Advertisement

Mangaluru: ಜನಸಾಗರವೇ ಸಂಭ್ರಮಿಸಿದ ಮಂಗಳೂರು ದಸರಾ

01:25 PM Oct 15, 2024 | Team Udayavani |

ಮಹಾನಗರ: ‘ಮಂಗಳೂರು ದಸರಾ’ ಎಂದೇ ಪಖ್ಯಾತ ಪಡೆದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ದಸರಾ ಮಹೋತ್ಸವದಲ್ಲಿ ಪೂಜಿಸಲ್ಪಟ್ಟ ಶ್ರೀ ಶಾರದಾ ಮಾತೆಯ ವಿಗ್ರಹದ ಭವ್ಯ ಶೋಭಾಯಾತ್ರೆಯಾದ ಬಳಿಕ ಸೋಮವಾರ ಮುಂಜಾನೆ ಶ್ರೀ ಕುದ್ರೋಳಿ ಕೆರೆಯಲ್ಲಿ ಜಲಸ್ತಂಭನದೊಂದಿಗೆ ಸಂಪನ್ನಗೊಂಡಿತು.

Advertisement

ಕುದ್ರೋಳಿ ಕ್ಷೇತ್ರದ ನವೀಕರಣದ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ನಡೆದ ಭವ್ಯ ಶೋಭಾಯಾತ್ರೆಯನ್ನು ಊರು-ಪರವೂರ ಲಕ್ಷಾಂತರ ಜನರು ಕಣ್ತುಂಬಿಕೊಂಡರು. ಹುಲಿವೇಷ, ಸಂಸ್ಕೃತಿ ಸಂಸ್ಕಾರದ ಸಂದೇಶ ಸಾರುವ ಒಟ್ಟು 72 ಟ್ಯಾಬ್ಲೋಗಳು, ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿತ್ತು.

ಮುಡಿ ತುಂಬ ಮಲ್ಲಿಗೆ ಮುಡಿದು, ಕರದಲ್ಲಿ ಬೆಳ್ಳಿಯ ವೀಣೆಯ ಹಿಡಿದು, ನೇರಳೆ ಬಣ್ಣದ ಸೀರೆಯ ಧರಿಸಿ ಬಗೆ ಬಗೆ ಬಂಗಾರದ ಒಡವೆಗಳಿಂದ ಸಿಂಗಾರಗೊಂಡಿದ್ದ ನಗು ಮೊಗದ-ಹೊಳಪು ಕಂಗಳ ಶಾರದೆಯನ್ನು ಕಂಡು ಭಕ್ತರು ಕೃತಾರ್ಥರಾದರು. ಶೋಭಾಯಾತ್ರೆಯುದ್ದಕ್ಕೂ ಲಕ್ಷಾಂತರ ಮಂದಿ ಭಾಗವಹಿಸಿದ್ದರು. ಮಳೆ ಹನಿಯುತ್ತಿದ್ದರೂ ನಾಲ್ಕೂ ದಿಕ್ಕುಗಳಿಂದ ಶೋಭಾಯಾತ್ರೆಗೆ ಜನಸಾಗರವೇ ಹರಿದು ಬಂತು. ಮಧ್ಯರಾತ್ರಿಯಂತು ಎಂ.ಜಿ.ರಸ್ತೆಯ ಪೂರ್ಣ ಜನವೋ ಜನ. ಅದು ದಾಖಲೆ ಎಂಬುವಷ್ಟರ ಮಟ್ಟಿಗೆ!

ಕುದ್ರೋಳಿ ದೇವಸ್ಥಾನದಿಂದ ಶ್ರೀ ಶಾರದೆ ಶೋಭಾಯಾತ್ರೆಯಲ್ಲಿ ಹೊರಟಿದ್ದು, ಮಣ್ಣಗುಡ್ಡ ಮಾರ್ಗವಾಗಿ ಲೇಡಿಹಿಲ್‌ ಶ್ರೀ ನಾರಾಯಣ ಗುರು ಸರ್ಕಲ್‌, ಲಾಲ್‌ಬಾಗ್‌, ಬಲ್ಲಾಳ್‌ಬಾಗ್‌, ಪಿವಿಎಸ್‌ ವೃತ್ತ, ಮಂಜೇಶ್ವರ ಗೋವಿಂದ ಪೈ ವೃತ್ತ, ಕೆ.ಎಸ್‌.ರಾವ್‌ ರಸ್ತೆ, ಹಂಪನಕಟ್ಟೆ, ವಿ.ವಿ. ಕಾಲೇಜು ವೃತ್ತದಿಂದ ಬಲಕ್ಕೆ ತಿರುಗಿ ಗಣಪತಿ ಹೈಸ್ಕೂಲ್‌ ಮಾರ್ಗವಾಗಿ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ ಕಾರ್‌ಸ್ಟ್ರೀಟ್‌, ಅಳಕೆಯ ಮೂಲಕ ಸಾಗಿತು. ಈ ಬಾರಿ ಮಂಗಳೂರು ದಸರಾ ಶೋಭಾಯಾತ್ರೆಯಲ್ಲಿ ಡಿಜೆಗೆ ಅನುಮತಿ ಇಲ್ಲ ಎಂದು ಕ್ಷೇತ್ರಾಡಳಿತ ಸಮಿತಿ ಹಾಗೂ ಪೊಲೀಸ್‌ ಇಲಾಖೆ ತಿಳಿಸಿತ್ತು. ಆದರೂ ಒಂದೆರಡು ಡಿಜೆ ಇದ್ದ ಟ್ಯಾಬ್ಲೋ ಶೋಭಾಯಾತ್ರೆಯಲ್ಲಿ ಕಾಣಿಸಿದ್ದು ಸಾರ್ವಜನಿಕವಾಗಿ ಚರ್ಚೆಗೆ ಕಾರಣವಾಗಿದೆ.

Advertisement

ಭಕ್ತರ ಸಹಕಾರದಿಂದ ಯಶಸ್ವಿ
ಈ ಬಾರಿಯ ಮಂಗಳೂರು ದಸರಾ ಶೋಭಾಯಾತ್ರೆಗೆ ಊರ-ಪರವೂರಿನ ಲಕ್ಷಾಂತರ ಮಂದಿ ಭಾಗಿಯಾಗಿದ್ದಾರೆ. ಶೋಭಾಯಾತ್ರೆ ನಿಗದಿತ ಸಮಯದಂತೆ, ವಿಳಂಬವಾಗದೆ ವ್ಯವಸ್ಥಿತವಾಗಿ ನಡೆದಿದೆ. ಸಾರ್ವಜನಿಕರ, ಭಕ್ತರ ಸಹಕಾರದಿಂದ ಸಂಪೂರ್ಣ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ.
-ಎಚ್‌.ಎಸ್‌. ಸಾಯಿರಾಂ, ಅಧ್ಯಕ್ಷರು, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ

ಈ ಬಾರಿ ಭಕ್ತರ ಸಂಖ್ಯೆ ದಾಖಲೆ
ಶೋಭಾಯಾತ್ರೆಯಲ್ಲಿ ಈ ಬಾರಿ ದಾಖಲೆಯ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಯ ರೂವಾರಿ ಬಿ.ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಕಾರ್ಯ ಕ್ರಮ ಸಾಂಗವಾಗಿ ನಡೆದಿದೆ. ಸ್ವಯಂಸೇವಕರು, ಪೊಲೀಸ್‌ ಇಲಾಖೆ ಸಹಿತ ವಿವಿಧ ನೆಲೆಯಲ್ಲಿ ಜನರು ಅಭೂತಪೂರ್ವ ವಾಗಿ ಸ್ಪಂದಿಸಿದ ಕಾರಣದಿಂದ ಯಶಸ್ಸಾಗಿದೆ.
-ಪದ್ಮರಾಜ್‌ ಆರ್‌. ಪೂಜಾರಿ, ಕೋಶಾಧಿಕಾರಿ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ

ಹಲವೆಡೆ ಟ್ರಾಫಿಕ್‌ ಜಾಮ್‌
ದಸರಾ ಶೋಭಾಯಾತ್ರೆ ಹಿನ್ನೆಲೆಯಲ್ಲಿ ನಂತೂರು, ಎಂ.ಜಿ. ರಸ್ತೆ, ಕುಂಟಿಕಾನ, ಕುದ್ರೋಳಿ, ಬಿಜೈ, ಮಣ್ಣಗುಡ್ಡೆ, ಲಾಲ್‌ಬಾಗ್‌, ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಸಹಿತ ನಗರದ ಹಲವು ಕಡೆಗಳಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

ಬೆಳಗ್ಗೆಯಿಂದಲೇ ಸ್ವತ್ಛತ ಕಾರ್ಯ
ದಸರಾ ಶೋಭಾಯಾತ್ರೆ ತೆರಳಿದ ರಸ್ತೆಯುದ್ದಕ್ಕೂ ಪ್ಲಾಸ್ಟಿಕ್‌ ವಸ್ತುಗಳ, ಐಸ್‌ಕ್ರೀಂ ಕಪ್‌, ನೀರಿನ ಬಾಟಲಿ ಸಹಿತ ತ್ಯಾಜ್ಯಗಳು ರಾಶಿ ಬಿದ್ದಿದ್ದವು. ಮಂಗಳೂರು ಪಾಲಿಕೆ ಸ್ವತ್ಛತ ಕಾರ್ಮಿಕರು ಸೋಮವಾರ ಬೆಳಗ್ಗೆಯಿಂದಲೇ ನಗರದ ಸ್ವತ್ಛತೆ ಮಾಡುವ ಮೂಲಕ ಗಮನಸೆಳೆದರು.

ಸಂಜೆ 4.15ರಿಂದ ಮುಂಜಾನೆ 3.20ರವರೆಗೆ!
ಶೋಭಾಯಾತ್ರೆಯು ರವಿವಾರ ಸಂಜೆ 4.15ಕ್ಕೆ ಕುದ್ರೋಳಿಯಿಂದ ಪ್ರಾರಂಭವಾಯಿತು. ಸಂಜೆ 6.31ರ ಸುಮಾರಿಗೆ ಶಾರದೆಯನ್ನು ಮಂಟಪದಿಂದ ಹೊರಗೆ ತರಲಾಯಿತು. ರಸ್ತೆಯ ಇಕ್ಕೆಲಗಳಲ್ಲಿ ಮನೆ-ಅಂಗಡಿಯ ವಿಶೇಷ ಪೂಜೆ ಸ್ವೀಕರಿಸುತ್ತ ಶಾರದೆ ಇದ್ದ ವಾಹನ ರಾತ್ರಿ 9.55ರ ಸುಮಾರಿಗೆ ಲೇಡಿಹಿಲ್‌ ನಾರಾಯಣ ಗುರು ಸರ್ಕಲ್‌ಗೆ ತಲುಪಿದೆ. ಎಂ.ಜಿ.ರಸ್ತೆ ಮೂಲಕ ಸಾಗಿ ರಾತ್ರಿ 12.10ರ ಸುಮಾರಿಗೆ ಪಿವಿಎಸ್‌ ತಲುಪಿತು. ಮುಂಜಾನೆ 3.20ಕ್ಕೆ ಶಾರದಾ ಮಾತೆಯ ಶೋಭಾಯಾತ್ರೆ ಶ್ರೀ ಕ್ಷೇತ್ರ ಕುದ್ರೋಳಿಗೆ ವಾಪಾ ಸಾಗಿದೆ. ಕಲಾತಂಡಗಳಿಗೆ ಗೌರವ ಸಲ್ಲಿಸಿ ಶಾರದೆಯ ಜಲಸ್ತಂಭನ ವಾಗುವಾಗ ಸೋಮವಾರ ಬೆಳಗ್ಗೆ 7.15 ಆಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next