Advertisement

Mangaluru: ಹೆದ್ದಾರಿಗಳ ಸುರಕ್ಷತೆ ಬಗ್ಗೆ ಯಾವುದೇ ರಾಜಿ ಮಾಡಿಕೊಳ್ಳಲ್ಲ: ಜಿಲ್ಲಾಧಿಕಾರಿ 

08:14 PM Aug 10, 2024 | Team Udayavani |

ಮಂಗಳೂರು:  ಹೆದ್ದಾರಿಗಳಲ್ಲಿರುವ ಸೇತುವೆಗಳ ಸುರಕ್ಷತೆ ಕುರಿತು ವರದಿ ಸಲ್ಲಿಸಲು ನಿರ್ಲಕ್ಷ್ಯ ವಹಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್  ಶೋಕಾಸ್ ನೋಟಿಸ್‌  ಜಾರಿಗೊಳಿಸಿದ್ದಾರೆ.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ  ನಡೆದ ಜಿಲ್ಲೆಯ ರಸ್ತೆ ಮತ್ತು ಸೇತುವೆ ಸುರಕ್ಷತಾ ಕ್ರಮಗಳ ಕೈಗೊಳ್ಳುವ ಕುರಿತು ನಡೆದ ಸಭೆಯಲ್ಲಿ ಅವರು ಶೋಕಾಸ್ ನೋಟಿಸ್ ನೀಡಿದರು. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿರುವ ಸೇತುವೆಗಳ ಸುರಕ್ಷತೆ ಬಗ್ಗೆ ವರದಿ ನೀಡಲು ಈಗಾಗಲೇ ಸಂಬಂಧಿಸಿದ ಇಲಾಖೆಗಳಿಗೆ ಸೂಚಿಸಲಾಗಿತ್ತು. ಆದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಲೋಕೋಪಯೋಗಿ ಇಲಾಖೆಯು ಸಮರ್ಪಕ ವರದಿ ಸಲ್ಲಿಸಿಲ್ಲ. ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಹೆದ್ದಾರಿಗಳ ಸುರಕ್ಷತೆಯ ಬಗ್ಗೆ ಯಾವುದೇ ರಾಜಿ ಮಾಡಿಕೊಳ್ಳಲಾಗದು ಎಂದು ಅವರು ಹೇಳಿದರು. ಈ ನಿಟ್ಟಿನಲ್ಲಿ ಹೆದ್ದಾರಿ ಪ್ರಾಧಿಕಾರ ಯೋಜನಾ ನಿರ್ದೇಶಕರು ಮತ್ತು ಲೋಕೋಪಯೋಗಿ ಇಲಾಖೆ ಕಾರ್ಯಕಾರಿ ಅಭಿಯಂತರರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಕೂಳೂರು ಹಳೆ ಸೇತುವೆ ಕ್ಷಮತೆ ಬಗ್ಗೆ ಹೆದ್ದಾರಿ ಪ್ರಾಧಿಕಾರವು ದೀರ್ಘಕಾಲದಿಂದ ಪರಿಣಾಮಕಾರಿಯಾದ ಕ್ರಮ ಕೈಗೊಂಡಿಲ್ಲ‌. ಅಲ್ಲದೇ, ಹೊಸ ಸೇತುವೆ ಕಾಮಗಾರಿ ಸ್ಥಗಿತಗೊಂಡಿದ್ದು, ಯಾವಾಗ ಪೂರ್ಣಗೊಳ್ಳುವ ಬಗ್ಗೆ ಪ್ರಾಧಿಕಾರಕ್ಕೆ ಸ್ಪಷ್ಟತೆ ಇಲ್ಲ ಎಂದು ಜಿಲ್ಲಾಧಿಕಾರಿಗಳು ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು .

ಜಿಲ್ಲೆಯ ಹೆದ್ದಾರಿಗಳಲ್ಲಿರುವ ಸೇತುವೆಗಳ ಕಾರ್ಯಕ್ಷಮತೆಗಳ ಬಗ್ಗೆ ಸಂಬಂಧಿಸಿದ ಇಲಾಖೆಗಳು, ಪೊಲೀಸ್ ಹಾಗೂ ಆಯಾ ನಗರ, ಗ್ರಾಮೀಣ ಸ್ಥಳೀಯ ಸಂಸ್ಥೆಗಳು ತಕ್ಷಣವೇ ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಆಗಸ್ಟ್ 8 ರಂದು ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಸೂಚಿಸಲಾಗಿತ್ತು. ಮುಂದಿನ 24 ಗಂಟೆಯೊಳಗೆ ಈ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆನಂದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಡಿಸಿಪಿ ( ಸಂಚಾರ) ದಿನೇಶ್ ಕುಮಾರ್, ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next