Advertisement

Mangaluru: ಪಾಲಿಕೆ ಚುನಾವಣೆ ಅನುಮಾನ?

03:37 PM Jan 07, 2025 | Team Udayavani |

ಲಾಲ್‌ಬಾಗ್‌: ಮಂಗಳೂರು ಮಹಾ ನಗರ ಪಾಲಿಕೆಯ ಹಾಲಿ ಆಡಳಿತ ಅವಧಿ ಮುಕ್ತಾಯಕ್ಕೆ ಇನ್ನು 52 ದಿನ ಮಾತ್ರ ಬಾಕಿ ಉಳಿದಿದೆ. ಆದರೆ ಪಾಲಿಕೆ ಮುಂದಿನ ಚುನಾವಣೆಗೆ ನಡೆಯ ಬೇಕಾಗಿದ್ದ ಸಿದ್ಧತೆ ಪ್ರಕ್ರಿಯೆ ಆರಂಭವಾಗಿಲ್ಲ. ಹೀಗಾಗಿ ನಿಗದಿತ ಸಮಯಕ್ಕೆ ಚುನಾವಣೆ ನಡೆಯುವುದು ಕಷ್ಟ. ಹೀಗಾಗಿ ಫೆ. 28ರಿಂದ ಮಂಗಳೂರು ಪಾಲಿಕೆ ಆಡಳಿತಾಧಿಕಾರಿ ನೇಮಕ ಬಹುತೇಕ ನಿಚ್ಚಳ.

Advertisement

ಜಿಲ್ಲಾಧಿಕಾರಿ ಅವರನ್ನೇ ಆಡಳಿತಾಧಿಕಾರಿ ಯಾಗಿ ಸರಕಾರ ನೇಮಕ ಮಾಡುವುದು ಕ್ರಮ. ಮುಂದಿನ ಚುನಾವಣೆ ನಡೆಯುವವರೆಗೆ ಡಿಸಿ ಅವರೇ ಪಾಲಿಕೆ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ಜನರು ತಮ್ಮ ಸಮಸ್ಯೆ-ಸವಾಲುಗಳ ಬಗ್ಗೆ ಜಿಲ್ಲಾಧಿಕಾರಿ/ಆಯುಕ್ತರು ಸಹಿತ ಅಧಿಕಾರಿ ವಲಯಕ್ಕೆ ದೂರು ಸಲ್ಲಿಸಿ ಪರಿಹಾರ ಕಂಡುಕೊಳ್ಳಬೇಕು.

2019ರ ನ. 12ರಂದು ಮಂಗಳೂರು ಪಾಲಿಕೆ ಚುನಾವಣೆ ನಡೆದಿತ್ತು. ಆದರೆ ಮೇಯರ್‌ ಮೀಸಲಾತಿ ವಿಚಾರ ತಡವಾಗಿ ಫೆ. 27ಕ್ಕೆ ಹೊಸ ಮೇಯರ್‌ ಅಧಿಕಾರ ಸ್ವೀಕರಿಸಿದರು. ಆ ದಿನದಿಂದ 5 ವರ್ಷ ಪಾಲಿಕೆ ಆಡಳಿತ ಅವಧಿ. ಚುನಾವಣೆ ನಡೆಯುವ ಹಲವು ತಿಂಗಳ ಮುನ್ನವೇ ಮತದಾರರ ಪಟ್ಟಿ ಆಗಬೇಕಿದೆ. ಬೂತ್‌ ಬದಲಾವಣೆ ಇನ್ನಿತರ ಪ್ರಕ್ರಿಯೆ ನಡೆಸಲಾಗುತ್ತದೆ. ಆದರೆ ಈ ಯಾವುದೇ ಪ್ರಕ್ರಿಯೆ ಇಲ್ಲಿಯವರೆಗೆ ನಡೆದಿಲ್ಲ.

ಮೈಸೂರು, ತುಮಕೂರು, ಶಿವಮೊಗ್ಗ ಪಾಲಿಕೆ ಆಡಳಿತ ಅವಧಿ ಪೂರ್ಣವಾಗಿ ವರ್ಷ 1 ಕಳೆದಿದೆ. ಬಿಬಿಎಂಪಿ ಆಡಳಿತ ಅವಧಿ ಪೂರ್ಣವಾಗಿ 3 ವರ್ಷವೇ ಸಮೀಪಿಸಿದೆ. ಇಷ್ಟೂ ಸ್ಥಳಗಳಲ್ಲಿ ಇನ್ನೂ ಚುನಾವಣೆ ನಡೆಸದ ಕಾರಣದಿಂದ ಫೆಬ್ರವರಿಯಲ್ಲಿ ಪೂರ್ಣಗೊಳ್ಳಲಿರುವ ಮಂಗಳೂರು ಹಾಗೂ ದಾವಣಗೆರೆಯಲ್ಲಿ ಚುನಾವಣೆ ಕಷ್ಟ ಎಂಬುದು ಪಾಲಿಕೆ ಹಿರಿಯ ಸದಸ್ಯರ ಅಭಿಪ್ರಾಯ.

ಈ ಮಧ್ಯೆ, ಇಲ್ಲಿಯವರೆಗೆ ಮಂಗಳೂರು ಪಾಲಿಕೆ ಆಡಳಿತಾವಧಿ ಮುಕ್ತಾಯವಾದ ಕೂಡಲೇ ಅಥವಾ 1 ವರ್ಷದ ಅಂತರದೊಳಗೆ ಚುನಾವಣೆ ನಡೆದಿದೆ. ಆದರೆ 1995ರಲ್ಲಿ ಮಾತ್ರ ಇದು ಸಾಧ್ಯವಾಗಿರಲಿಲ್ಲ. ಬರೋಬ್ಬರಿ 2 ವರ್ಷ ಚುನಾವಣೆ ನಡೆದಿರಲಿಲ್ಲ. ಆಡಳಿತಾಧಿಕಾರಿ ಅಧಿಕಾರದಲ್ಲಿದ್ದರು.

Advertisement

ಮೀಸಲಾತಿ ಪ್ರಶ್ನಿಸಿ ಚುನಾವಣೆ ತಡವಾಗಿತ್ತು!
2019ರಲ್ಲಿ ಮಾ.7ಕ್ಕೆ ಮತ್ತೆ ಚುನಾವಣೆ ನಡೆಯಬೇಕಿತ್ತು. ಆದರೆ, ವಾರ್ಡ್‌ ಮೀಸಲಾತಿ ಪ್ರಶ್ನಿಸಿ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ ಪರಿಣಾಮ ಚುನಾವಣೆ ನಡೆದಿರಲಿಲ್ಲ. ಮೀಸಲಾತಿ ವಿವಾದವನ್ನು ಬಗೆಹರಿಸಿ ಚುನಾವಣೆಯನ್ನು ಅ. 31ರೊಳಗೆ ಪೂರ್ಣಗೊಳಿಸಿ, ನ. 15ರೊಳಗೆ ಹೊಸ ಆಡಳಿತ ವ್ಯವಸ್ಥೆ ಸ್ಥಾಪನೆಯಾಗಬೇಕು ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್‌ ಆ. 27ರಂದು ನಿರ್ದೇಶನ ನೀಡಿತ್ತು. ಕೊನೆಗೆ, ನ. 12ರಂದು ಮತದಾನ ನಡೆದಿತ್ತು.

ಈ ಬಾರಿಯೂ ಮೀಸಲು ಬದಲಾವಣೆ ಕಡ್ಡಾಯ
ಪಾಲಿಕೆ ಚುನಾವಣೆ ನಡೆಯುವಾಗ ಪ್ರತೀ 10 ವರ್ಷಕ್ಕೊಮ್ಮೆ ವಾರ್ಡ್‌ ಪುನರ್‌ ವಿಂಗಡನೆ ಮಾಡಬೇಕಾಗುತ್ತದೆ. ಆದರೆ, 2019ರಲ್ಲಿ ವಾರ್ಡ್‌ ವಿಂಗಡನೆ ಆಗಿರುವುದರಿಂದ ಈ ಬಾರಿ ವಾರ್ಡ್‌ ವಿಂಗಡನೆ, ಸೇರ್ಪಡೆ ಇಲ್ಲ. ಆದರೆ, ಪ್ರತೀ 5 ವರ್ಷಕ್ಕೊಮ್ಮೆ ಪಾಲಿಕೆ ವಾರ್ಡ್‌ ಮೀಸಲಾತಿ ಬದಲಾಗಬೇಕು. ಅದು ಈ ಬಾರಿ ನಡೆಯಲಿದೆ. ಕೆಲವು ಹಾಲಿ ಕಾರ್ಪೋರೆಟರ್‌ಗಳ ಮೀಸಲಾತಿ ಬದಲಾಗುವ ಸಾಧ್ಯತೆ ಇದೆ.

ಪಕ್ಷಗಳ ಬಲಾಬಲ ಹೀಗಿದೆ..
2019ರ ನ. 12ಕ್ಕೆ ಪಾಲಿಕೆ ಚುನಾವಣೆ ನಡೆದಿದ್ದು ಬಿಜೆಪಿ 44, ಕಾಂಗ್ರೆಸ್‌ 14 ಹಾಗೂ ಎಸ್‌ಡಿಪಿಐ 2 ಸ್ಥಾನಗಳನ್ನು ಪಡೆದಿತ್ತು. ಇದಕ್ಕೂ ಮುನ್ನ 2013ರಲ್ಲಿ ಕಾಂಗ್ರೆಸ್‌ 35, ಬಿಜೆಪಿ 20, ಜೆಡಿಎಸ್‌ 2, ಸಿಪಿಎಂ 1, ಎಸ್‌ಡಿಪಿಐ 1 ಹಾಗೂ ಓರ್ವ ಪಕ್ಷೇತರ ಸದಸ್ಯರನ್ನು ಹೊಂದಿತ್ತು. ಪಾಲಿಕೆಯಲ್ಲಿ ಕಳೆದ ಬಾರಿ ಶೇ.50 ಸ್ಥಾನ ಮಹಿಳೆಯರಿಗೆ ಮೀಸಲಾಗಿತ್ತು. 60 ಸ್ಥಾನಗಳನ್ನು ಹೊಂದಿರುವ ಪಾಲಿಕೆಯಲ್ಲಿ 30 ಸ್ಥಾನಗಳು ಮಹಿಳೆಯರಿಗೆ ಮೀಸಲು.

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next