ಮಂಗಳೂರು: ಅಯೋಧ್ಯೆ ತೀರ್ಪು ಯಾವುದೇ ರೀತಿಯಲ್ಲಿ ಬಂದರೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲ ಸಮುದಾಯಗಳವರು ನೋಡಿಕೊಳ್ಳಬೇಕು. ಜಿಲ್ಲಾಡಳಿತರ ಸಹಕಾರ ಸಂಪೂರ್ಣ ನಿಮಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಹೇಳಿದರು.
ಅವರು ಗುರುವಾರವಾರದಂದು ಅಯೋಧ್ಯೆ ತೀರ್ಪು ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶಾಂತಿ ಸೌಹಾರ್ದ ಕಾಪಾಡುವ ನಿಟ್ಟಿನಲ್ಲಿ ಡಿಸಿ ಕಚೇರಿಯಲ್ಲಿ ನಡೆದ ಶಾಂತಿ ಸಭೆಯನ್ನು ಮಾತನಾಡಿದರು. ಮುಂದಿನ ಕೆಲವೇ ದಿನದಲ್ಲಿ ಅಯೋಧ್ಯೆ ತೀರ್ಪು ಹೊರ ಬೀಳಬಹುದು. ಸರ್ವೋಚ್ಚ ನ್ಯಾಯಾಲಯವು ಎಲ್ಲ ರೀತಿಯ ಅವಲೋಕನ ಮಾಡಿ ಅಂತಿಮ ತೀರ್ಪು ಕೊಡುತ್ತದೆ. ಆ ತೀರ್ಪು ಯಾರ ಪರ-ವಿರೋಧ ಅಲ್ಲ. ಸಂವಿಧಾನದ ಮೂಲಾಶಯದೊಂದಿಗೆ ಕಾನೂನಿನ ಪರಿಭಾಷೆ ಅಷ್ಟೇ. ಹಾಗಾಗಿ ಎಲ್ಲರೂ ನ್ಯಾಯಾಲಯದ ತೀರ್ಪಿಗೆ ಗೌರವ ಕೊಡಬೇಕು. ಎಲ್ಲ ಸಮಾಜದ ನಾಯಕರು, ಹಿರಿಯರು ತಮ್ಮ ಸಮುದಾಯದ ಯುವಕರು ಸೇರಿದಂತೆ ಕಟ್ಟಕಡೆಯ ಮಂದಿಗೂ ತಿಳಿಸಬೇಕು. ಸೋಶಿಯಲ್ ಮೀಡಿಯಾದಲ್ಲಿ ಅತಿರೇಕದ ಬರಹ ಬರೆದವರ ಮೇಲೆ ಮುಲಾಜಿಲ್ಲದೆ ಕಠಿನ ಕ್ರಮ ಕೈಗೊಳ್ಳಲಾಗುವುದು. ತೀರ್ಪು ಬರುವ ಮುನ್ನ ಮತ್ತು ನಂತರದ ಸನ್ನಿವೇಶ ನಿಯಂತ್ರಿಸಲು ಪೊಲೀಸ್ ಇಲಾಖೆ ಸನ್ನದ್ಧವಾಗಿದೆ ಎಂದು ಹೇಳಿದರು.
ಮಂಗಳೂರು ಪೊಲೀಸ್ ಆಯುಕ್ತ ಡಾ. ಪಿ.ಎಸ್. ಹರ್ಷ ಮಾತನಾಡಿ ಈ ವಾರದಲ್ಲಿ ಈದ್ ಮಿಲಾದ್, ಟಿಪ್ಪು ಜಯಂತಿ ಇದೆ. ಧಾರ್ಮಿಕ ಕಾರ್ಯಕ್ರಮಕ್ಕೆ ಜಿಲ್ಲಾಡಳಿತದಿಂದ ಯಾವುದೇ ಅಡ್ಡಿ ಇಲ್ಲ. ಆದರೆ ಮೆರವಣಿಗೆ ನಡೆಸುವಂತಿಲ್ಲ. ಟಿಪ್ಪು ಜಯಂತಿ ಸರಕಾರದಿಂದ ಆಚರಿಸುವುದಿಲ್ಲ. ಯಾರೂ ಸಾರ್ವಜನಿಕವಾಗಿ ಟಿಪ್ಪು ಜಯಂತಿ ಆಚರಿಸುವಂತಿಲ್ಲ ಎಂದು ಹೇಳಿದರು.
ವಿಶ್ವ ಹಿಂದೂ ಪರಿಷತ್‌ನ ಶರಣ್ ಪಂಪ್ ವೆಲ್ ಅವರು ಮಾತನಾಡಿ ಅಯೋಧ್ಯೆ ತೀರ್ಪು ಕುರಿತಾಗಿ ಯಾವುದೇ ಹೇಳಿಕೆ ಕೊಡಬಾರದು, ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಬರಹ ಹಾಕದಂತೆ, ಪತ್ರಿಕೆ ಹೇಳಿಕೆ ಕೊಡದಂತೆ, ವಿಜಯೋತ್ಸವ ಆಚರಿಸದಂತೆ ಈಗಾಗಲೇ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದ್ದು, ತೀರ್ಪು ಏನೇ ಬರಲಿ ನಮ್ಮ ಕಾರ್ಯಕ್ರಮ ಯಾವುದೂ ಇರಲ್ಲ ಎಂದು ಹೇಳಿದರು.
ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಅಲಿ ಹಸನ್ ಮಾತನಾಡಿ ಅಯೋಧ್ಯೆ ಕುರಿತಾಗಿ ಯಾವುದೇ ತೀರ್ಪು ಬಂದರೂ ನ್ಯಾಯಾಲಯದ ತೀರ್ಪಿಗೆ ತಲೆಬಾಗುತ್ತೇವೆ. ನಮ್ಮ ಸಮುದಾಯದ ಯುವಕರು ಸಹಿತ ಎಲ್ಲರಿಗೂ ಯಾವುದೇ ಪ್ರತಿಕ್ರಿಯೆ ನೀಡದಂತೆ ಹೇಳುತ್ತೇವೆ. ಆದರೆ ಪೊಲೀಸರು ಯಾವುದೇ ಕಾರಣಕ್ಕೂ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ತೊಂದರೆ ಕೊಡಬಾರದೆಂದು ಮನವಿ ಮಾಡಿದರು.