Advertisement

Mangaluru: ಸಾಲ ಕೇಳಿದ ಮಹಿಳೆಯಿಂದಲೇ ಹಣ ವಸೂಲಿ; ನಕಲಿ ಹಣಕಾಸು ಸಂಸ್ಥೆಯ ಹೆಸರಿನಲ್ಲಿ ವಂಚನೆ

11:24 PM Sep 01, 2024 | Team Udayavani |

ಮಂಗಳೂರು: ಪ್ರಸಿದ್ಧ ಹಣಕಾಸು ವ್ಯವಹಾರ ಸಂಸ್ಥೆಗಳ ಹೆಸರಿನಲ್ಲಿ ಕರೆ ಮಾಡಿ ಸಾಲ ನೀಡುವುದಾಗಿ ಹೇಳಿ ಅನಂತರ ಸಾಲ ಕೇಳಿದವರಿಂದಲೇ ಹಣ ವಸೂಲಿ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.

Advertisement

ಮಹಿಳೆಯೋರ್ವರು ಇನ್‌ಸ್ಟಾಗ್ರಾಂನಲ್ಲಿ ಹಣಕಾಸು ಸಂಸ್ಥೆಯೊಂದರ ಜಾಹೀರಾತು ನೋಡಿ 25 ಲ.ರೂ. ಸಾಲಕ್ಕಾಗಿ ಸಂಪರ್ಕಿಸಿದ್ದರು. ಕೂಡಲೇ ನಕಲಿ ಸಂಸ್ಥೆಯ ಪ್ರತಿನಿಧಿಗಳು ಮಹಿಳೆಗೆ ಅಗತ್ಯ ಸಾಲ ಸೌಲಭ್ಯ ಒದಗಿಸುವುದಾಗಿ ತಿಳಿಸಿದ್ದರು. ಆಕೆಯ ವಾಟ್ಸ್‌ಆ್ಯಪ್‌ ಸಂಖ್ಯೆಯನ್ನು ಪಡೆದು ಅಗತ್ಯ ದಾಖಲೆಗಳನ್ನು ಕಳುಹಿಸುವಂತೆ ತಿಳಿಸಿದ್ದರು.

ಅದರಂತೆ ಮಹಿಳೆ ಫೋಟೋ, ದಾಖಲೆಗಳನ್ನು ಕಳುಹಿಸಿಕೊಟ್ಟಿದ್ದರು. ಆ ಬಳಿಕ ವಂಚಕರು ಮಹಿಳೆಯ ಹೆಸರಿನಲ್ಲಿ ಸಾಲ ಮಂಜೂರಾತಿ ಪತ್ರವನ್ನು ತಯಾರಿಸಿ ವಾಟ್ಸ್‌ಆ್ಯಪ್‌ ಮೂಲಕ ಕಳುಹಿಸಿಕೊಟ್ಟಿದ್ದರು. ಅದರಲ್ಲಿ ಮಹಿಳೆಯ ಫೋಟೋ ಸೇರಿದಂತೆ ಎಲ್ಲ ವಿವರಗಳು ಇದ್ದವು. ಇದರಿಂದ ಮಹಿಳೆ ಆ ಸಂಸ್ಥೆಯ ಬಗ್ಗೆ ನಂಬಿಕೆ ಇಟ್ಟರು. ಬಳಿಕ ಸಂಸ್ಥೆಯ ಪ್ರತಿನಿಧಿಗಳೆಂದು ಪರಿಚಯಿಸಿಕೊಂಡವರು ಮಹಿಳೆಗೆ 25 ಲ.ರೂ. ಸಾಲ ಮಂಜೂರಾಗಿದೆ. ಆದರೆ ಅದಕ್ಕೆ ಸಂಬಂಧಿಸಿದಂತೆ ಇನ್ಶೂರೆನ್ಸ್‌, ತೆರಿಗೆ ಸಂಬಂಧಿ ಹಣ ಪಾವತಿಸಲು ಬಾಕಿ ಇದೆ. ಇದನ್ನು ಪಾವತಿಸಿದ ಕೂಡಲೆ ಖಾತೆಗೆ 25 ಲ.ರೂ. ಜಮೆಯಾಗಲಿದೆ ಎಂದು ತಿಳಿಸಿದ್ದರು.

ಬಳಿಕ ನಾನಾ ನೆಪಗಳನ್ನು ಹೇಳಿ ಮಹಿಳೆಯಿಂದ 2.50 ಲ.ರೂ.ಗಳನ್ನು ವರ್ಗಾಯಿಸಿಕೊಂಡಿದ್ದರು. ಆದರೂ ಆಕೆಗೆ ಸಾಲದ ಮೊತ್ತವನ್ನು ಜಮೆ ಮಾಡಿರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ ಇದೊಂದು ನಕಲಿ ಸಂಸ್ಥೆಯಾಗಿದ್ದು ವಂಚನೆ ಮಾಡಿರುವುದು ಗೊತ್ತಾಗಿದೆ. ಅನಂತರ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next