Advertisement

Mangaluru ಅಧಿಕಾರಿ ಸ‌ಭಾತ್ಯಾಗ, ರಾಜೀನಾಮೆ!

11:59 PM Nov 24, 2023 | Team Udayavani |

ಮಂಗಳೂರು: ನಗರಾಭಿವೃದ್ಧಿ ಸಚಿವ ಬಿ.ಎಸ್‌. ಸುರೇಶ್‌ ಮಂಗಳೂರು ಪಾಲಿಕೆಯಲ್ಲಿ ಶುಕ್ರವಾರ ನಡೆಸಿದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಹಿರಿಯ ಅಧಿಕಾರಿಯೋರ್ವರು “ರಾಜೀನಾಮೆ ನೀಡುತ್ತೇನೆ’ ಎಂದು ತಿಳಿಸಿ ಸಭಾತ್ಯಾಗ ಮಾಡಿದ ವಿದ್ಯಾಮಾನ ಸಂಭವಿಸಿತು.

Advertisement

ಮಂಗಳೂರು ನಗರಕ್ಕೆ 24×7 ನೀರು ಸರಬರಾಜು ಯೋಜನೆ (ಜಲಸಿರಿ) ಅನುಷ್ಠಾನದ ಬಗ್ಗೆ ಸಭೆಯಲ್ಲಿ ಸಚಿವರ ನೇತೃತ್ವದಲ್ಲಿ ಪ್ರಗತಿ ಪರಿಶೀಲನೆ ನಡೆಯುತ್ತಿತ್ತು. ಈ ಯೋಜನೆಯನ್ನು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ (ಕೆಯುಐಡಿಎಫ್ಸಿ)ನಿರ್ವಹಣೆ ನಡೆಸುತ್ತಿದ್ದು, ಅದರ ಮುಖ್ಯ ಎಂಜಿನಿಯರ್‌ ಆಗಿದ್ದ ಹಾಗೂ ಪ್ರಸ್ತುತ ನಿವೃತ್ತರಾಗಿ ಮತ್ತೆ ಗುತ್ತಿಗೆಯಡಿ ಅದೇ ಹುದ್ದೆಯಲ್ಲಿರುವ ಜಯರಾಮ್‌ ಮಾಹಿತಿ ನೀಡುತ್ತಿದ್ದರು. “ಮಂಗಳೂರಿನಲ್ಲಿ ಜಲಸಿರಿ ಶೇ. 63ರಷ್ಟು ಪೂರ್ಣಗೊಂಡಿದ್ದು, 4 ತಿಂಗಳೊಳಗೆ ಪೂರ್ಣವಾಗಲಿದೆ. ಯೋಜನೆ ಪೂರ್ಣಗೊಳ್ಳುವ ಮುನ್ನಜಲಮೂಲವನ್ನು ಸದೃಢಗೊಳಿಸಬೇಕಾಗಿದ್ದು ಇದಕ್ಕೆ ಸರಕಾರದ ಅನುಮತಿ ಬೇಕು’ ಎಂದು ವಿವರ ನೀಡಿದರು.

ಆಗ ಸಚಿವರು “ಶೇ. 60ರಷ್ಟು ಕಾಮಗಾರಿ ಪೂರ್ಣಗೊಳಿಸಲು ನಾಲ್ಕು ವರ್ಷ ಆಗಿದೆ. ಇನ್ನುಳಿದ ಕಾಮಗಾರಿ ನಾಲ್ಕೈದು ತಿಂಗಳಲ್ಲಿ ಪೂರ್ಣಗೊಳಿಸಲು ಸಾಧ್ಯವೇ? ಕಾಮಗಾರಿಯ ಕೊನೆಯ ಹಂತದಲ್ಲಿ ಈಗ ಜಲಮೂಲ ನೆನಪಾಯಿತಾ?’ ಎಂದು ಪ್ರಶ್ನಿಸಿ, “ಯಾರಿಗಾದರೂ ಅನುಕೂಲ ಮಾಡುವ ಉದ್ದೇಶವೇ?’ಎಂದು ಪ್ರಶ್ನಿಸಿದರು. ಇದರಿಂದ ಬೇಸರಗೊಂಡ ಅಧಿಕಾರಿ “ಹಾಗೆಲ್ಲ ಹೇಳಿದರೆ ನಾನು ರಾಜೀನಾಮೆ ನೀಡುತ್ತೇನೆ’ ಎಂದರು. ಇದರಿಂದ ಕೋಪಗೊಂಡ ಸಚಿವರು “ನೀವು ಸಭೆಯಿಂದ ಹೋಗಬಹುದು. ಗೆಟ್‌ ಔಟ್‌’ ಎಂದರು. ತತ್‌ಕ್ಷಣವೇ ಅಧಿಕಾರಿ ತನ್ನ ಫೈಲ್‌ಗ‌ಳ ಜತೆಗೆ ಹೊರನಡೆದರು.

ಅಧಿಕಾರಿ ಹೊರನಡೆದ ಬಳಿಕ ಸಂಬಂಧಪಟ್ಟ ಜಾಗಕ್ಕೆ ಹೊಸಬರನ್ನು ನೇಮಿಸಲು ಹಿರಿಯ ಅಧಿಕಾರಿಗಳಿಗೆ ತಿಳಿಸುವಂತೆ ಸಚಿವರ ಸಹಾಯಕರಿಗೆ ಸೂಚಿಸಿದರು. ಹಲವು ಅಧಿಕಾರಿಗಳನ್ನು ನಾವು ನೋಡಿದ್ದೇವೆ. ಜನರಿಗಾಗಿ ಮಾಡುವ ಕೆಲಸದಲ್ಲಿ ಲೋಪವಾಗಲು ಅವಕಾಶ ನೀಡುವುದಿಲ್ಲ’ ಎಂದು ಸಚಿವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next