Advertisement

Mangaluru; ಸಂಸ್ಕಾರ, ಉತ್ತಮ ಕರ್ಮದಿಂದ ಸುಖ, ಸಂತೋಷ

12:24 AM Feb 12, 2024 | Team Udayavani |

ಮಂಗಳೂರು: ಉತ್ತಮ ಸಂಸ್ಕಾರ ಮತ್ತು ಕರ್ಮದಿಂದ ಸುಖ, ಶಾಂತಿ, ನೆಮ್ಮದಿ ಸಾಧ್ಯ ಎಂದು ಅಂತಾರಾಷ್ಟ್ರೀಯ ಖ್ಯಾತಿಯ ವಾಗ್ಮಿ ಬಿ.ಕೆ.ಶಿವಾನಿ ಹೇಳಿದ್ದಾರೆ.

Advertisement

ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಮಂಗಳೂರು ಕೇಂದ್ರದ ವತಿಯಿಂದ ರವಿವಾರ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ “ಲಿವಿಂಗ್‌ ಲೈಫ್ ವಿದ್‌ ಈಸ್‌ ಆ್ಯಂಡ್‌ ಗ್ರೇಸ್‌’ ವಿಚಾರದಲ್ಲಿ ಅವರು ಪ್ರವಚನ ನೀಡಿದರು.

ಕಷ್ಟ, ಸುಖಗಳಿಗೆ ದೇವರು ಕಾರಣವೆಂಬುದಾಗಿ ಹೇಳಲು ಸಾಧ್ಯವಿಲ್ಲ. ಒಂದು ವೇಳೆ ದೇವರೇ ಕಾರಣವಾಗಿದ್ದರೆ ಎಲ್ಲರೂ ಒಂದೇ ರೀತಿ ಇರುತ್ತಿದ್ದರು. ನಮ್ಮ ಕರ್ಮವೇ ನಮ್ಮ ಕಷ್ಟ ಸುಖಗಳಿಗೆ ಕಾರಣ. ಚೆಂಡನ್ನು ಗೋಡೆಗೆ ಹೊಡೆದಾಗ ಅದು ಮರಳಿ ಬರುವಂತೆ ನಮ್ಮ ಕೆಟ್ಟ ಕರ್ಮ ಇಂದಲ್ಲ ನಾಳೆ ನಮಗೆ ಮರಳಿ ಬಂದು ಹೊಡೆಯುತ್ತದೆ. ನಮ್ಮೊಂದಿಗೆ ಶಾಶ್ವತವಾಗಿ ಉಳಿಯುವುದು ಸಂಸ್ಕಾರ ಮತ್ತು ಕರ್ಮ ಮಾತ್ರ. ಮನೆಗಳಲ್ಲಿ ಉತ್ತಮ ಸಂಸ್ಕಾರವಿದ್ದಾಗ ನೆಮ್ಮದಿ ಇರುವಂತೆ ಜಗತ್ತಿನಲ್ಲಿಯೂ ಸಂಸ್ಕಾರವಿದ್ದರೆ ಉತ್ತಮ ಜಗತ್ತು ನಿರ್ಮಾಣ ಸಾಧ್ಯ ಎಂದರು.

ಕ್ಷಮೆ, ಆಶೀರ್ವಾದ ನಮಗಾಗಿ
ಇನ್ನೊಬ್ಬರನ್ನು ಕ್ಷಮಿಸುವುದು, ಅವರನ್ನು ಆಶೀರ್ವದಿಸುವುದರಿಂದ ನಮ್ಮಲ್ಲಿ ಧನಾತ್ಮಕ ಶಕ್ತಿ ಉಂಟಾಗಿ ನಮ್ಮ ಶಾಂತಿ, ನೆಮ್ಮದಿಗೆ ಕಾರಣವಾಗುತ್ತದೆ. ಆ ಧನಾತ್ಮಕ ಶಕ್ತಿ ಇತರರನ್ನು ಕೂಡ ತಲುಪುತ್ತದೆ. ನಾವೆಲ್ಲರೂ ದೇವರ ಮಕ್ಕಳು. ಅವರು ಹೇಗಿರಬೇಕು ಎಂಬ ಬಗ್ಗೆ ನಮಗೆ ನಾವೇ ಪ್ರಶ್ನಿಸಿ ಅದರಂತೆ ಬದುಕಬೇಕು ಎಂದರು.

ಮಂಗಳೂರು ಕೇಂದ್ರದ ಬಿ.ಕೆ.ವಿಶ್ವೇಶ್ವರಿ, ರಾಜಯೋಗಿನಿ ನಿರ್ಮಲಾ, ರೇವತಿ ಉಪಸ್ಥಿತರಿದ್ದರು.

Advertisement

ಮನೆ, ಜಗತ್ತಿನ ನೆಮ್ಮದಿಗಾಗಿ….
-ಸಮಾಜದಲ್ಲಿ ಮೂರು ವರ್ಗದವರಿದ್ದಾರೆ. ಬೆಂಕಿ ಹಾಕುವವರು, ಅದನ್ನು ನೋಡುತ್ತ ನಿಲ್ಲುವವರು ಮತ್ತು ಬೆಂಕಿ ನಂದಿಸುವವರು. ಈ ಪೈಕಿ ಬೆಂಕಿ ನಂದಿಸುವವರ ಸಂಖ್ಯೆ ಹೆಚ್ಚಾಗಬೇಕಾಗಿದೆ.
-ರಾತ್ರಿ ಮಲಗುವ ಮೊದಲು ಮೊಬೈಲ್‌, ಟಿವಿ ನೋಡುವ ಬದಲು ಧ್ಯಾನ ಮಾಡಬೇಕು. ಕೆಟ್ಟ ಆಲೋಚನೆಗಳನ್ನು ದೂರ ಮಾಡಿಕೊಳ್ಳಬೇಕು. .
-ಕಲಿಯುಗದಲ್ಲಿ ನೆಮ್ಮದಿ, ಶಾಂತಿ ಇಲ್ಲದೆ ಚಡಪಡಿಸುತ್ತಿದ್ದೇವೆ. ಬೇರೆಯವರಿಂದ ತೊಂದರೆಯಾಗುತ್ತಿದೆ ಎಂದು ಭಾವಿಸುತ್ತಿದ್ದೇವೆ. ಆದರೆ ನಮಗೆ ನಾವೇ ಹೊಡೆದುಕೊಳ್ಳುತ್ತಿದ್ದೇವೆ ಎಂಬುದನ್ನು ತಿಳಿದುಕೊಳ್ಳಬೇಕು.

Advertisement

Udayavani is now on Telegram. Click here to join our channel and stay updated with the latest news.

Next