ಮಂಗಳೂರು: ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲಿ ಮಂಗಳವಾರ ಸಾಧಾರಣ ಮಳೆಯಾಗಿದೆ.
ಮಂಗಳೂರು ಸಹಿತ ಜಿಲ್ಲೆಯಾದ್ಯಂತ ದಿನವಿಡೀ ಮೋಡ ಕವಿದ ವಾತಾವರಣ ಇತ್ತು. ಸುಳ್ಯ ತಾಲೂಕಿನ ಗುತ್ತಿಗಾರು, ಮರ್ಕಂಜ, ಪಂಬೆತ್ತಾಡಿ, ಕಡಬ, ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಸಾಧಾರಣ ಮಳೆಯಾಗಿದೆ. ಮೂಲ್ಕಿ ತಾಲೂಕಿನ ವಿವಿಧೆಡೆ ತುಂತುರು ಮಳೆಯಾಗಿದೆ. ಕೊಡಗಿನ ಸೋಮವಾರಪೇಟೆ ತಾಲೂಕಿನ ವಿವಿಧೆಡೆ ಮಂಗಳವಾರ ಸಂಜೆ ಮತ್ತು ರಾತ್ರಿ ವೇಳೆ ಭಾರೀ ಮಳೆ ಸುರಿದಿದೆ. ಇದರಿಂದ ಕಾಫಿ ಬೆಳೆಗಾರರು ಆತಂಕಿತರಾಗಿದ್ದಾರೆ.
ಬೆಳಗ್ಗಿನ ವೇಳೆ ಬಹುತೇಕ ಕಡೆಗಳಲ್ಲಿ ಮಂಜಿನಿಂದ ಕೂಡಿದ ವಾತಾವರಣ ಇತ್ತು. ಚಳಿ ಹೆಚ್ಚಾಗಿತ್ತು. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಕರಾವಳಿ ಭಾಗದಲ್ಲಿ ಮುಂದಿನ ಎರಡು ದಿನಗಳ ಕಾಲ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೀತ ಗಾಳಿ ಮತ್ತು ತಂಪಿನ ವಾತಾವರಣ ಇತ್ತು. ಪರಿಣಾಮ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ ಇಳಿಕೆಯಾಗಿದೆ. ಮಂಗಳೂರಿನಲ್ಲಿ ಮಂಗಳವಾರ 29.9 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 3 ಡಿ.ಸೆ. ಕಡಿಮೆ ಇತ್ತು 22.8 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು.
ಇದನ್ನೂ ಓದಿ: ನೆರಿಯ: ಮುಂದುವರಿದ ಕಾಡಾನೆ ದಾಂಧಲೆ; ಆನೆ ಅಟ್ಟಲು ನಾಗರಹೊಳೆಯ ತಂಡ