ಮಂಗಳೂರು: ನಗರದಲ್ಲಿ ಬೀಚ್, ಪಾರ್ಕ್ ಸಹಿತ ಹೊರಾಂಗಣಗಳಲ್ಲಿ ರಾತ್ರಿ 10 ಗಂಟೆಯವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ವರ್ಷಾಚರಣೆಗೆ ಹೊಟೇಲ್, ಚರ್ಚ್, ರೆಸಾರ್ಟ್ ಮೊದಲಾದ ಒಳಾಂಗಣಗಳಲ್ಲಿ ರಾತ್ರಿ 12:30 ರವರೆಗೆ ಅವಕಾಶವಿದೆ ಎಂದರು.
ವ್ಯಾಪಕ ಬಂದೋಬಸ್ತ್ ನಡೆಸಲಾಗುವುದು. ನಿಯಮ ಉಲ್ಲಂಘಿಸಿದರೆ ಕ್ರಮ ತೆಗೆದು ಕೊಳ್ಳಲಾಗುವುದು. 850 ಸಿಬ್ಬಂದಿ, ಅಧಿಕಾರಿಗಳನ್ನು ನಿಯೋಜಿಸಲಾಗುವುದು. ಸಿಎಆರ್ ನ ಎಂಟು, ಕೆಎಸ್ಆರ್ ಪಿಯ ಮೂರು ತುಕಡಿ ನಿಯೋಜಿಸಲಾಗುವುದು. 106 ಪಾಯಿಂಟ್ ಗಳಲ್ಲಿ ವಿಶೇಷ ನಿಗಾ ಇಡಲಾಗುವುದು. 66 ಸೆಕ್ಟರ್ ಮೊಬೈಲ್ ರಚಿಸಲಾಗುವುದು. 17 ಹೊಯ್ಸಳ ವಾಹನಗಳು ಗಸ್ತು ತಿರುಗಲಿದೆ ಎಂದರು.
ನೈತಿಕ ಪೊಲೀಸ್ ಗಿರಿ, ಡ್ರಗ್ಸ್ ತಡೆಗೆ ಕ್ರಮ ಕೈಗೊಳ್ಳಲಾಗುವುದು. ಬೀಚ್ ಗಳಲ್ಲಿ ಪೊಲೀಸರ ಸಂಪರ್ಕ ಸಂಖ್ಯೆ ಪ್ರದರ್ಶಿಸಲಾಗುವುದು. ರವಿವಾರ ಸಂಜೆಯಿಂದಲೇ ವಿಶೇಷ ನಿಗಾ ಇಡಲಾಗುವುದು. ಮದ್ಯ ಸೇವಿಸಿ ವಾಹನ ಚಾಲನೆ, ಅಸಭ್ಯ ವರ್ತನೆ ಮೇಲೂ ನಿಗಾ ಇಡಲಾಗುವುದು. ಈಗಾಗಲೇ ಒಳಾಂಗಣದಲ್ಲಿ ಆಚರಣೆಗೆ 36 ಮಂದಿ ಪರವಾನಿಗೆ ಪಡೆದುಕೊಂಡಿದ್ದಾರೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.