಕಳುಹಿಸುತ್ತಿದ್ದರು. ಜತೆಗೆ ಅಂಕಗಳ ವಿವರದ ಪಟ್ಟಿಯನ್ನು ಬೇರೆಯೇ ಕಳುಹಿಸಲಾಗುತ್ತಿತ್ತು. ಬಳಿಕ ಜಿಲ್ಲೆಯಿಂದ ಒಂದೆರಡು ಅಧಿಕಾರಿಗಳನ್ನು ಬೆಂಗಳೂರಿಗೆ ಕಳುಹಿಸಿ ಅಲ್ಲಿ ಆನ್‌ಲೈನ್‌ನಲ್ಲಿ ಅಂಕ ಎಂಟ್ರಿ ಮಾಡಲಾಗುತ್ತಿತ್ತು. ರಾಜ್ಯದ ಎಲ್ಲ ಜಿಲ್ಲೆಗಳಿಂದ ಬರುವ ಅಧಿಕಾರಿ ವರ್ಗ ಈ ಕಾರ್ಯವನ್ನು ಜತನದಿಂದ ಮಾಡಬೇಕಿತ್ತು. ಹೀಗಾಗಿ ಮೌಲ್ಯಮಾಪನ ಆದ ಬಳಿಕ ಫಲಿತಾಂಶಕ್ಕೆ ಸುಮಾರು 25 ದಿನ ಕಾಯಬೇಕಿತ್ತು!
Related Articles
ಒಂದು ದಿನಕ್ಕೆ ಒಬ್ಬ ಉಪಮೌಲ್ಯಮಾಪಕರಿಗೆ 20 ಉತ್ತರಪತ್ರಿಕೆ ಮೌಲ್ಯಮಾಪನವಿರುತ್ತದೆ. ಮಧ್ಯಾಹ್ನದವರೆಗೆ 10 ಹಾಗೂ ಬಳಿಕ 10 ಎಂದು ನಿಗದಿ ಮಾಡಲಾಗಿದೆ. ಎಲ್ಲ ವಿಷಯವಾರು ಮೌಲ್ಯಮಾಪನದ ಅಂಕಗಳನ್ನು ಅದೇ ಉಪಮೌಲ್ಯಮಾಪಕರು ಅದೇ ದಿನ ಫೀಡ್ ಮಾಡಬೇಕು. ಪ್ರತೀ ದಿನ ಇಲಾಖೆಯ ಕೇಂದ್ರ ಕಚೇರಿಯಿಂದ ಈ ಬಗ್ಗೆ ನಿಗಾ ವಹಿಸಲಾಗುತ್ತದೆ. ಜತೆಗೆ ಅಂಕಗಳ ಆಧಾರದಲ್ಲಿ ಇಲಾಖೆಯು ಅಂಕಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆಯನ್ನು ಆರಂಭಿಸುತ್ತದೆ.
Advertisement
ಎಸೆಸೆಲ್ಸಿ ಮೌಲ್ಯಮಾಪನ ಮಾಡಿದ ಅಂಕಗಳು ಆನ್‌ಲೈನ್‌ನಲ್ಲಿ ಫೀಡ್ ಆಗಲು ಹಿಂದೆ ಸುದೀರ್ಘ ದಿನ ಕಾಯಬೇಕಿತ್ತು; ಆದರೆ ಈಗ ಮೌಲ್ಯಮಾಪನ ಮಾಡಿದ ದಿನ ಅದೇ ಕೇಂದ್ರದಿಂದ ಅಂಕಗಳನ್ನು ಉಪಮೌಲ್ಯಮಾಪಕರು ಆನ್‌ಲೈನ್‌ನಲ್ಲಿ ಫೀಡ್ ಮಾಡುತ್ತಾರೆ. ಇದಕ್ಕಾಗಿ ಎಲ್ಲ ಕೇಂದ್ರಗಳಿಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ಅಲ್ಲಿ ಪ್ರತೀ ದಿನದ ಮೌಲ್ಯಮಾಪನವಾದ ಉತ್ತರ ಪತ್ರಿಕೆಯ ಅಂಕಗಳನ್ನು ಕಂಪ್ಯೂಟರ್‌ನಲ್ಲಿ ಎಂಟ್ರಿ ಮಾಡಲಾಗುತ್ತದೆ.– ದಯಾನಂದ ನಾಯಕ್, ಡಿಡಿಪಿಐ, ದ.ಕ.