Advertisement

ರಸ್ತೆ ಬದಿಯ ಅನಧಿಕೃತ ವಾಹನ ಎತ್ತಂಗಡಿಗೆ ಬರಲಿವೆೆ ಟೋವಿಂಗ್‌ ವಾಹನ

02:00 AM Jun 23, 2018 | Team Udayavani |

ಮಹಾನಗರ: ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಸಂಚಾರಕ್ಕೆ ಅಡ್ಡಿಪಡಿಸುವ ವಾಹನ ಮಾಲಕರ ವಿರುದ್ಧ ಕಠಿನ ಕ್ರಮ ಜರಗಿಸಲು ಪೊಲೀಸರು ಮುಂದಾಗಿದ್ದು, ಈ ನಿಟ್ಟಿನಲ್ಲಿ ನಾಲ್ಕು ಟೋವಿಂಗ್‌ ವಾಹನಗಳು ಶೀಘ್ರ ಮಂಗಳೂರು ಪೊಲೀಸ್‌ ಕಮಿಷನರೆಟ್‌ ಗೆ ಬರಲಿವೆ. ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಸಂಚಾರಿ ಪೊಲೀಸ್‌ ಠಾಣೆಗಳು ತಲಾ ಒಂದೊಂದು ಟೋವಿಂಗ್‌ ವಾಹನವನ್ನು ಹೊಂದಲಿವೆ ಎಂದು ಡಿಸಿಪಿ ಹನುಮಂತರಾಯ ಅವರು ಶುಕ್ರವಾರ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ನಡೆದ ಫೋನ್‌ ಇನ್‌ ನಲ್ಲಿ ತಿಳಿಸಿದರು. 

Advertisement

ನಗರದ PVS ವೃತ್ತದಿಂದ ಬಂಟ್ಸ್‌ ಹಾಸ್ಟೆಲ್‌ ವರೆಗೆ ಸದಾ ಸಂಚಾರ ದಟ್ಟಣೆ ಇರುತ್ತದೆ. ರಸ್ತೆ ಮಧ್ಯೆ ಕೋನ್‌ ಗಳನ್ನು ಅಳವಡಿಸಿದರೂ ರಸ್ತೆಯ ಎರಡೂ ಬದಿಗಳಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲುಗಡೆ ಮಾಡುವುದರಿಂದ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಆದ್ದರಿಂದ ಇಲ್ಲಿ ಟೈಗರ್‌ ಮಾದರಿಯ ಕಾರ್ಯಾಚರಣೆ ನಡೆಸುವಂತೆ ನಗರದ ವ್ಯಕ್ತಿಯೊಬ್ಬರು ಫೋನ್‌ ಕರೆ ಮಾಡಿ ಸಲಹೆ ಮಾಡಿದ್ದರ‌ು. ಇದಕ್ಕೆ ಸ್ಪಂದಿಸಿದ ಡಿಸಿಪಿ ಹನುಮಂತರಾಯ ಅವರು, ಈಗಾಗಲೇ ಅನಧಿಕೃತ ಪಾರ್ಕ್‌ ಮಾಡವ ವಾಹನಗಳನ್ನು ಎತ್ತಂಗಡಿಗೆ ನಾಲ್ಕು ಟೋವಿಂಗ್‌ ವಾಹನಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ವಾಹನಗಳು ನಗರಕ್ಕೆ ಆಗಮಿಸಲಿದ್ದು, ಬಳಿಕ ಟೈಗರ್‌ ಕಾರ್ಯಾಚರಣೆ ಆರಂಭಗೊಳ್ಳಲಿದೆ ಎಂದರು.

ಅನಧಿಕೃತವಾಗಿ ನಿಲ್ಲಿಸಿರುವ ವಾಹನಗಳಿಗೆ ಇದುವರೆಗೆ ಸಂಚಾರಿ ಪೊಲೀಸರು ಲಾಕ್‌ ಹಾಕುತ್ತಿದ್ದರು. ಆದರೆ ಮುಂದೆ ಟೈಗರ್‌ ಕಾರ್ಯಾಚರಣೆಯಲ್ಲಿ ಟೋವಿಂಗ್‌ ವಾಹನದಲ್ಲೇ ಅನಧಿಕೃತ ಪಾರ್ಕಿಂಗ್‌ನಲ್ಲಿರುವ ವಾಹನಗಳನ್ನು ಎತ್ತಿ ಕೊಂಡೊಯ್ಯಲಿದೆ. ಬಳಿಕ ವಾಹನವನ್ನು ಪಡೆದುಕೊಳ್ಳಬೇಕಾದರೆ ಆಯಾ ಸಂಚಾರಿ ಪೊಲೀಸ್‌ ಠಾಣೆಗೆ ತೆರಳಿ ದಂಡ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದರು.

ರಾತ್ರಿ ಧ್ವನಿವರ್ಧಕದ ಶಬ್ದ ಮಾಲಿನ್ಯ: ದೂರು
ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆಯ ನಿಯಮದ ಪ್ರಕಾರ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಧ್ವನಿವರ್ಧಕಗಳನ್ನು ಸಾರ್ವಜನಿಕರಿಗೆ ತೊಂದರೆಯಾಗುವಂತೆ ಬಳಸುವಂತಿಲ್ಲ. ಆದರೆ ನಗರ ಪ್ರದೇಶದ ಕೆಲವು ಕಡೆಗಳಲ್ಲಿ ನಿಯಮ ಮೀರಿ ದೊಡ್ಡ ಧ್ವನಿಯಲ್ಲಿ ಮೈಕ್‌ ಬಳಸುತ್ತಿದ್ದಾರೆ. ಇದು ಪರಿಸರ ನಿಯಮದ ಉಲ್ಲಂಘನೆಯಾಗಿದೆ. ಪೊಲೀಸರಿಗೆ ದೂರು ನೀಡಿದರೆ, ಅಂತಹ ಧ್ವನಿ ಮಾಲಿನ್ಯವನ್ನು ಒಮ್ಮೆಗೆ ಸ್ಥಗಿತಗೊಳಿಸುತ್ತಾರೆಯೇ ವಿನಃ ಶಾಶ್ವತ ಪರಿಹಾರ ಸೂಚಿಸುತ್ತಿಲ್ಲ. ರಾತ್ರಿ ಧ್ವನಿವರ್ಧಕ ಉಪಯೋಗಕ್ಕೆ ನಿಷೇಧ ಇರುವಾಗ ಕ್ರಮ ಕೈಗೊಳ್ಳಲು ಪರಿಸರ ಇಲಾಖೆಯ ಅನುಮತಿಯ ಆವಶ್ಯಕತೆ ಏನಿದೆ ಎಂದು ಮೂಡಬಿದಿರೆಯ ಹಿರಿಯ ನಾಗರಿಕರೊಬ್ಬರು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಡಿಸಿಪಿ ಹನುಮಂತರಾಯ, ಧ್ವನಿವರ್ಧಕ ಬಳಕೆಗೆ ಅನುಮತಿ ನೀಡುವ ಬಗೆಗಿನ 2014-15ರ ಕಾನೂನನ್ನು ಪರಿಷ್ಕರಿಸಿ ಹೊಸ ಕಾನೂನು ಜಾರಿಗೆ ಬಂದಿದೆ. ಈ ನಿಯಮದಡಿ ಕಠಿನ ಕ್ರಮಕ್ಕೆ ಅವಕಾಶ ಕಲ್ಪಿಸಲಾಗಿದೆ. ನಿಯಮವನ್ನು ಉಲ್ಲಂಘಿಸಿದರೆ ಈ ಹಿಂದೆ ಪೊಲೀಸರು ಮೈಕ್‌ ಸೆಟ್‌ ಮುಟ್ಟುಗೋಲು ಹಾಕುತ್ತಿದ್ದರು. ಹೊಸ ನಿಯಮದಂತೆ ಪೊಲೀಸರಿಗೆ ಕೇಸು ದಾಖಲಿಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಹನುಮಂತರಾಯ ತಿಳಿಸಿದರು. ಆದ್ದರಿಂದ ನಿಯಮ ಉಲ್ಲಂಘಿಸಿ ಧ್ವನಿ ವರ್ಧಕ ಬಳಕೆಯ ಪ್ರಕರಣಗಳು ಕಂಡು ಬಂದರೆ ಸಂಬಂಧ ಪಟ್ಟ ಪೊಲೀಸ್‌ ಠಾಣೆಯ ಅಧಿಕಾರಿಗಳ ಗಮನಕ್ಕೆ ತರಬಹುದು ಎಂದರು.

Advertisement

ಡಿವೈಡರ್‌ ನ ಗಿಡಗಳು ಅಡ್ಡಿ
ಕೊಟ್ಟಾರ ಚೌಕಿಯಲ್ಲಿ ಮಳೆ ಬಂದರೆ ರಸ್ತೆಯಲ್ಲೇ ನೀರು ನಿಲ್ಲುತ್ತದೆ. ತೆಗೆದಿರುವ ಹೂಳನ್ನು ಮತ್ತೆ ಚರಂಡಿಯ ಬದಿಯಲ್ಲೇ ಹಾಕಲಾಗಿದೆ. ಇದರಿಂದ ಭಾರಿ ಮಳೆ ಬಂದರೆ ಮತ್ತೆ ಹೂಳು ಚರಂಡಿ ಸೇರುತ್ತದೆ ಎಂದು ಸ್ಥಳೀಯ ನಿವಾಸಿ ರಾಮರಾವ್‌ ಆರೋಪಿಸಿದರು. ರಸ್ತೆ ಮಧ್ಯೆಯ ವಿಭಾಜಕಗಳಲ್ಲಿ ಗಿಡಗಳನ್ನು ಬೆಳೆಸುವುದು ಉತ್ತಮವೇ. ಆದರೆ ಗಿಡಗಳು ಎತ್ತರ ಇರುವಲ್ಲಿ ಅಲ್ಲಿಂದ ಹಠಾತ್ತನೆ ಪಾದಚಾರಿಗಳು ರಸ್ತೆ ದಾಟುತ್ತಾರೆ. ಇದು ಅಪಘಾತಕ್ಕೆ ಕಾರಣವಾಗುತ್ತದೆ. ಆದ್ದರಿಂದ ರಸ್ತೆ ವಿಭಾಜಕಗಳಲ್ಲಿ ಗಿಡಗಳನ್ನು ಕಡಿಯಬೇಕು. ಇಲ್ಲವೇ ಕೇವಲ ಹುಲ್ಲು ಬೆಳೆಸಲು ಸೀಮಿತಗೊಳಿಸಬೇಕು ಎಂದರು. ಈ ವಿಚಾರವನ್ನು ಪಾಲಿಕೆ ಹಾಗೂ ಹೆದ್ದಾರಿ ಇಲಾಖೆಯ ಗಮನಕ್ಕೆ ತರುವುದಾಗಿ ಡಿಸಿಪಿ ತಿಳಿಸಿದರು. ಇದು 80ನೇ ಫೋನ್‌ ಇನ್‌ ಕಾರ್ಯಕ್ರಮವಾಗಿದ್ದು, ಇಂದು 18 ಕರೆಗಳು ಬಂದವು. ಸುಚೇತನ್‌, ಸಂಚಾರ ವಿಭಾಗದ ಎಸಿಪಿ ಮಂಜುನಾಥ್‌ ಶೆಟ್ಟಿ, ಇನ್ಸ್‌ಪೆಕ್ಟರ್‌ಗಳಾದ ದಿವಾಕರ್‌, ಸುನೀಲ್‌ ಕುಮಾರ್‌, ತಿಮ್ಮರಾಜು, ಪಿ. ಯೋಗೇಶ್ವರನ್‌, ಹೆಡ್‌ ಕಾನ್ಸ್‌ಟೆಬಲ್‌ ಪುರುಷೋತ್ತಮ ಉಪಸ್ಥಿತರಿದ್ದರು.

ಪ್ರಮುಖ ದೂರುಗಳು
– ಹೊನ್ನೆಕಟ್ಟೆಯಲ್ಲಿ ಭಾರೀ ಗಾತ್ರದ ವಾಹನಗಳು ರಸ್ತೆ ಬದಿಯಲ್ಲಿ ನಿಲ್ಲುವುದರಿಂದ ರಸ್ತೆ ಬದಿ ಹೊಂಡಗಳಾಗಿ ಶಾಲಾ ಮಕ್ಕಳ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು. 

– ಕದ್ರಿ ಶಿವಭಾಗ್‌ ನ ರೆಸ್ಟೋರೆಂಟ್‌ ಗೆ ಆಗಮಿಸುವ ವಾಹನಗಳನ್ನು ರಸ್ತೆಯಲ್ಲೇ ಪಾರ್ಕ್‌ ಮಾಡುವುದರಿಂದ ಸಂಚಾರಕ್ಕೆ ತೊಂದರೆ ಯಾಗುತ್ತಿದೆ. ಅವರಿಗೆ ಪಾರ್ಕಿಂಗ್‌ ಗೆ ಪರ್ಯಾಯ ವ್ಯವಸ್ಥೆ ಮಾಡಿ.

– ಶಕ್ತಿನಗರದಲ್ಲಿ ಇಕ್ಕಟ್ಟಾದ ರಸ್ತೆಯ ಬದಿಯಲ್ಲೇ ಕಾರುಗಳನ್ನು ಪಾರ್ಕ್‌ ಮಾಡಲಾಗುತ್ತಿದ್ದು, ಇದರಿಂದ ಶಾಲಾ ವಾಹನಗಳ ಸಂಚಾರಕ್ಕೆ ತೊಂದರೆ.

– ಹಂಪನಕಟ್ಟೆಯ ಬಲ್ಮಠ ರಸ್ತೆಯ ಅಂಗಡಿಯೊಂದರಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ವಿಪರೀತವಾಗಿ ಧೂಮಪಾನ ಮಾಡುತ್ತಿದ್ದು, ಅವರ ವಿರುದ್ಧ ಕ್ರಮ ಜರಗಿಸಿ.

– ಬಜಪೆಯ ಪೆರಾರ್‌ – ಕೈಕಂಬ ಹಾಗೂ ಕಂಕನಾಡಿಗೆ ಪರವಾನಿಗೆ ಹೊಂದಿರುವ ಕೆಲವೊಂದು ಬಸ್‌ಗಳು ನಿಗದಿತ ಮಾರ್ಗದಲ್ಲಿ ಸಂಚರಿಸುತ್ತಿಲ್ಲ.

– ಎಕ್ಕೂರಿನಲ್ಲಿ ಅಪಘಾತಗಳು ಹೆಚ್ಚುತ್ತಿದ್ದು, ಅದಕ್ಕೆ ಕಡಿವಾಣ ಹಾಕಲು ಬ್ಯಾರಿಕೇಡ್‌ ಅಳವಡಿಸಿ.

ಬಸ್‌ ಫುಟ್‌ ಬೋರ್ಡ್‌ ಎತ್ತರ ಸಮಸ್ಯೆ
ನಗರದಲ್ಲಿ ಸಂಚರಿಸುವ ಕೆಲವು ಖಾಸಗಿ ಬಸ್‌ ಗಳಲ್ಲಿ ಸುಲಭವಾಗಿ ಹತ್ತಿ ಇಳಿಯಲು ಸಾಧ್ಯವಾಗುತ್ತಿಲ್ಲ. ಬಸ್‌ ನ ಫುಟ್‌ ಬೋರ್ಡ್‌ ಎತ್ತರದಲ್ಲಿರುವ ಕಾರಣ ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ, ಶಾಲಾ ಮಕ್ಕಳಿಗೆ ಕಷ್ಟವಾಗುತ್ತಿದೆ. ಕೆಲವೊಮ್ಮೆ ಬಸ್‌ ಇಳಿಯುವ ಅಥವಾ ಹತ್ತುವ ಮೊದಲೇ ನಿರ್ವಾಹಕರು ಸೀಟಿ ಊದುತ್ತಾರೆ. ಇದರಿಂದಾಗಿ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚು. ಈ ಬಗ್ಗೆ ಸೂಚನೆ ನೀಡಬೇಕು ಎಂದು ಸುಭಾಸ್‌ ನಗರದ ಮಹಿಳೆಯೊಬ್ಬರು ಕರೆ ಮಾಡಿ ತಿಳಿಸಿದರು. ಈ ಬಗ್ಗೆ ಕ್ರಮಕೈಗೊಳ್ಳುವುದಾಗಿ ಡಿಸಿಪಿ ಭರವಸೆ ನೀಡಿದರು.

ಹಿರಿಯ ನಾಗರಿಕರ ಸೀಟು ಮೀಸಲಾತಿ
ಈಗ ಬಸ್‌ ಗಳಲ್ಲಿ ಹಿರಿಯ ನಾಗರಿಕರಿಗೆ ಒಂದು ಸೀಟು ಮಾತ್ರ ಮೀಸಲಿದ್ದು, ಅದನ್ನು ಎರಡುಕ್ಕೆ ಏರಿಸಬೇಕು. ನಗರದ ಲೇಡಿಗೋಷನ್‌ ಮತ್ತು ಲೈಟ್‌ಹೌಸ್‌ ಹಿಲ್‌ ಮಧ್ಯೆ ಬಸ್‌ ತಂಗುದಾಣ ನಿರ್ಮಿಸಬೇಕೆಂದು ಲೋಕಾಯುಕ್ತರು ಆದೇಶ ನೀಡಿ ಕೆಲವು ಸಮಯ ಕಳೆದರೂ ಕಾರ್ಯಗತಗೊಂಡಿಲ್ಲ. ತೊಕ್ಕೊಟ್ಟು – ಪಂಪ್‌ ವೆಲ್‌ ಮಧ್ಯೆ ಹೆದ್ದಾರಿ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿರುವುದರಿಂದ ನಾಗರಿಕರಿಗೆ ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಪರಿಸರಪ್ರೇಮಿ ಹಸನಬ್ಬ ತಿಳಿಸಿದರು. ಈ ಬಗ್ಗೆ ಆರ್‌ಟಿಒ, ಮಹಾನಗರಪಾಲಿಕೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಡಿಸಿಪಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next